ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ನಟಿ ರನ್ಯಾ ರಾವ್ ಬಂಧನವಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳಾದ ರನ್ಯಾ ಮನೆಯಲ್ಲಿ ಕೋಟಿಗಟ್ಟಲೆ ನಗದು ಪತ್ತೆಯಾಗಿದೆ. ಆಕೆ 14.8 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ಹಿಂದೆ ಕಸ್ಟಮ್ಸ್ ಅಧಿಕಾರಿಗಳೊಂದಿಗೆ ರನ್ಯಾ ಜಗಳವಾಡಿದ್ದರು. ಆಕೆಯ ದುಬೈ ಪ್ರಯಾಣದ ಬಗ್ಗೆಯೂ ಅನುಮಾನಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾಗ ನಟಿ ರನ್ಯಾ ರಾವ್ ಬಂಧನವಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನವಾಗಿ ಪರಪ್ಪನ ಅಗ್ರಹಾರ ಸೇರಿದ್ದಾಳೆ. ರಾಜ್ಯ ಪೊಲೀಸ್ ಗೃಹ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳು ಮತ್ತು ಚಲನಚಿತ್ರ ನಟಿ ರನ್ಯಾ ರಾವ್‌ ಮನೆಯಲ್ಲಿ ಸುಮಾರು 2.50 ಕೋಟಿ ರು. ನಗದು ಪತ್ತೆಯಾಗಿದೆ. ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳಾಗಿರುವ ರನ್ಯಾ, ಈ ಹಿಂದೆ ಕಸ್ಟಮ್ಸ್ ಅಧಿಕಾರಿಗಳೊಂದಿಗೆ ಜಗಳವಾಡಿದ್ದರು. ಕೇಂದ್ರ ಹಣಕಾಸು ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಡಿಆರ್ಐ ಅಧಿಕಾರಿಗಳಿಂದ ಅತಿದೊಡ್ಡ ಬಂಗಾರದ ಭೇಟೆ ಇದಾಗಿದೆ. 12.56ಕೋಟಿ ಮೌಲ್ಯದ 14.8ಕೆಜಿ ಚಿನ್ನಾಭರಣ ಹಾಗೂ ನಗದು ಒಟ್ಟು 17.29 ಕೋಟಿ ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ನಗದು 2.67 ಕೋಟಿ‌ ಆಗಿದೆ. 

ಡಿಜಿಪಿಗೆ ಮಲಮಗಳು ಹೇಗೆ?
ಆಂಧ್ರಪ್ರದೇಶ ಮೂಲದ ಡಿಜಿಪಿ ರಾಮಚಂದ್ರರಾವ್ ಅವರು, ಚಿಕ್ಕಮಗಳೂರು ಜಿಲ್ಲೆ ಕಾಫಿ ಪ್ಲಾಂಟರ್‌ ಮಾಲಕಿಯ ಜತೆ 2ನೇ ವಿವಾಹವಾಗಿದ್ದರು. ಐಪಿಎಸ್ ಅಧಿಕಾರಿ ಜತೆ ವಿವಾಹಕ್ಕೂ ಪೂರ್ವದ ದಾಂಪತ್ಯದಲ್ಲಿ ಅವರಿಗೆ ರನ್ಯಾ ಅಲಿಯಾಸ್ ಹರ್ಷವರ್ಧಿನಿ ಹಾಗೂ ರಿಷಬ್‌ ಹೆಸರಿನ ಮಕ್ಕಳಿದ್ದರು. ರನ್ಯಾ ರಾವ್ 28 ಮೇ 1993 ರಂದು ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಜನಿಸಿದರು. 

ಚಿನ್ನ ಕಳ್ಳಸಾಗಣೆ: ನಟಿ ರನ್ಯಾ ರಾವ್ ದುಬೈ ನಂಟು ಬಯಲು, 40 ಬಾರಿ ವಿದೇಶ ಪ್ರವಾಸ!

14 ಕೆಜಿ ಗೋಲ್ಡನ್ನ ಕದ್ದುಮುಚ್ಚಿ ಸಾಗಿಸಿದ್ದು ಹೇಗೆ?
1 ಕೆ ಜಿ ತೂಗುವ 14 ಗೋಲ್ಡ್ ಬಿಸ್ಕೆಟ್ ತಂದಿದ್ದ ರನ್ಯಾ ರಾವ್. ಬಿಸ್ಕೆಟ್ ಗಳನ್ನೆಲ್ಲ ಕಾಲು ತೊಡೆಯಲ್ಲಿಯೇ ಇಟ್ಟಿದ್ದಳು. ತೊಡೆಯ ಭಾಗಕ್ಕೆ ಗಮ್ ಹಾಕಿ 14 ಬಿಸ್ಕೆಟ್ ಗಳನ್ನು ಅಂಟಿಸಿಕೊಂಡಿದ್ದಳು. ಬಳಿಕ ಟೇಫ್ ಅನ್ನು ಬಲವಾಗಿ ಸುತ್ತಿಕೊಂಡಿದ್ದಳು. ಟೇಫ್ ಮೇಲೆ ಯಾವುದೇ ಸ್ಕ್ಯಾನರ್ ಅಲ್ಲಿ ಅನುಮಾನ ಬಾರದಂತೆ ಕ್ರೇಪ್ ಬ್ಯಾಂಡೇಜ್ ಹಾಕಿದ್ದಳು. ಅದರ ಮೇಲೆ ಜೀನ್ಸ್ ಪ್ಯಾಂಟ್ ಧರಿಸಿದ್ದಳು. 

ರನ್ಯಾ ರಾವ್ ಮೇಲೆ‌ ಬಂದಿರುವ ಅನುಮಾನಗಳೇನು?
1)ರನ್ಯಾ ರಾವ್ ಕಳೆದ 15 ದಿನದಲ್ಲಿ ನಾಲ್ಕು ಬಾರಿ ದುಬೈಗೆ ಹೋಗಿ ಬಂದಿದ್ದಾಳೆ. ಇಷ್ಟು ಬಾರಿ ಹೋಗುವ ಅವಶ್ಯಕತೆ ಏನಿತ್ತು, ಯಾವ ಕಾರಣಕ್ಕೆ ರನ್ಯಾ ರಾವ್ ಪದೇ ಪದೇ ದುಬೈ ಹೋಗ್ತಾ ಇದ್ದಳು.

2)ರನ್ಯಾ ರಾವ್ ತಂದೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಡಿಜಿಪಿ. ರನ್ಯಾ ರಾವ್ ಏರ್ ಪೋರ್ಟ್ ಗೆ ಬಂದ ಕೂಡಲೇ ಪೊಲೀಸರು ಬಂದಿದ್ದಾರೆ. ಹೀಗಾಗಿ ಹಿರಿಯ ಪೊಲೀಸ್ ಅಧಿಕಾರಿಗೆ ಪ್ರಕರಣದ ಸುತ್ತ ಸಂಬಂಧ ಇದೆಯಾ

3)ರನ್ಯಾ ರಾವ್ ಒಂದಲ್ಲ ಎರಡಲ್ಲ ಬರೋಬ್ಬರಿ 14.58 ಕೆಜಿ ಚಿನ್ನ ತಂದಿದ್ದಾಳೆ. ಇಷ್ಟು ತಂದಿರುವುದು ನೋಡಿದ್ರೆ ರನ್ಯಾ ರಾವ್ ಒಬ್ಬಳೆ ಈ ಕೃತ್ಯ ಎಸಗಿದ್ದಾಳಾ, ಅಥವಾ ಆಕೆಯ ಜೊತೆ ಯಾವುದಾದರೂ ಸಿಂಡಿಕೇಟ್ ಇದೆಯಾ

4)ರನ್ಯಾ ರಾವ್ ಆತ್ಮ ವಿಶ್ವಾಸ ನೋಡಿದ್ರೆ ಇದು ಮೊದಲ ಸಲದಂತಿಲ್ಲ. ರನ್ಯಾ ರಾವ್ ಡಿಆರ್ ಐ ಅಧಿಕಾರಿಗಳ ಕೈಗೆ ಸಿಕ್ಕ ಕೂಡಲೇ ತಾನೂ ಡಿಜಿಪಿ‌ ಮಗಳು ನನಗೆ ಈಗಲೇ ಪೊಲೀಸರು ಬರ್ತಾರೆ ಎಂದಿದ್ದಾಳೆ.

ಅದರಂತೆ ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದಾರೆ ಇದನ್ನ ನೋಡಿದ್ರೆ ಇದು ಮೊದಲ ಸಲದಂತೆ ಕಾಣುತ್ತಿಲ್ಲ. ಹೀಗೆ ರನ್ಯಾ ರಾವ್ ಸುತ್ತ ಹಲವು ಅನುಮಾನಗಳಿವೆ. ಇದೆಲ್ಲದಕ್ಕೂ ಡಿಆರ್ ಐ ಅಧಿಕಾರಿಗಳು ಉತ್ತರ ಹುಡುಕಲಿದ್ದಾರೆ.

ಸ್ಮಗ್ಲಿಂಗ್‌ನಲ್ಲಿ ನಟಿ ರನ್ಯಾ ಜೈಲು ಪಾಲು, ಇತ್ತ ನಿವಾಸದಲ್ಲಿ ಅಕ್ರಮ 2.50 ಕೋಟಿ ನಗದು ಪತ್ತೆ!

ಆಫೀಸರ್‌ಗೆ ಆವಾಜ್ ಹಾಕಿ ತಪ್ಪಿಸಿಕೊಳ್ಳುತ್ತಿದ್ದ ರನ್ಯಾ:
ಈ ಬಂಧನಕ್ಕೂ ಎರಡು ವಾರಗಳ ಮುನ್ನ ಸಹ ದುಬೈಗೆ ರನ್ಯಾ ಹೋಗಿ ಬಂದಿದ್ದರು. ತಪಾಸಣೆ ವೇಳೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಜತೆ ರನ್ಯಾ ಜಗಳ ಮಾಡಿಕೊಂಡಿದ್ದರು. ತಾನು ಡಿಜಿಪಿ ಪುತ್ರಿ ಎಂದು ಹೇಳಿಕೊಂಡು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಗಾಗದೆ ಹೊರ ಬರುತ್ತಿದ್ದರು. ಇಷ್ಟು ಮಾತ್ರವಲ್ಲ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ ಆಕೆಯನ್ನು ಕರೆತರಲು ಪ್ರತಿ ಬಾರಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಬಸವರಾಜು ಹೋಗುತ್ತಿದ್ದರು. ಈ ಜಗಳವಾದ ಬಳಿಕ ರನ್ಯಾಳ ವಿದೇಶ ಯಾತ್ರೆ ಕುರಿತು ಡಿಆರ್‌ಐ ಅಧಿಕಾರಿಗಳು ಕಣ್ಣಿಟ್ಟಿದ್ದರು.

ಕಳೆದೊಂದು ವರ್ಷದಿಂದ ನಿರಂತರವಾಗಿ ದುಬೈ ಹಾಗೂ ಮಲೇಷ್ಯಾಕ್ಕೆ ರನ್ಯಾ ಪಯಣಿಸಿದ್ದರು. ಅದರಲ್ಲೂ ಹೆಚ್ಚಿನ ಬಾರಿ ದುಬೈಗೆ ಹೋಗಿ ಭೇಟಿ ನೀಡಿದ್ದ ಪ್ರಯಾಣ ಚರಿತ್ರೆ ಸಿಕ್ಕಿದೆ. ಈ ಮಾಹಿತಿ ಹಿನ್ನಲೆಯಲ್ಲಿ ದುಬೈನಲ್ಲಿ ರನ್ಯಾಳ ಸಂಪರ್ಕ ಜಾಲವನ್ನು ಜಾಲಾಡಿದಾಗ ಆ ದೇಶದಲ್ಲಿ ಅವರ ಯಾವುದೇ ಬ್ಯುಸಿನೆಸ್ ಅಥವಾ ರಕ್ತ ಸಂಬಂಧಿಕರಿಲ್ಲದ ಸಂಗತಿ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ರನ್ಯಾಳ ದುಬೈ ಯಾತ್ರೆ ಬಗ್ಗೆ ಡಿಆರ್‌ಐ ಅಧಿಕಾರಿಗಳಿಗೆ ಶಂಕೆ ಮೂಡಿದೆ. ಹೀಗಿರುವಾಗ ರನ್ಯಾ ಮತ್ತೆ ದುಬೈಗೆ ಹೊರಟಾಗ ಅಧಿಕಾರಿಗಳು ಜಾಗೃತರಾಗಿದ್ದರು. ಅಂತೆಯೇ ದುಬೈನಿಂದ ಸೋಮವಾರ ರಾತ್ರಿ 7ಕ್ಕೆ ತಮ್ಮ ಪತಿ ಜತೆ ಕೆಐಎಗೆ ಬಂದಿಳಿದ ಕೂಡಲೇ ರನ್ಯಾ ಅವರನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಆಗಲೂ ರನ್ಯಾ ಅವರನ್ನು ಸಹ ತಪಾಸಣೆ ಇಲ್ಲದೆ ಹೊರಗೆ ಕರೆತರಲು ವಿಮಾನ ನಿಲ್ದಾಣ ಠಾಣೆ ಹೆಡ್‌ ಕಾನ್‌ಸ್ಟೇಬಲ್ ಬಸವರಾಜ್‌ ತೆರಳಿದ್ದರು. ರನ್ಯಾ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದಾಗ ಆಕ್ಷೇಪಿಸಿದ ಬಸವರಾಜು, ಅವರು ಯಾರೆಂದು ತಿಳಿದಿಕೊಂಡಿದ್ದೀರಿ. ಡಿಜಿಪಿ ರಾಮಚಂದ್ರರಾವ್‌ ಅವರ ಮಗಳು ಎಂದಿದ್ದಾರೆ. ಕೂಡಲೇ ರನ್ಯಾಳನ್ನು ಲೋಹ ಪರಿಶೋಧಕದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಧರಿಸಿದ್ದ ಲೆದರ್‌ ಜಾಕೆಟ್‌ನಲ್ಲಿ ₹12 ಕೋಟಿ ಮೌಲ್ಯದ 14.8 ಕೇಜಿ ಚಿನ್ನ ಬಿಸ್ಕೆಟ್‌ಗಳು ಹಾಗೂ ಗಟ್ಟಿಗಳು ಪತ್ತೆಯಾಗಿವೆ. ನಂತರ ಎಚ್‌ಬಿಆರ್‌ ಲೇಔಟ್‌ನ ಕಚೇರಿಗೆ ಕರೆದೊಯ್ದು ರನ್ಯಾ ಹಾಗೂ ಅವರ ಪತಿ ಜಿತಿನ್ ಅವರನ್ನು ವಿಚಾರಣೆಗೆ ಒಳಪಡಿಸಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಚಿನ್ನ ಸಾಗಾಣಿಕೆ ಕೃತ್ಯದಲ್ಲಿ ರನ್ಯಾ ಪಾತ್ರ ಮಾತ್ರ ಕಂಡು ಬಂದ ಹಿನ್ನೆಲೆಯಲ್ಲಿ ಅವರ ಪತಿ ಜಿತಿನ್‌ ಅವರನ್ನು ಅಧಿಕಾರಿಗಳು ಬಿಟ್ಟು ಕಳುಹಿಸಿದ್ದಾರೆ. ಅಲ್ಲದೆ ರನ್ಯಾ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ಹೋಗಿದ್ದ ಹೆಡ್‌ ಕಾನ್‌ಸ್ಟೇಬಲ್ ಬಸವರಾಜು ಅವರಿಂದ ಕೂಡ ಹೇಳಿಕೆ ಪಡೆದು ಅಧಿಕಾರಿಗಳು ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.