Asianet Suvarna News Asianet Suvarna News

ಮಲಗುಂಡಿ ಸ್ವಚ್ಛಕ್ಕೆ ಮನುಷ್ಯರ ಬಳಸಿದವರಿಗೆ ಶಿಕ್ಷೆ ಏಕಿಲ್ಲ?: ಹೈಕೋರ್ಟ್‌

ನ್ಯಾಯಾಲಯದಲ್ಲಿ ಇಂತಹ ಪ್ರಕರಣಗಳನ್ನು ಕಳಪೆಯಾಗಿ ನಿರ್ವಹಿಸಿದ ಸರ್ಕಾರಿ ಅಭಿಯೋಜಕರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ? ಇಂತಹ ಪ್ರಕರಣಗಳನ್ನು ತಡೆಯಲು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಸರ್ಕಾರದಿಂದ ಏಕೆ ಆಗುವುದಿಲ್ಲ? ಸರ್ಕಾರದ ಕಾರ್ಯ ದರ್ಶಿಗೆ ಶಿಕ್ಷೆ ವಿಧಿಸದಿದ್ದರೆ ಏನೂ ಸುಧಾರಣೆಯಾಗುವುದಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದ ಹೈಕೋರ್ಟ್‌ 

Why No Punishment for those who use Humans to Toilet Clean Says High Court of Karnataka grg
Author
First Published Jan 9, 2024, 12:00 PM IST

ಬೆಂಗಳೂರು(ಜ.09):  ನಿಷೇಧದ ಹೊರತಾಗಿಯೂ ರಾಜ್ಯದಲ್ಲಿ ಮಲ ಗುಂಡಿ ಸ್ವಚ್ಛಗೊಳಿಸಲು ಮಾನವರನ್ನು ಬಳಕೆ ಮಾಡಿದವರ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ ಯಾವೊಬ್ಬ ಆರೋಪಿಗೆ ಶಿಕ್ಷೆಯಾಗದಿ ರುವುದು ನಿಜಕ್ಕೂ ನ್ಯಾಯದ ವಿಡಂಬನೆಯಾಗಿದೆ ಎಂದು ಹೈಕೋರ್ಟ್ ಸೋಮವಾರ ಕಟುವಾಗಿ ನುಡಿದಿದೆ.

ರಾಜ್ಯದಲ್ಲಿ ಮಲಗುಂಡಿ ಸ್ವಚ್ಛಗೊಳಿಸಲು ಮನುಷ್ಯರನ್ನು ಬಳಕೆ ಮಾಡುವ ಪದ್ಧತಿ ಜೀವಂತವಾಗಿರುವ ಕುರಿತಂತೆ ಮಾಧ್ಯಮಗಳ ವರದಿ ಆಧರಿಸಿ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಅತೀವ ಬೇಸರ ವ್ಯಕ್ತಪಡಿಸಿತು. ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ, 2013ರಲ್ಲಿ ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆ ತರಲಾಗಿದೆ. ಮಲಗುಂಡಿ ಶುಚಿಗೆ ಮಾನವರನ್ನು ಬಳಕೆ ಮಾಡಿದ ಪ್ರಕರಣದಲ್ಲಿ ಈವರೆಗೂ ಯಾವೊಬ್ಬ ಆರೋಪಿಗೆ ಏಕೆ ಶಿಕ್ಷೆಯಾಗಿಲ್ಲ? ಮಹತ್ವ ಇಲ್ಲದ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತದೆ. ಇಂತಹ ಒಂದೇ ಒಂದು ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾಗಿಲ್ಲ ಎಂದರೆ ಹೇಗೆ? ಇದು ನಿಜಕ್ಕೂ ನ್ಯಾಯದ ಅಪಹಾಸ್ಯವಾಗಿದೆ. ಮಲ ಹೊರುವುದಕ್ಕೆ ಪರಿಶಿಷ್ಟ ಜಾತಿಯ ಜನರನ್ನು ಬಳಕೆ ಮಾಡಿದರೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಅವಕಾಶವಿದ್ದರೂ ಅದನ್ನು ಬಳಕೆ ಮಾಡುವುದಿಲ್ಲ, ಇದಕ್ಕೆ ಪರಿಹಾರ ಏನು ಎಂದು ಕೇಳಿತು.

ಕೆಆರ್‌ಎಸ್‌ ಡ್ಯಾಂ ಸುತ್ತ 20 ಕಿಮೀ ವ್ಯಾಪ್ತಿಯಲ್ಲಿ ಗಣಿ ಬಂದ್‌..!

ನ್ಯಾಯಾಲಯದಲ್ಲಿ ಇಂತಹ ಪ್ರಕರಣಗಳನ್ನು ಕಳಪೆಯಾಗಿ ನಿರ್ವಹಿಸಿದ ಸರ್ಕಾರಿ ಅಭಿಯೋಜಕರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ? ಇಂತಹ ಪ್ರಕರಣಗಳನ್ನು ತಡೆಯಲು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಸರ್ಕಾರದಿಂದ ಏಕೆ ಆಗುವುದಿಲ್ಲ? ಸರ್ಕಾರದ ಕಾರ್ಯ ದರ್ಶಿಗೆ ಶಿಕ್ಷೆ ವಿಧಿಸದಿದ್ದರೆ ಏನೂ ಸುಧಾರಣೆ ಯಾಗುವುದಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿತು. ಅಂತಿಮವಾಗಿ ಮಲಹೊರುವ ಪದ್ಧತಿಯಲ್ಲಿ ತೊಡಗಿರುವವರಿಗೆ ಪುನರ್ವಸತಿ ಕಲ್ಪಿಸಬೇಕು. ಮಲಗುಂಡಿ ಸ್ವಚ್ಛತೆಗೆ ತಂತ್ರಜ್ಞಾನ ಬಳಕೆ ಮಾಡ ಬೇಕು. ಈ ಕುರಿತು ಸರ್ಕಾರ ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳು ಗಮನಹರಿಸಬೇಕು. ರಾಜ್ಯದಲ್ಲಿ ಮಲಗುಂಡಿ ಸ್ವಚ್ಛತೆಗೆ ಯಂತ್ರೋ ಪಕರಣಗಳ ಉಪಯೋಗ ಯಾವ ಪ್ರಮಾ ಣದಲ್ಲಿ ಇದೆ, ಮಲ ಹೊರುವ ಪದ್ಧತಿ ನಿಷೇಧ ನಿಯಮಗಳ ಜಾರಿಗೆ ಯಾವೆಲ್ಲಾ ಕ್ರಮಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಲಾಗಿದೆ.

ಇದಕ್ಕೂ ಮುನ್ನ ಅಮಿಕಸ್ ಕ್ಯೂರಿ (ಕೋರ್ಟ್ ಸಹಾಯಕರು) ಶ್ರೀಧರ್‌ಪ್ರಭು, 2023ರ ಡಿ.23ರಂದು ಮಲಗುಂಡಿ ಸ್ವಚ್ಛಗೊಳಿಸುವಾಗ ಕಾರ್ಮಿಕರು ಮೃತಪಟ್ಟ ಪ್ರಕರಣದಲ್ಲಿ ಆರೋಪಿತರ ವಿರುದ್ಧ ಎಸ್ಸಿ-ಎಸ್ಟಿ ಕಾಯ್ದೆಯ ಸೆಕ್ಷನ್ 3 (ಜೆ) ಅನ್ವಯಿಸಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಸರ್ಕಾರದ ಪರ ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹಂತ ಹಂತವಾಗಿ ಮಲ ಸ್ವಚ್ಛತೆಗೆ ಯಂತ್ರಗಳ ಖರೀದಿ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ ಎಂದು ವಿವರಿಸಿದರು.

Latest Videos
Follow Us:
Download App:
  • android
  • ios