ಮೋದಿ ದೇಶದ ಐರನ್ ಲೆಗ್ ರಾಜಕಾರಣಿ, ಅವರು ಕಾಲಿಟ್ಟಲ್ಲೆಲ್ಲಾ ಬಿಜೆಪಿಗೆ ಸೋಲು: ಉಗ್ರಪ್ಪ
ಸೋಲಿನ ಭಯದಿಂದ ಮಹಾ ಕಿಲಾಡಿ ಮೋದಿ ಒಂದಷ್ಟು ವರ್ಗದ ಜನರನ್ನು ಮರುಳು ಮಾಡಲು ಅವರೇ ಹೆಚ್ಚಳ ಮಾಡಿದ್ದ ಗ್ಯಾಸ್ ಸಿಲಿಂಡರ್ ಬೆಲೆ ತುಸು ಇಳಿಕೆ ಮಾಡುವ ನಾಟಕ ಆಡಿದ್ದಾರೆ. 2014ರಲ್ಲಿ 395 ರು. ಇದ್ದ ಗ್ಯಾಸ್ ಸಿಲಿಂಡರ್ ಬೆಲೆ 1,200 ರು. ಮಾಡಿದ್ದು ಇದೇ ಮೋದಿ. ಅವರಿಗೆ ದಮ್ಮು, ತಾಕತ್ತು ಇದ್ದಿದ್ದರೆ 2014ರಲ್ಲೇ ಕಡಿಮೆ ಮಾಡಬೇಕಿತ್ತು ಎಂದು ಟೀಕಿಸಿದ ವಿ.ಎಸ್. ಉಗ್ರಪ್ಪ
ಬೆಂಗಳೂರು(ಸೆ.03): ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಐರನ್ ಲೆಗ್ ರಾಜಕಾರಣಿ. ಅವರು ಕಾಲಿಟ್ಟ ರಾಜ್ಯಗಳಲ್ಲಿ ಎಲ್ಲಾ ಬಿಜೆಪಿಗೆ ಸೋಲಾಗುತ್ತಿದೆ. ಇದೀಗ ಇಂಡಿಯಾ ಒಕ್ಕೂಟವನ್ನು ನೋಡಿ ಹೆದರಿ ಲೋಕಸಭೆ ಚುನಾವಣೆ ಸೋಲಿನಿಂದ ತಪ್ಪಿಸಿಕೊಳ್ಳಲು ಗ್ಯಾಸ್ ಬೆಲೆ 200 ರು. ಕಡಿತದ ನಾಟಕ ಆಡುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಟೀಕಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ ರಾಜಕೀಯ ಇತಿಹಾಸದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಸುಮಾರು 28 ಪಕ್ಷಗಳು ಎನ್‌ಡಿಎ ಸೋಲಿಸಲು ಒಂದಾಗಿವೆ. ಇದನ್ನು ನೋಡಿ ಪ್ರಧಾನಮಂತ್ರಿ ಹೆದರಿದ್ದು, 2024ರಲ್ಲಿ ಅವರಿಗೆ ಸೋಲು ನಿಶ್ಚಿತ ಎಂದು ಹೇಳಿದರು.
ಮೈಕ್ ಕಂಡಲ್ಲಿ ಮಾತಾಡುವ ಮೋದಿ ಮಣಿಪುರ ಬಗ್ಗೆ ಮೌನ: ಉಗ್ರಪ್ಪ ಕಿಡಿ
ಈ ಸೋಲಿನ ಭಯದಿಂದ ಮಹಾ ಕಿಲಾಡಿ ಮೋದಿ ಒಂದಷ್ಟು ವರ್ಗದ ಜನರನ್ನು ಮರುಳು ಮಾಡಲು ಅವರೇ ಹೆಚ್ಚಳ ಮಾಡಿದ್ದ ಗ್ಯಾಸ್ ಸಿಲಿಂಡರ್ ಬೆಲೆ ತುಸು ಇಳಿಕೆ ಮಾಡುವ ನಾಟಕ ಆಡಿದ್ದಾರೆ. 2014ರಲ್ಲಿ 395 ರು. ಇದ್ದ ಗ್ಯಾಸ್ ಸಿಲಿಂಡರ್ ಬೆಲೆ 1,200 ರು. ಮಾಡಿದ್ದು ಇದೇ ಮೋದಿ. ಅವರಿಗೆ ದಮ್ಮು, ತಾಕತ್ತು ಇದ್ದಿದ್ದರೆ 2014ರಲ್ಲೇ ಕಡಿಮೆ ಮಾಡಬೇಕಿತ್ತು ಎಂದು ಟೀಕಿಸಿದರು.
ಮೋದಿ ಕಾಲಿಟ್ಟ ಕಡೆ ಸೋಲು:
ಕರ್ನಾಟಕ ಚುನಾವಣೆ ವೇಳೆ 28 ಸಲ ಕರ್ನಾಟಕಕ್ಕೆ ಬಂದಿದ್ದರು. ಬೀದಿ, ಬೀದಿ ಅಲೆದಿದ್ದರೂ ಹೀನಾಯವಾಗಿ ಸೋತರು. ಪಶ್ಚಿಮ ಬಂಗಾಳ, ತಮಿಳುನಾಡು, ಹರ್ಯಾಣ ಎಲ್ಲಾ ಕಡೆಯೂ ಸೋತಿದ್ದಾರೆ. ಇದೀಗ ಲೋಕಸಭೆ ಸೋಲಿನ ಭೀತಿ ಎದುರಾಗಿದ್ದು, ಒಂದು ದೇಶ ಒಂದು ಚುನಾವಣೆ ನಾಟಕ ಆಡುತ್ತಿದ್ದಾರೆ. ಅದರಿಂದ ತಮಗೆ ಲಾಭವಾಗುವ ಭ್ರಮೆಯಲ್ಲಿದ್ದಾರೆ. ಒಂದು ದೇಶ ಒಂದು ಚುನಾವಣೆ, ಮಹಿಳಾ ಮೀಸಲಾತಿ ಎಂಬುದು ಇವರಿಗೆ ಲಾಭ ಕೊಡಲ್ಲ. ಬಿಜೆಪಿಯ ಮನುವಾದಿಗಳು ಎಂದಿಗೂ ಆದಿವಾಸಿ, ದಲಿತ, ಹಿಂದುಳಿದ, ಮಹಿಳೆಯರ ಪರ ನಿರ್ಧಾರ ಕೈಗೊಳ್ಳಲ್ಲ. ಇದು ಜನರಿಗೆ ಗೊತ್ತಾಗಿದೆ.
ನಿಮಗೆ ಚುನಾವಣೆ ವ್ಯವಸ್ಥೆ ಸುಧಾರಿಸಬೇಕು ಎನ್ನುವುದಾದರೆ ನಾಮಪತ್ರದ ಅವಧಿಯನ್ನು 2 ದಿನಕ್ಕೆ ಇಳಿಸಿ. ಒಂದು ದಿನ ಪರಿಶೀಲನೆಗೆ ಅವಕಾಶ ನೀಡಿ 4ನೇ ದಿನ ಮತದಾನಕ್ಕೆ ಅವಕಾಶ ನೀಡಿ. ಆಗ ಚುನಾವಣಾ ಅಕ್ರಮಗಳೇ ಇರುವುದಿಲ್ಲ. ಆದರೆ, ಇಂತಹ ಸುಧಾರಣೆಗಳು ನಿಮಗೆ ಬೇಕಿಲ್ಲ ಎಂದು ಮೋದಿ ಅವರನ್ನು ಟೀಕಿಸಿದರು.