ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ, ಹೃದಯಾಘಾತದಿಂದ ಪತಿ ಶಶಿಧರ್ (40) ಮೃತಪಟ್ಟ ಸುದ್ದಿ ತಿಳಿದು, ಅವರ ಪತ್ನಿ ಸರೋಜಾ (35) ಕೂಡ ತೀವ್ರ ಆಘಾತದಿಂದ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. 15 ವರ್ಷಗಳ ಕಾಲ ಅನ್ಯೋನ್ಯವಾಗಿದ್ದ ದಂಪತಿ ಸಾವಿನಲ್ಲೂ ಒಂದಾಗಿದ್ದು, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಬೀಳಗಿ, (ನ. 4): ಗಂಡನ ಹಿಂದೆ ಹೆಂಡತಿ ನಡೆದರೆ, ಅವನ ಪುಣ್ಯ ಅವಳಿಗೂ ಸೇರುತ್ತದೆ ಎಂಬ ನಂಬಿಕೆ ಇಟ್ಟಿದ್ದರೋ ಎಂಬಂತೆ ಗಂಡನ ಸಾವಿನ ಸುದ್ದಿ ತಿಳಿದು ಪತ್ನಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ.

ಹದಿನೈದು ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿ

ಶಶಿಧರ (40) ಸರೋಜಾ(35) ಸಾವಿನಲ್ಲೂ ಒಂದಾದ ದಂಪತಿ. ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಸಾವು. ಚಿನ್ನದ ಅಂಗಡಿ ನಡೆಸುತ್ತಿದ್ದ ಶಶಿಧರ ಹದಿನೈದು ವರ್ಷಗಳ ಹಿಂದೆ ಸರೋಜಾಳನ್ನ ಮದುವೆಯಾಗಿದ್ದ. ಮದುವೆಯಾದಾಗಿನಿಂದಲೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಯಿಂದ ಇದ್ದರು. ಪ್ರೀತಿಗೆ ಸಾಕ್ಷಿ ಎಂಬಂತೆ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ: ಭದ್ರಾವತಿಯಲ್ಲಿ ಹೃದಯ ವಿದ್ರಾವಕ ಘಟನೆ: ಮಾಲೀಕನ ಶವ ಕಂಡು ಶ್ವಾನವೂ ನಿಧನ, ಒಟ್ಟಿಗೆ ಅಂತ್ಯಕ್ರಿಯೆ!

ಸಾವಿನಲ್ಲೂ ಪತಿಯ ಹಿಂದೆ ನಡೆದ ಪತ್ನಿ!

ಶಶಿಧರಗೆ ಹೃದಯಾಘಾತ ಸಂಭವಿಸಿದೆ ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದ ಕುಟುಂಬಸ್ಥರು. ಆದರೆ ಚಿಕಿತ್ಸೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಇತ್ತ ಮನೆಯಲ್ಲೇ ಇದ್ದ ಪತ್ನಿ ಸರೋಜಾಗೆ ಪತಿ ಮೃತಪಟ್ಟಿರುವ ಸುದ್ದಿ ತಿಳಿದು ಆಘಾತಗೊಂಡು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಪತಿಯ ಸಾವು ಅರಗಿಸಿಕೊಳ್ಳದೇ ಸಾವಿನಲ್ಲೂ ಪತಿಯ ಹಿಂದೆ ನಡೆದಿದ್ದಾಳೆ. ಈ ಘಟನೆಯಿಂದ ಬಿಳಗಿ ಪಟ್ಟಣದ ಜನರು ಕಂಬನಿ ಮಿಡಿದಿದ್ದಾರೆ. ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ.