ನನ್ನ ಮೇಲೆ ಇ.ಡಿ. ಕೇಸು ಹಾಕಿಲ್ಲ: ಸಿಎಂ ಸಿದ್ದರಾಮಯ್ಯ
ಬಿಜೆಪಿಯವರು ರಾಜಕೀಯ ದ್ವೇಷಕ್ಕಾಗಿ ಸಿಬಿಐ, ಇ.ಡಿ.ಯನ್ನು ದುರ್ಬಳಕೆ ಮಾಡಿಕೊಂಡರು. ಯಾರ್‍ಯಾರ ಮೇಲೆ ಕೇಸು ಹಾಕಿದ್ದಾರೆ ಎಂಬುದನ್ನು ನೀವೂ ನೋಡಿದ್ದೀರಿ ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು (ಅ.18): ಬಿಜೆಪಿಯವರು ರಾಜಕೀಯ ದ್ವೇಷಕ್ಕಾಗಿ ಸಿಬಿಐ, ಇ.ಡಿ.ಯನ್ನು ದುರ್ಬಳಕೆ ಮಾಡಿಕೊಂಡರು. ಯಾರ್‍ಯಾರ ಮೇಲೆ ಕೇಸು ಹಾಕಿದ್ದಾರೆ ಎಂಬುದನ್ನು ನೀವೂ ನೋಡಿದ್ದೀರಿ ಎಂದು ಸಿದ್ದರಾಮಯ್ಯ ಹೇಳಿದರು. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯ ರೆಡ್ಡಿ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ನಿಮ್ಮ ಮೇಲೂ ಕೇಸು ಹಾಕಿದರು ಎಂದು ಮಹಿಳೆಯೊಬ್ಬರು ಕೂಗಿದಾಗ, ‘ಇಲ್ಲಮ್ಮ ನನ್ನ ಮೇಲೆ ಕೇಸು ಹಾಕಿಲ್ಲ. ನಾಗೇಂದ್ರ ಏನು ಹೇಳಿದರು ಎಂದು ಕೇಳಿದ್ರಲ್ಲ. ಸರ್ಕಾರ ಅಸ್ಥಿರಗೊಳಿಸಲು ಇ.ಡಿ. ದುರ್ಬಳಕೆ ಮಾಡಿಕೊಳ್ತಿದಾರೆ. ನನ್ನ ಮೇಲೆ ಕೇಸು ಹಾಕಿಲ್ಲ’ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಸುಳ್ಳು ಹೇಳಲ್ಲ: ಕಾಂಗ್ರೆಸ್ ಪಕ್ಷ ಸುಳ್ಳು ಹೇಳಲ್ಲ. ಕೊಟ್ಟ ಮಾತು ಮರೆಯಲ್ಲ. ನಮ್ಮ ಸರ್ಕಾರ ಎಲ್ಲಾ ಭರವಸೆ ಈಡೇರಿಸುವ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ತೊರೆಕಾಡನಹಳ್ಳಿಯಲ್ಲಿ ಬುಧವಾರ ಬೆಂಗಳೂರಿನ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆಗೊಳಿಸಿ ಮಾತನಾಡಿದರು. ನಾವು ಹೇಳಿದ್ದನ್ನು ಮಾಡೇ ಮಾಡುತ್ತೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲೇ ಎಲ್ಲಾ ಗ್ಯಾರಂಟಿ ಅನುಷ್ಠಾನಗೊಳಿಸಿದ್ದೇವೆ. ಜನರಿಗೆ ಮೂಲಭೂತ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿದೆ ಎಂದರು.
ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ಖರ್ಚಾಗುತ್ತಿದೆ. ಈ ಗ್ಯಾರಂಟಿಗಳನ್ನು ಪ್ರಧಾನಿ ಮೋದಿ ಸೇರಿ ಬಿಜೆಪಿಯವರು ಟೀಕೆ ಮಾಡಿದ್ದರು. ಆದರೆ, ಬಜೆಟ್‌ನಲ್ಲೂ ಗ್ಯಾರಂಟಿಗಳಿಗೆ ಅನುದಾನ ಮೀಸಲಿಡಲಾಗಿದೆ ಎಂದರು. ವಿಪಕ್ಷಗಳು ಸುಮ್ಮನೇ ಅಪಪ್ರಚಾರ ಮಾಡುತ್ತಾರೆ. ಅಭಿವೃದ್ಧಿ ಕೆಲಸ ನಿಂತು ಹೋಗುತ್ತವೆ ಅಂತಾರೆ. ಎತ್ತಿನಹೊಳೆ ಯೋಜನೆ ನಾವು ಮಾಡಿದ್ದು, ಇದು ಅಭಿವೃದ್ಧಿ ಕೆಲಸ ಅಲ್ವಾ?. ಈ ಸರ್ಕಾರ ಇರುವವರೆಗೂ ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿಯನ್ನು ನಾವು ಮಾಡುತ್ತೇವೆ ಎಂದರು.
ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಉಪಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭ
ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿದೆ. ಆ ನಗರಕ್ಕೆ ಮೂಲ ಸೌಕರ್ಯ ಕಲ್ಪಿಸುವುದು ಪ್ರತಿ ಸರ್ಕಾರದ ಜವಾಬ್ದಾರಿ. ಪೆರಿಪರಲ್ ರಿಂಗ್ ರೋಡ್ ಯೋಜನೆ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಟನಲ್ ಸಿಸ್ಟಂ ತರಲು ಪ್ರಯತ್ನ ನಡೆಸಲಾಗುತ್ತಿದೆ ಎಂದರು. ಇಡೀ ಬೆಂಗಳೂರಿಗೆ ಶುದ್ಧ ಕುಡಿಯುವ ನೀರು ಕೊಡುತ್ತೇವೆ. 6ನೇ ಹಂತದ ಯೋಜನೆಯಿಂದ 500 ಎಂಎಲ್‌ಡಿ ನೀರು ಸಿಗಲಿದೆ ಎಂದರು. ಇದೇ ವೇಳೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಮನವಿ ಮೇರೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಮಳವಳ್ಳಿಗೆ ವಿಶೇಷ ಅನುದಾನದ ಭರವಸೆ ನೀಡಿದರು.