ಹಳೇ ವ್ಯಾಜ್ಯಗಳ ವಿಲೇವಾರಿಗೆ ಸಂಜೆ ಕೋರ್ಟ್‌ ಆರಂಭಿಸುವ ಕೇಂದ್ರ ಸರ್ಕಾರದ ಯೋಜನೆಗೆ ಕರ್ನಾಟಕದ ಹಲವು ವಕೀಲರ ಸಂಘಗಳಿಂದ ವಿರೋಧ ವ್ಯಕ್ತವಾಗಿದೆ. ಈ ಯೋಜನೆ ಅವೈಜ್ಞಾನಿಕ, ಕಾರ್ಯಸಾಧುವಲ್ಲ ಮತ್ತು ವಕೀಲರ ಮೇಲಿನ ಒತ್ತಡ ಹೆಚ್ಚಿಸಲಿದೆ ಎಂಬ ಕಾರಣಕ್ಕೆ ವಿರೋಧ ವ್ಯಾಪಕವಾಗುತ್ತಿದೆ. 

ವೆಂಕಟೇಶ್‌ ಕಲಿಪಿ

ಬೆಂಗಳೂರು (ಆ.18): ಬೃಹತ್‌ ಪ್ರಮಾಣದಲ್ಲಿ ಬಾಕಿಯಿರುವ ಹಳೇ ವ್ಯಾಜ್ಯಗಳ ವಿಲೇವಾರಿಗೆ ಸಂಜೆ ಕೋರ್ಟ್‌ ಆರಂಭಿಸುವ ಕೇಂದ್ರ ಸರ್ಕಾರದ ಉದ್ದೇಶಿತ ಯೋಜನೆಗೆ ಕರ್ನಾಟಕದ ಹಲವು ವಕೀಲರ ಸಂಘಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ಈ ಯೋಜನೆ ಅವೈಜ್ಞಾನಿಕ, ಕಾರ್ಯಸಾಧುವಲ್ಲ ಮತ್ತು ವಕೀಲರ ಮೇಲಿನ ಒತ್ತಡ ಹೆಚ್ಚಿಸಲಿದೆ ಎಂಬ ಕಾರಣಕ್ಕೆ ಸಂಜೆ ಕೋರ್ಟ್‌ಗೆ ವಿರೋಧ ವ್ಯಾಪಕವಾಗುತ್ತಿದೆ. ಏಷ್ಯಾದಲ್ಲೇ ದೊಡ್ಡದು ಎಂಬ ಖ್ಯಾತಿ ಪಡೆದಿರುವ ಬೆಂಗಳೂರು ವಕೀಲರ ಸಂಘ, ಸಂಜೆ ಕೋರ್ಟ್‌ ಆರಂಭಿಸುವುದು ಬೇಡವೆಂದು ಒತ್ತಾಯಿಸಿ ಜಿಲ್ಲಾ ಪ್ರಧಾನ ನ್ಯಾಯಾಧೀಶರಿಗೆ ಈಗಾಗಲೇ ಪತ್ರ ಬರೆದಿದೆ. ಈ ನಿಲುವಿಗೆ ಕೋಲಾರ, ಕಲಬುರಗಿ ಮತ್ತು ಧಾರವಾಡ, ಮೈಸೂರು ವಕೀಲರ ಸಂಘಗಳು ಬೆಂಬಲ ವ್ಯಕ್ತಪಡಿಸಿವೆ.

ಕರ್ನಾಟಕ ವಕೀಲರ ಪರಿಷತ್‌ನ ಅಧ್ಯಕ್ಷ ಎಸ್‌.ಎಸ್‌.ಮಿಟ್ಟಲ್‌ಕೋಡ ಮತ್ತು ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್‌.ಲೋಕೇಶ್‌ ವೈಯಕ್ತಿಕವಾಗಿ ಸಂಜೆ ಕೋರ್ಟ್‌ ಪರವಿದ್ದರೂ ಶೀಘ್ರ ತಮ್ಮ ಸದಸ್ಯರ ಸಭೆ ಕರೆದು ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಸಂಜೆ ಕೋರ್ಟ್‌ ಏಕೆ?:

ದೇಶದ ಜಿಲ್ಲಾ ಕೋರ್ಟ್‌ಗಳಲ್ಲಿ ದೀರ್ಘಾವಧಿಯಿಂದ ದೊಡ್ಡ ಸಂಖ್ಯೆಯಲ್ಲಿ ವಿಲೇವಾರಿಯಾಗದೆ (ಬ್ಯಾಕ್‌ಲಾಗ್‌) ಬಾಕಿ ಉಳಿದಿರುವ ವ್ಯಾಜ್ಯಗಳ ತ್ವರಿತ ಇತ್ಯರ್ಥಕ್ಕೆ ಅನುಕೂಲವಾಗಲೆಂದು ಸಂಜೆ ಕೋರ್ಟ್‌ ಸ್ಥಾಪಿಸಲು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಯೋಜಿಸಿದೆ. ನ್ಯಾಷನಲ್‌ ಜ್ಯುಡಿಷಿಯಲ್‌ ಡೇಟಾ ಗ್ರಿಡ್‌ ಪೋರ್ಟಲ್‌ ದತ್ತಾಂಶದ ಪ್ರಕಾರ ಸದ್ಯ ದೇಶದ ಜಿಲ್ಲಾ ಕೋರ್ಟ್‌ಗಳಲ್ಲಿ 4.60 ಕೋಟಿ ಪ್ರಕರಣಗಳು ವಿಲೇವಾರಿಗೆ ಬಾಕಿ ಉಳಿದಿವೆ. ಹೀಗಾಗಿ, ಸದ್ಯ ಅಸ್ತಿತ್ವದಲ್ಲಿರುವ ಕೋರ್ಟ್‌ಗಳ ಮೂಲ ಸೌಕರ್ಯವನ್ನೇ ಬಳಸಿಕೊಂಡು ರೆಗ್ಯುಲರ್‌ ಕೋರ್ಟ್‌ ಸಮಯ ಮುಗಿದ ನಂತರ ಸಂಜೆ 5ರಿಂದ 9ರವರೆಗೆ ದೇಶದಲ್ಲಿ 785 ಸಂಜೆ ಕೋರ್ಟ್‌ ಆರಂಭಿಸಿ, ಕಡಿಮೆ ಮೌಲ್ಯದ ಆಸ್ತಿ ವ್ಯಾಜ್ಯ, ಚೆಕ್‌ ಬೌನ್ಸ್‌ ಮತ್ತು ಮೂರರಿಂದ ಆರು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ಸಣ್ಣ ಕ್ರಿಮಿನಲ್‌ ಪ್ರಕರಣಗಳ ವಿಲೇವಾರಿಗೆ ಉದ್ದೇಶಿಸಲಾಗಿದೆ.

ಸಂಜೆ ಕೋರ್ಟ್‌ನಲ್ಲಿ ಕಾರ್ಯನಿರ್ವಹಿಸಲು ನಿವೃತ್ತಿಯಾಗಿ ಮೂರು ವರ್ಷ ಆಗಿರುವ ಜಿಲ್ಲಾ ಕೋರ್ಟ್‌ಗಳ ನ್ಯಾಯಾಧೀಶರು ಮತ್ತು ಸಿಬ್ಬಂದಿಯನ್ನು ಮೂರು ವರ್ಷದವರೆಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು, ಅವರಿಗೆ ನಿವೃತ್ತಿಯಾದ ದಿನ ಪಡೆದ ವೇತನದಲ್ಲಿ ಅರ್ಧದಷ್ಟು ತುಟ್ಟಿಭತ್ಯೆಯೊಂದಿಗೆ ನೀಡಲು ಯೋಜಿಸಲಾಗಿದೆ.

ಏಕೆ ವಿರೋಧ?:

ಜಿಲ್ಲಾ ಕೋರ್ಟ್‌ಗಳ ಸಮಯ 5ರಿಂದ 5.30ಕ್ಕೆ ಮುಗಿಯುತ್ತದೆ. ಅಲ್ಲಿಯವರೆಗೆ ಕೋರ್ಟ್‌ನಲ್ಲಿರುವ ವಕೀಲರು ನಂತರ ಕಚೇರಿಯಲ್ಲಿ ಕಕ್ಷಿದಾರರ ಭೇಟಿ, ನಾಳಿನ ಪ್ರಕರಣಗಳಿಗೆ ತಯಾರಿ, ಅರ್ಜಿಗಳ ಕರಡು ರೂಪಿಸುವುದು ಸೇರಿ ಇತರೆ ಚಟುವಟಿಕೆಯಲ್ಲಿ ನಿರತರಾಗುತ್ತಾರೆ. ಈ ಚಟುವಟಿಕೆಗಳಿಗೆ ಸಂಜೆ ಕೋರ್ಟ್‌ ಅಡಚಣೆ ಉಂಟು ಮಾಡಲಿವೆ.

ವಾರದ ದಿನಗಳಲ್ಲಿ 16 ಗಂಟೆ ಕೆಲಸ ಮಾಡುತ್ತಾರೆ. ವಾರಾಂತ್ಯದಲ್ಲಿಯೂ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಸಾಕಷ್ಟು ಒತ್ತಡವಿರುತ್ತದೆ. ಸಂಜೆ ಕೋರ್ಟ್‌ಗಳಿಂದ ವಕೀಲರ ದೈನಂದಿನ ಜೀವನ ಮತ್ತು ಆರೋಗ್ಯದ ಮೇಲೆ ಮತ್ತಷ್ಟು ದುಷ್ಪರಿಣಾಮ ಉಂಟಾಗಲಿದೆ. ಮುಖ್ಯವಾಗಿ ಸಂಜೆ ಕೋರ್ಟ್‌ಗೆ ಹಾಜರಾಗಲು ಮಹಿಳಾ ವಕೀಲರು, ಸಿಬ್ಬಂದಿ, ಕಕ್ಷಿದಾರರಿಗೆ ಕಷ್ಟವಾಗಲಿದ್ದು, ಸಂಜೆ ಸಮಯದಲ್ಲಿ ಅವರಿಗೆ ಅಭದ್ರತೆ ಕಾಡಲಿದೆ ಎನ್ನುವುದು ವಕೀಲರ ಸಂಘಗಳ ಆಕ್ಷೇಪ.

ಈ ಹಿನ್ನೆಲೆಯಲ್ಲಿ ಸಂಜೆ ಕೋರ್ಟ್‌ಗಳ ಸ್ಥಾಪನೆಗಾಗಿ ವಕೀಲರಿಂದ ಅಭಿಪ್ರಾಯ ಸಂಗ್ರಹಿಸಿ ಕೊಡಲು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಕೋರಿದೆ. ಸುಪ್ರೀಂ ಕೋರ್ಟ್‌ ಸೂಚನೆಯಂತೆ ಕರ್ನಾಟಕದ 30 ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಜು.17ರಂದು ಪತ್ರ ಬರೆದಿರುವ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌, ಸಂಜೆ ಕೋರ್ಟ್‌ ಸ್ಥಾಪನೆಗೆ ಸ್ಥಳೀಯ ವಕೀಲರ ಸಂಘಗಳ ಅಭಿಪ್ರಾಯ ಸಂಗ್ರಹಿಸಿ ಕಳುಹಿಸಿಕೊಡಲು ಕೋರಿದ್ದಾರೆ, ಅದರ ಬೆನ್ನಲ್ಲೇ ರಾಜ್ಯದಲ್ಲಿರುವ 196 ವಕೀಲರ ಸಂಘಗಳ ಪೈಕಿ ಕೆಲ ಸಂಘಗಳು ಸಂಜೆ ಕೋರ್ಟ್‌ಗಳ ಸ್ಥಾಪನೆಗೆ ವಿರೋಧಿಸಿವೆ.

4.60 ಕೋಟಿ ಪ್ರಕರಣ ವಿಲೇವಾರಿಗೆ ಬಾಕಿ

ನ್ಯಾಷನಲ್‌ ಜ್ಯುಡಿಷಿಯಲ್‌ ಡೇಟಾ ಗ್ರಿಡ್‌ ಪೋರ್ಟಲ್‌ ದತ್ತಾಂಶದ ಪ್ರಕಾರ ಸದ್ಯ ದೇಶದ ಜಿಲ್ಲಾ ಕೋರ್ಟ್‌ಗಳಲ್ಲಿ 4,69,47,041 ಕೋಟಿ ಪ್ರಕರಣಗಳು ವಿಲೇವಾರಿಗೆ ಬಾಕಿ ಉಳಿದಿವೆ. ಅದರಲ್ಲಿ 1,10,27,276 ಸಿವಿಲ್‌ ಹಾಗೂ 3,59,19,765 ಕೋಟಿ ಕ್ರಿಮಿನಲ್‌ ಪ್ರಕರಣಗಳಿವೆ. ಮೂರು ವರ್ಷದೊಳಗಿನ ಪ್ರಕರಣ ಶೇ.25ರಷ್ಟಿವೆ. ರಾಜ್ಯದ ಜಿಲ್ಲಾ ಕೋರ್ಟ್‌ಗಳಲ್ಲಿ ಸದ್ಯ ಒಟ್ಟು 22,21,677 ಪ್ರಕರಣಗಳು ವಿಲೇವಾರಿಗೆ ಬಾಕಿಯಿವೆ. ಅದರಲ್ಲಿ 10,27,408 ಸಿವಿಲ್‌ ಮತ್ತು 11,94,269 ಕ್ರಿಮಿನಲ್‌ ಪ್ರಕರಣಗಳಾಗಿವೆ.