ಹಾಲಿ ಇರುವ ಐವರ ಬದಲಾವಣೆ ಕಾಂಗ್ರೆಸ್ಸಿಗೆ ಹೊಸ ಕಾರ್ಯಾಧ್ಯಕ್ಷರು?
ಲೋಕಸಭಾ ಚುನಾವಣೆಗೂ ಮುನ್ನ ಪಕ್ಷ ಸಂಘಟನೆಗೆ ಚುರುಕು ನೀಡಲು ಹಾಗೂ ಸರ್ಕಾರದಲ್ಲಿ ಸ್ಥಾನ ಪಡೆದಿರುವ ಪದಾಧಿಕಾರಿಗಳಿಗೆ ಪಕ್ಷದ ಹೊಣೆಗಾರಿಕೆಯಿಂದ ಮುಕ್ತಿ ನೀಡಲು ಕಾಂಗ್ರೆಸ್‌ನಲ್ಲಿ ಸಿದ್ಧತೆ ಆರಂಭವಾಗಿದೆ. ಇದರ ಭಾಗವಾಗಿ ಎಲ್ಲ ಕಾರ್ಯಾಧ್ಯಕ್ಷರ ಬದಲಾವಣೆಯ ಗಂಭೀರ ಚಿಂತನೆ ನಡೆದಿದ್ದು, ಶೀಘ್ರವೇ ಬದಲಾವಣೆ ಸಾಧ್ಯತೆ ಹೆಚ್ಚಿದೆ.
ಬೆಂಗಳೂರು (ಅ.17): ಲೋಕಸಭಾ ಚುನಾವಣೆಗೂ ಮುನ್ನ ಪಕ್ಷ ಸಂಘಟನೆಗೆ ಚುರುಕು ನೀಡಲು ಹಾಗೂ ಸರ್ಕಾರದಲ್ಲಿ ಸ್ಥಾನ ಪಡೆದಿರುವ ಪದಾಧಿಕಾರಿಗಳಿಗೆ ಪಕ್ಷದ ಹೊಣೆಗಾರಿಕೆಯಿಂದ ಮುಕ್ತಿ ನೀಡಲು ಕಾಂಗ್ರೆಸ್‌ನಲ್ಲಿ ಸಿದ್ಧತೆ ಆರಂಭವಾಗಿದೆ. ಇದರ ಭಾಗವಾಗಿ ಎಲ್ಲ ಕಾರ್ಯಾಧ್ಯಕ್ಷರ ಬದಲಾವಣೆಯ ಗಂಭೀರ ಚಿಂತನೆ ನಡೆದಿದ್ದು, ಶೀಘ್ರವೇ ಬದಲಾವಣೆ ಸಾಧ್ಯತೆ ಹೆಚ್ಚಿದೆ.
ಈ ಹಿನ್ನೆಲೆಯಲ್ಲಿ ಹಾಲಿ ಇರುವ ಎಲ್ಲಾ 5 ಕಾರ್ಯಾಧ್ಯಕ್ಷರು ಬದಲಾಗಲಿದ್ದು, ಇವರ ಬದಲಾಗಿ ಹೊಸ ಕಾರ್ಯಾಧ್ಯಕ್ಷರ ನೇಮಕಕ್ಕೆ ಹೆಸರು ಬಹುತೇಕ ಅಂತಿಮಗೊಂಡಿದೆ. ಕುತೂಹಲಕಾರಿ ಸಂಗತಿಯೆಂದರೆ, ಈ ಬಾರಿ ಐದರ ಬದಲಾಗಿ ಮಹಿಳೆಯೂ ಸೇರಿದಂತೆ 6 ಮಂದಿ ಕಾರ್ಯಾಧ್ಯಕ್ಷರಾಗುವ ಸಂಭವವಿದೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ಹಾಲಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಎನ್. ಚಂದ್ರಪ್ಪ ಹಾಗೂ ಸಲೀಂ ಅಹಮದ್ ಅವರ ಬದಲಾವಣೆಯಾಗುವ ಸಾಧ್ಯತೆಯಿದೆ. ಏಕೆಂದರೆ, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ ಹಾಗೂ ಈಶ್ವರ್ ಖಂಡ್ರೆ ಅವರು ಸಚಿವ ಸ್ಥಾನದ ಹೊಣೆ ಹೊತ್ತಿದ್ದರೆ ಸಲೀಂ ಅಹ್ಮದ್ ಅವರು ಪರಿಷತ್‌ನ ಮುಖ್ಯ ಸಚೇತಕರಾಗಿದ್ದಾರೆ. ಚಂದ್ರಪ್ಪ ಅವರಿಗೆ ಸದ್ಯಕ್ಕೆ ಯಾವುದೇ ಸ್ಥಾನ ಸರ್ಕಾರದಲ್ಲಿ ಇಲ್ಲವಾದರೂ ಅವರ ಬದಲಾವಣೆಯ ಸಾಧ್ಯತೆ ಇದೆ.
ಕಾಂಗ್ರೆಸ್ ದುರಾಡಳಿತದ ಬಗ್ಗೆ ಪಕ್ಷದೊಳಗಿಂದಲೇ ನಮಗೆ ಮಾಹಿತಿ ಸಿಗುತ್ತಿದೆ: ಸಿಟಿ ರವಿ ಹೊಸ ಬಾಂಬ್
ಈ ಮೂಲಗಳ ಪ್ರಕಾರ ಈ ಐವರನ್ನು ಬದಲಿಸಿ ವಿನಯಕುಮಾರ್ ಸೊರಕೆ (ಹಿಂದುಳಿದ ವರ್ಗ), ವಿನಯ ಕುಲಕರ್ಣಿ (ಲಿಂಗಾಯತ), ವಸಂತಕುಮಾರ್ (ಪರಿಶಿಷ್ಟ), ಜಿ.ಸಿ. ಚಂದ್ರಶೇಖರ್ (ಒಕ್ಕಲಿಗ), ತನ್ವೀರ್ ಸೇಠ್ (ಮುಸ್ಲಿಂ) ಅವರನ್ನು ಕಾರ್ಯಾಧ್ಯಕ್ಷ ಹುದ್ದೆಗೆ ತರುವ ಚಿಂತನೆಯಿದೆ.
ಇವರಲ್ಲದೆ, ಮಹಿಳೆಯೊಬ್ಬರಿಗೂ ಕಾರ್ಯಾಧ್ಯಕ್ಷ ಹುದ್ದೆ ನೀಡಬೇಕು ಎಂಬ ಆಗ್ರಹವಿದ್ದು, ಈ ಹಿನ್ನೆಲೆಯಲ್ಲಿ ಸಚಿವೆ ಅಂಜಲಿ ನಿಂಬಾಳ್ಕರ್ ಅವರ ಹೆಸರು ಕೂಡ ಪರಿಗಣನೆಯಲ್ಲಿದೆ.
ಹೊಣೆಯಿಂದ ಯಾರಿಗೆ ಮುಕ್ತಿ?
ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ಎನ್. ಚಂದ್ರಪ್ಪ, ಸಲೀಂ ಅಹಮದ್.
ಯಾರ್‍ಯಾರಿಗೆ ಸಿಗಬಹುದು?
ವಿನಯಕುಮಾರ್ ಸೊರಕೆ (ಹಿಂದುಳಿದ ವರ್ಗ), ವಿನಯ ಕುಲಕರ್ಣಿ (ಲಿಂಗಾಯತ), ವಸಂತಕುಮಾರ್ (ಪರಿಶಿಷ್ಟ), ಜಿ.ಸಿ. ಚಂದ್ರಶೇಖರ್ (ಒಕ್ಕಲಿಗ), ತನ್ವೀರ್ ಸೇಠ್ (ಮುಸ್ಲಿಂ), ಅಂಜಲಿ ನಿಂಬಾಳ್ಕರ್.
ವೇಣುಗೋಪಾಲ ದಿಢೀರ್ ಭೇಟಿ:
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ದಿಢೀರನೆ ಬೆಂಗಳೂರು ನಗರಕ್ಕೆ ಭೇಟಿ ನೀಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಜತೆ ಪ್ರತ್ಯೇಕ ಸಭೆ ನಡೆಸಿದ್ದು, ಈ ಬೆಳವಣಿಗೆ ತೀವ್ರ ಕುತೂಹಲ ಕೆರಳಿಸಿದೆ.
ರಾಜ್ಯದಲ್ಲಿ ಐಟಿ ದಾಳಿ ತೀವ್ರ ಚರ್ಚೆಯಾಗುತ್ತಿರುವ ವೇಳೆಯಲ್ಲೇ ಭಾನುವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ ಬಂದಿಳಿದ ಕೆ.ಸಿ. ವೇಣುಗೋಪಾಲ್ ಸೋಮವಾರ ಬೆಳಗ್ಗೆ ಸದಾಶಿವನಗರದ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿದರು.
ಈ ವೇಳೆ ಏಕಾಏಕಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬೆಂಗಳೂರಿಗೆ ಬಂದಿರುವ ಬಗ್ಗೆ ತೀವ್ರ ಕುತೂಹಲ ಉಂಟಾಗಿತ್ತು.
ಬಳಿಕ ಅವರು ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಸಿದ್ಧತೆ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸಲು ಎಂದು ತಿಳಿದುಬಂದಿದೆ.
ಇದೇ ವೇಳೆ ನಿಗಮ-ಮಂಡಳಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳ ನೇಮಕಾತಿಗೂ ಹಸಿರುನಿಶಾನೆ ತೋರಿದರು ಎಂದು ಮೂಲಗಳು ತಿಳಿಸಿವೆ. ಜತೆಗೆ ರಾಜ್ಯದಲ್ಲಿ ಆಗುತ್ತಿರುವ ಐಟಿ ದಾಳಿ ಬಗ್ಗೆಯೂ ಮಾಹಿತಿ ಕಲೆ ಹಾಕಿದರು. ಐಟಿ ದಾಳಿ ಬಗ್ಗೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಯಾಕೆ ಗೂಬೆ ಕೂರಿಸುತ್ತಿದ್ದಾರೆ ಎಂಬ ಬಗ್ಗೆ ಚರ್ಚಿಸಿದರು ಎನ್ನಲಾಗಿದೆ.