ಖಾಸಗಿ ಶಾಲೆಗಳಲ್ಲಿ ಡಿಜಿಟಲ್‌ ಬೋರ್ಡ್‌ಗಳಿರುವ ಇಂದಿನ ಸಮಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಹೆಣ್ಣು ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸದಿರುವುದು ನಾಚಿಕೆಗೇಡಿನ ಸಂಗತಿಯಲ್ಲವೇ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ಸೋಮವಾರ ಕಟುವಾಗಿ ಪ್ರಶ್ನಿಸಿದೆ.

ಬೆಂಗಳೂರು (ಮೇ.30) : ಖಾಸಗಿ ಶಾಲೆಗಳಲ್ಲಿ ಡಿಜಿಟಲ್‌ ಬೋರ್ಡ್‌ಗಳಿರುವ ಇಂದಿನ ಸಮಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಹೆಣ್ಣು ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸದಿರುವುದು ನಾಚಿಕೆಗೇಡಿನ ಸಂಗತಿಯಲ್ಲವೇ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ಸೋಮವಾರ ಕಟುವಾಗಿ ಪ್ರಶ್ನಿಸಿದೆ.

ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಸಂಬಂಧ ಹೈಕೋರ್ಟ್(Karnataka highcourt) ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ(Justice PB Varale) ಅವರ ನೇತೃತ್ವದ ವಿಭಾಗೀಯ ಪೀಠ ಸರ್ಕಾರದ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿತು.\

Education: ಗುಮ್ಮಟನಗರಿ ವಿಜಯಪುರದಲ್ಲಿ ಶಾಲಾ ಪ್ರಾರಂಭಕ್ಕೆ ಬರದ ಸಿದ್ಧತೆ...!

ವಿಚಾರಣೆ ವೇಳೆ ಅರ್ಜಿ ಸಂಬಂಧ ಅಮಿಕಸ್‌ ಕ್ಯೂರಿಯಾಗಿರುವ ಹಿರಿಯ ವಕೀಲ ಕೆ.ಎನ್‌. ಫಣೀಂದ್ರ ಅವರು, ರಾಜ್ಯದ ಸುಮಾರು 4 ಸಾವಿರ ಶಾಲೆಗಳಲ್ಲಿ ಕುಡಿಯುವ ನೀರು, ಹೆಣ್ಣು ಮಕ್ಕಳಿಗೆ ಶೌಚಾಲಯ, ಕಾಂಪೌಂಡ್‌, ಆಟದ ಮೈದಾನದ ವ್ಯವಸ್ಥೆ ಇಲ್ಲದೇ ಇರುವುದು ಮತ್ತು ಶಾಲೆಗಳಲ್ಲಿ ಕನಿಷ್ಠ ಮೂಲ ಸೌಕರ್ಯ ಕಲ್ಪಿಸಲು ಶಿಫಾರಸ್ಸು ಮಾಡಿ ಸಲ್ಲಿಸಿರುವ ವರದಿ ಕುರಿತು ಪೀಠಕ್ಕೆ ವಿವರಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಹಲವು ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಹೆಣ್ಣು ಮಕ್ಕಳಿಗೆ ಶೌಚಾಲಯವಿಲ್ಲ ಎಂಬುದು ಗಂಭೀರ ವಿಚಾರವಾಗಿದೆ. ಶಿಕ್ಷಕರು, ಕೊಠಡಿಗಳು ಇಲ್ಲ ಎಂದರೆ ಹೇಗೋ ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ, ಕನಿಷ್ಠ ಅವಶ್ಯಕತೆಯಾಗಿರುವ ಹೆಣ್ಣು ಮಕ್ಕಳ ಶೌಚಾಲಯವಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದರೆ ಹೇಗೆ, ಸಣ್ಣ ಪಟ್ಟಣ ಅಥವಾ ಹಳ್ಳಿಯಲ್ಲಿ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದೆ ಎಂದ ಮಾತ್ರಕ್ಕೆ ಅವರಿಗೆ ಕುಡಿಯುವ ನೀರಿನ ವ್ಯವಸ್ಥೆ ಏಕೆ ಮಾಡುತ್ತಿಲ್ಲ, ಇದು ನಾಚಿಕೆಗೇಡಿನ ಸಂಗತಿಯಲ್ಲವೇ?’ ಎಂದು ಆಕ್ರೋಶ ಹೊರಹಾಕಿತು.

‘ಯಾವಾಗ ಈ ಶಾಲೆಗಳನ್ನು ಆರಂಭಿಸಲಾಗಿದೆ, ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಯಾವ ಕ್ರಮಕೈಗೊಳ್ಳಲಾಗಿದೆ, ಶಾಲೆಯ ಮೇಲ್ವಿಚಾರಕರು ಈ ಬಗ್ಗೆ ಕಾಲಕಾಲಕ್ಕೆ ವರದಿ ಸಲ್ಲಿಸಿದ್ದರೆ ಮೇಲಿನ ಅಧಿಕಾರಿಗಳು ಏನು ಮಾಡುತ್ತಿದ್ದಾರೆ?’ ಎಂದು ನ್ಯಾಯಪೀಠ ಖಾರವಾಗಿ ಪ್ರಶ್ನಿಸಿತು.

ಈ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಮುಗಿಬಿದ್ದ ಜನ!

ಕಲಬುರಗಿಯಲ್ಲಿ ಎರಡು ಸಾವಿರ ಶಾಲೆಗಳ ಪೈಕಿ 22 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ 126 ಶಾಲೆಗಳಲ್ಲಿ ಶೌಚಾಲಯವೇ ಇಲ್ಲ ಎಂದು ಅಮಿಕಸ್‌ಕ್ಯೂರಿ ಅವರ ವರದಿಯಲ್ಲಿ ವಿವರಿಸಲಾಗಿದೆ. 2013ರಲ್ಲಿಯೇ ಈ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿದೆ. ಈಗ 2023ರಲ್ಲಿ ಇದ್ದೇವೆ. ಹತ್ತು ವರ್ಷಗಳಾದರೂ ಪರಿಸ್ಥಿತಿ ಸುಧಾರಿಸಿಲ್ಲ. ಬದಲಿಗೆ ಕೆಟ್ಟಪರಿಸ್ಥಿತಿಯಿಂದ ದಯನೀಯ ಸ್ಥಿತಿಗೆ ಹೋಗುತ್ತಿದೆ ಎಂದು ಕಿಡಿಕಾರಿದ ನ್ಯಾಯಪೀಠ, ಅಂತಿಮವಾಗಿ ಅಮಿಕಸ್‌ ಕ್ಯೂರಿ ಅವರ ವರದಿಗೆ ಸಂಬಂಧಿಸಿದಂತೆ ಏನೆಲ್ಲಾ ಕ್ರಮಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಜೂ.15ಕ್ಕೆ ಮುುಂದೂಡಿತು.