ಕೆಆರ್‌ಎಸ್‌ ಪ್ರದೇಶದಲ್ಲಿ ಗಣಿಗಾರಿಕೆಯಿಂದ ಜಲಾಶಯಕ್ಕೆ ಆಪತ್ತು ಒದಗಲಿದೆ. ಈಗಾಗಲೇ ಜಲಾಶಯ ಸುತ್ತಲಿನ ಭಾಗಗಳಲ್ಲಿ ಗಣಿಗಾರಿಕೆ ಚಟುವಟಿಕೆಗಳಿಂದ ಹಲವು ಬಾರಿ ದೊಡ್ಡ ಶಬ್ದ ಕೇಳಿ ಬಂದಿವೆ. ಆದ್ದರಿಂದ ಗಣಿಗಾರಿಕೆ ನಡೆಸಿದರೆ ಜಲಾಶಯಕ್ಕೆ ಗಂಭೀರ ಪರಿಣಾಮ ಉಂಟಾಗಲಿದೆ. 

ಬೆಂಗಳೂರು(ಜ.09): ಗಣಿಗಾರಿಕೆಯಿಂದ ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯಕ್ಕೆ (ಕೆಆರ್‌ಎಸ್‌) ಅಪಾಯವಿರುವ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌, ಕೆಆರ್‌ಎಸ್‌ ಸುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಗಣಿಗಾರಿಕೆ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿ ಸೋಮವಾರ ಮಹತ್ವದ ಆದೇಶ ಹೊರಡಿಸಿದೆ.

ತಮ್ಮ ಜಮೀನಿನಲ್ಲಿ ಗಣಿಗಾರಿಕೆ ನಡೆಸಲು ಹಲವು ಷರತ್ತು ವಿಧಿಸಿ ಅನುಮತಿ ನೀಡಿದ್ದ ಜಿಲ್ಲಾಧಿಕಾರಿಯ ಕ್ರಮ ಪ್ರಶ್ನಿಸಿ ಮಂಡ್ಯ ಜಿಲ್ಲೆಯ ಚಿನಕುರಳಿ ಗ್ರಾಮದ ಸಿ.ಜಿ.ಕುಮಾರ್ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿವರ್ತಿಸಿಕೊಂಡ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಚಾಮರಾಜನಗರ: ಕ್ರಷರ್‌ ಮಾಲೀಕರ ಮುಲಾಜಿನಲ್ಲಿ ಚೆಕ್‌ಪೋಸ್ಟ್‌..!

ಕೆಆರ್‌ಎಸ್‌ ಪ್ರದೇಶದಲ್ಲಿ ಗಣಿಗಾರಿಕೆಯಿಂದ ಜಲಾಶಯಕ್ಕೆ ಆಪತ್ತು ಒದಗಲಿದೆ. ಈಗಾಗಲೇ ಜಲಾಶಯ ಸುತ್ತಲಿನ ಭಾಗಗಳಲ್ಲಿ ಗಣಿಗಾರಿಕೆ ಚಟುವಟಿಕೆಗಳಿಂದ ಹಲವು ಬಾರಿ ದೊಡ್ಡ ಶಬ್ದ ಕೇಳಿ ಬಂದಿವೆ. ಆದ್ದರಿಂದ ಗಣಿಗಾರಿಕೆ ನಡೆಸಿದರೆ ಜಲಾಶಯಕ್ಕೆ ಗಂಭೀರ ಪರಿಣಾಮ ಉಂಟಾಗಲಿದೆ. ಆದರೆ ಕೆಆರ್‌ಎಸ್ ಜಲಾಶಯ ಸಂರಕ್ಷಣೆಗೆ ಸರಿಯಾದ ಪ್ರಯತ್ನಗಳು ನಡೆಯುತ್ತಿಲ್ಲ. ಆದ್ದರಿಂದ ಧನಬಾದ್‌ನಲ್ಲಿರುವ ಭಾರತೀಯ ಗಣಿ, ಇಂಧನ ಸಂಶೋಧನೆ, ಅಣೆಕಟ್ಟು ಸುರಕ್ಷತಾ ಸಂಸ್ಥೆಯಿಂದ ಜಲಾಶಯ ಮತ್ತು ಸುತ್ತಲಿನ ಭಾಗದಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸುವ ಕುರಿತಂತೆ ವೈಜ್ಞಾನಿಕ ಸಮೀಕ್ಷೆ ನಡೆಯುವ ಅಗತ್ಯವಿದೆ ಎಂದು ನ್ಯಾಯಪೀಠ ತಿಳಿಸಿತು.

ಈ ಸಂಸ್ಥೆಯಿಂದ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಆರು ತಿಂಗಳು ಸಮಯ ಬೇಕೆಂದು ಸರ್ಕಾರ ಹೇಳಿದೆ. ಹಾಗಾಗಿ, ವರದಿ ಸಲ್ಲಿಕೆಯಾಗುವವರೆಗೂ ಹಾಗೂ ನ್ಯಾಯಾಲಯದ ಮುಂದಿನ ಆದೇಶದವರೆಗೂ ಕೆಆರ್‌ಎಸ್‌ ಸುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಗಣಿಗಾರಿಕೆ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಚಿತ್ರದುರ್ಗ: ಮೈನ್ಸ್ ಲಾರಿಗಳ ಹಾವಳಿಯಿಂದ ಬೇಸತ್ತು ಬೀದಿಗಳಿದ ಗ್ರಾಮಸ್ಥರು

ನಾಡಿಗೆ ವಿಪತ್ತು:

ಕೆಆರ್‌ಎಸ್‌ ಕೇವಲ ಜಲಾಶಯವಲ್ಲ. ರಾಜ್ಯದ ಇತಿಹಾಸ ಹಾಗೂ ಪರಂಪರೆಯ ಪ್ರತೀಕ. ಜಲಾಶಯ ನಿರ್ಮಾಣಕ್ಕೆ ಮೈಸೂರು ರಾಜವಂಶದ ಮಹಾರಾಜ ನಾಲ್ವಡಿ ಕೃಷ್ಣರಾಜ್‌ ಒಡೆಯರ್‌ ಮತ್ತು ದೇಶದ ಹೆಮ್ಮೆಯ ಪುತ್ರ ಸರ್.ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆಯಿದೆ. ರಾಜ್ಯದ ಜನರು ತಮ್ಮ ರಕ್ತ ಹಾಗೂ ಬೆವರು ಹರಿಸಿ ಕೆಆರ್‌ಎಸ್‌ ನಿರ್ಮಿಸಿದ್ದಾರೆ. ಜಲಾಶಯ ಸುತ್ತ ಗಣಿಗಾರಿಕೆ ನಡೆದರೆ, ಅದರಿಂದ ಕೇವಲ ಜಲಾಶಯಕ್ಕೆ ಅಪಾಯ ಬಂದೊದಗುವುದಿಲ್ಲ.ಇಡೀ ನಾಡಿಗೆ ದುರಂತ ಮತ್ತು ಗಂಭೀರ ಆಪತ್ತು ತಂದೊಡ್ಡಬಹುದು. ಆದ್ದರಿಂದ ಜಲಾಶಯಕ್ಕೆ ಧಕ್ಕೆಯಾಗುವ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣದ ವಿವರ:

ತಮ್ಮ ಜಮೀನಿನಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡುವಂತೆ ಕೋರಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿ ಪರಿಶೀಲನೆ ನಡೆಸಿದ ಮಂಡ್ಯ ಜಿಲ್ಲಾಧಿಕಾರಿಗಳು ಹಲವು ಷರತ್ತುಗಳೊಂದಿಗೆ ಅನುಮತಿ ನೀಡಿದ್ದರು. ಆ ಅನುಮತಿಯು ಕಾವೇರಿ ನೀರಾವರಿ ನಿಗಮದಿಂದ ನಡೆಯುವ ಪರೀಕ್ಷಾರ್ಥ ಸ್ಫೋಟದ ನಂತರ ಸಲ್ಲಿಕೆಯಾಗುವ ವರದಿ ಪರಿಶೀಲಿಸಿ ಸಕ್ಷಮ ಪ್ರಾಧಿಕಾರ ಕೈಗೊಳ್ಳಬಹುದಾದ ನಿರ್ಧಾರಗಳಿಗೆ ಬದ್ಧರಾಗಿರಬೇಕು. ಆ ವರದಿ ಬರುವವರೆಗೂ ಅರ್ಜಿದಾರರು ತಮ್ಮ ಪರಿವರ್ತಿತ ಜಮೀನಿನಲ್ಲಿ ಉದ್ದೇಶಿತ ಬಳಕೆಗೆ ಉಪಯೋಗ ಮಾಡಿಕೊಳ್ಳಲು ಯಾವುದೇ ಅವಕಾಶವಿರುವುದಿಲ್ಲವೆಂದು ಷರತ್ತು ವಿಧಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದ ಅರ್ಜಿದಾರರು, ಜಿಲ್ಲಾಧಿಕಾರಿಗಳ ವಿಧಿಸಿರುವ ಷರತ್ತು ರದ್ದುಗೊಳಿಸಬೇಕು ಎಂದು ಕೋರಿದ್ದರು.