ಭಾರತ ನಾಮಕರಣದಿಂದ ಆಗುವ ಪ್ರಯೋಜನವೇನು?: ಉಗ್ರಪ್ಪ
‘ಇಂಡಿಯಾ’ ಬದಲಿಗೆ ‘ಭಾರತ’ ಎಂದು ನಾಮಕರಣ ಮಾಡಿದರೆ ಅದರಿಂದಾಗುವ ಪ್ರಯೋಜನವಾದರೂ ಏನು? ಇಷ್ಟುವರ್ಷ ಸುಮ್ಮನಿದ್ದು ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆಯೇ ಇಂತಹ ವಿಷಯಗಳನ್ನು ಮುನ್ನೆಲೆಗೆ ತರುವ ಉದ್ದೇಶವೇನು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಪ್ರಶ್ನಿಸಿದರು.
ಬಳ್ಳಾರಿ (ಸೆ.8) : ‘ಇಂಡಿಯಾ’ ಬದಲಿಗೆ ‘ಭಾರತ’ ಎಂದು ನಾಮಕರಣ ಮಾಡಿದರೆ ಅದರಿಂದಾಗುವ ಪ್ರಯೋಜನವಾದರೂ ಏನು? ಇಷ್ಟುವರ್ಷ ಸುಮ್ಮನಿದ್ದು ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆಯೇ ಇಂತಹ ವಿಷಯಗಳನ್ನು ಮುನ್ನೆಲೆಗೆ ತರುವ ಉದ್ದೇಶವೇನು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಪ್ರಶ್ನಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಬಡ- ಮಧ್ಯಮ ವರ್ಗದ ಜನರ ಸಮಸ್ಯೆಗಳನ್ನು ಬೇರೆಡೆ ಸೆಳೆಯಲು ಕೇಂದ್ರದ ಬಿಜೆಪಿ ನಾಯಕರು ‘ಒಂದು ದೇಶ ಒಂದು ಚುನಾವಣೆ’ ಎನ್ನುತ್ತಿದ್ದಾರೆ. ‘ಇಂಡಿಯಾ’ ಬದಲಿಗೆ ‘ಭಾರತ’ ಎಂದು ನಾಮಕರಣ ಮಾಡುವುದಾಗಿ ಹೇಳುತ್ತಿದ್ದಾರೆ. ‘ಸನಾತನ ಧರ್ಮ’ದ ವಿಷಯವನ್ನು ಮುನ್ನಲೆಗೆ ತರುವ ಪ್ರಯತ್ನ ನಡೆಸಿದ್ದಾರೆ ಎಂದರು.
ಮೋದಿ ದೇಶದ ಐರನ್ ಲೆಗ್ ರಾಜಕಾರಣಿ, ಅವರು ಕಾಲಿಟ್ಟಲ್ಲೆಲ್ಲಾ ಬಿಜೆಪಿಗೆ ಸೋಲು: ಉಗ್ರಪ್ಪ
ಬೆಲೆ ಏರಿಕೆ, ನಿರುದ್ಯೊಗ ಸೇರಿದಂತೆ ಅನೇಕ ಸಮಸ್ಯೆಗಳು ದೇಶದ ಜನರನ್ನು ಬಾಧಿಸುತ್ತಿವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 9 ವರ್ಷ ಕಳೆದರೂ ಬಿಜೆಪಿಯವರಿಗೆ ಈ ದೇಶದ ಬಡ- ಮಧ್ಯಮ ವರ್ಗದ ಜನರ ಹಿತ ಕಾಯುವ ಕೆಲಸ ಮಾಡಲಿಲ್ಲ. ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಸಹ ತಡೆಯಲಿಲ್ಲ. ಎಲ್ಲ ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತಿರುವುದರಿಂದ ಹೊಸ ಹೊಸ ವಿಷಯಗಳನ್ನಿಟ್ಟುಕೊಂಡು ಜನರ ಸಂಕಷ್ಟಗಳನ್ನು ಮರೆಮಾಚುವ ಕೆಲಸಕ್ಕೆ ಬಿಜೆಪಿ ನಾಯಕರು ಕೈ ಹಾಕಿದ್ದಾರೆ ಎಂದು ಟೀಕಿಸಿದರು.
‘ಭಾರತ’ ಎನ್ನುವುದಕ್ಕೆ ಕಾಂಗ್ರೆಸ್‌ನ ಯಾವ ಅಭ್ಯಂತರವಿಲ್ಲ. ಭಾರತ ಹೆಸರಿನಲ್ಲಿಯೇ ನಮ್ಮ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್‌ಗಾಂಧಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಜೋಡೋ ಯಾತ್ರೆ ನಡೆಸಿದರು. ಈ ಮೂಲಕ ಇಡೀ ದೇಶದಲ್ಲಿ ಜನರ ಐಕ್ಯತೆ, ಸಮಗ್ರತೆಗಾಗಿ ಶ್ರಮಿಸಿದರು. ಆದರೆ, ಬಿಜೆಪಿಯವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಹೊಸ ಹೊಸ ಸಂಗತಿಗಳನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಇಡೀ ದೇಶದಲ್ಲಿ ಬಿಜೆಪಿ ಮೇಲಿದ್ದ ವಿಶ್ವಾಸ ಕುಸಿಯುತ್ತಿದ್ದು, ಬರುವ ಚುನಾವಣೆಯಲ್ಲಿ ಬಿಜೆಪಿ ಸೋಲುಣ್ಣುವುದು ಖಚಿತ. ಇದನ್ನರಿತೆ ಅವರು ಜನರ ಮನಸ್ಸು ಬೇರೆಡೆ ಸೆಳೆಯಲು ಇಲ್ಲದ ಸರ್ಕಸ್ ನಡೆಸಿದ್ದಾರೆ ಎಂದು ಟೀಕಿಸಿದರು.
ಸನಾತನ ಧರ್ಮದ ಬಗ್ಗೆ ಚರ್ಚೆ ಅನಗತ್ಯ. ದೇಶ ನಿವಾಸಿಗಳು ಎದುರಿಸುತ್ತಿರುವ ಸಂಕಷ್ಟಗಳು, ಬಡಜನರ ಕಲ್ಯಾಣಕ್ಕಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಚರ್ಚೆಯಾಗಬೇಕೇ ಹೊರತು, ಸೂಕ್ಷ್ಮವಾದ ಧಾರ್ಮಿಕ ವಿಚಾರಗಳ ಕುರಿತು ಹೆಚ್ಚು ಪ್ರಸ್ತಾಪವಾಗಬಾರದು. ಸಾರ್ವಜನಿಕವಾಗಿ ಪರ- ವಿರೋಧದ ಚರ್ಚೆಯಾಗುವುದರಿಂದ ಯಾವ ಪ್ರಯೋಜನವೂ ಇಲ್ಲ. ಬಿಜೆಪಿಯಷ್ಟೇ ಅಲ್ಲ; ಯಾವ ಪಕ್ಷದವರಾಗಲಿ ಧಾರ್ಮಿಕ ವಿಚಾರಗಳ ಬಗ್ಗೆ ಹೆಚ್ಚು ಚರ್ಚಿಸಲು ಹೋಗಬಾರದು ಎಂದರು.
ಮೊದಲು ಅವರ ತಟ್ಟೆಯಲ್ಲಿ ಬಿದ್ದಿರುವುದನ್ನು ನೋಡಲು ಹೇಳಿ: ವಿ.ಎಸ್. ಉಗ್ರಪ್ಪ
ಕಾಂಗ್ರೆಸ್ ಮುಖಂಡರಾದ ವೆಂಕಟೇಶ್ ಹೆಗಡೆ ಹಾಗೂ ಸಂಗನಕಲ್ಲು ವಿಜಯಕುಮಾರ ಸುದ್ದಿಗೋಷ್ಠಿಯಲ್ಲಿದ್ದರು.