ಬೆಂಗಳೂರು[ಡಿ.31]: ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ರಾಜ್ಯದಲ್ಲಿ ಅಭಿಯಾನ ಕೈಗೊಂಡು ಜನರು ಸ್ವತಃ ಕೈಯಿಂದ ಬರೆದು ಸಹಿ ಮಾಡಿರುವ ಒಂದು ಕೋಟಿ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿಕೊಡಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಜನತೆಯನ್ನು ದಾರಿತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ಕಾಯ್ದೆಯ ಬಗ್ಗೆ ಸತ್ಯಾಂಶವನ್ನು ತಿಳಿಸಿಕೊಡಲು ಅಭಿಯಾನ ಕೈಗೊಂಡು, ಒಂದು ಕೋಟಿ ಪತ್ರದಲ್ಲಿ ಸಹಿ ಸಂಗ್ರಹಿಸಿ ಪ್ರಧಾನಿಗಳಿಗೆ ಕಳುಹಿಸಿಕೊಡಲಾಗುವುದು. ಪೌರತ್ವದ ಪರವಾಗಿದ್ದೇವೆ ಎಂದು ಸ್ವತಃ ಕೈಯಿಂದ ಬರೆದು ಸಹಿ ಮಾಡಿರುವ ಪತ್ರವನ್ನು ರವಾನಿಸಲಾಗುವುದು ಎಂದರು.

ಜ.1ರಿಂದ ಪ್ರತಿ ಬೂತ್‌ನಲ್ಲಿ 100 ಮನೆಗಳನ್ನು ಸಂಪರ್ಕಿಸಲಾಗುವುದು. ಹೋಬಳಿ, ವಾರ್ಡ್‌, ವಿಧಾನಸಭಾ ಕ್ಷೇತ್ರ, ಜಿಲ್ಲೆ ಮತ್ತು ರಾಜ್ಯದ ಪ್ರಮುಖ ಕೇಂದ್ರದಲ್ಲಿ ಸಭೆಗಳನ್ನು ಮಾಡಲಾಗುವುದು. 15 ದಿನದೊಳಗೆ ಈ ಕೆಲಸಗಳನ್ನು ಮಾಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸುವವರಿಗೆ ದಿಟ್ಟಉತ್ತರ ನೀಡಲಾಗುವುದು. ಅಲ್ಲದೇ, ಬೆಂಗಳೂರು, ಮೈಸೂರು, ಮಂಗಳೂರು, ಕಲಬುರಗಿ, ಹುಬ್ಬಳ್ಳಿ, ಸೇರಿದಂತೆ ಜಿಲ್ಲಾ ಮಟ್ಟದಲ್ಲಿ 10 ಸಾವಿರ ಜನರನ್ನು ಸೇರಿಸಿ ರಾರ‍ಯಲಿ ನಡೆಸಿ ಪೌರತ್ವದ ಮಹತ್ವದ ಬಗ್ಗೆ ತಿಳಿಸಿಕೊಡಲಾಗುವುದು ಎಂದು ತಿಳಿಸಿದರು.

ದೇಶದಲ್ಲಿ ಪ್ರತಿಪಕ್ಷಗಳು ಅಲ್ಪಸಂಖ್ಯಾತರನ್ನು ಬಡಿದೆಬ್ಬಿಸುವಂತಹ ಕೆಲಸ ಮಾಡುತ್ತಿವೆ. ತಪ್ಪು ಕಲ್ಪನೆಯನ್ನು ಬಿತ್ತಿ ಹಿಂಸಾತ್ಮಕ ಹೋರಾಟಕ್ಕೆ ಪ್ರಚೋದನೆ ನೀಡುತ್ತಿವೆ. ಪೌರತ್ವ ಕಾಯ್ದೆ ಪರ ಶೇ.90ರಷ್ಟುಇದ್ದು, ಶೇ.10ರಷ್ಟುಮಾತ್ರ ವಿರೋಧ ಇದೆ. ಪಕ್ಷದ ಶಾಸಕರು, ಸಂಸದರು, ಚುನಾಯಿತ ಪ್ರತಿನಿಧಿಗಳು ಪೌರತ್ವ ಕಾಯ್ದೆಯಿಂದ ಲಾಭ, ಯಾರಿಗೆ ನಷ್ಟಎಂಬುದರ ಸತ್ಯವನ್ನು ಜನತೆಗೆ ತಿಳಿಸಬೇಕು ಎಂಬುದಾಗಿ ತಿಳಿಸಲಾಗಿದೆ.

ದೇಶದಲ್ಲಿ ಮುಸ್ಲಿಮರಿಗೆ ಮಸೀದಿ, ಕ್ರೈಸ್ತರಿಗೆ ಚಚ್‌ರ್‍ಗಳನ್ನು ಕಟ್ಟಿಕೊಟ್ಟಿದ್ದೇವೆ. ಯಹೂದಿ, ಟಿಬೆಟಿಯನ್ನರು, ಪಾರ್ಸಿಗಳು ಬಂದರೂ ಸ್ವಾಗತಿಸಲಾಗಿದೆ. ಇದೀಗ ಪಾಕಿಸ್ತಾನ, ಅಷ್ಘಾನಿಸ್ತಾನ, ಬಾಂಗ್ಲಾದೇಶಕ್ಕೆ ಹೋಗಿ ಹಿಂಸೆ ಅನುಭವಿಸಿ ವಾಪಸ್‌ ಬರುವ ನಮ್ಮವರಿಗೆ ಪೌರತ್ವ ನೀಡಬೇಕಾಗಿದೆ. ಇದರಿಂದ ಯಾರಿಗೂ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದರು.