ಅನುದಾನಿತ ಕಾಲೇಜಿನಲ್ಲಿ ಉದ್ಯೋಗ ಖಾಲಿಯಿಲ್ಲದಿದ್ದರೂ ಅನುಕಂಪದ ಆಧಾರದ ಮೇಲೆ ನೌಕರಿ ನೀಡಲು ನಿರಾಕರಿಸುವಂತಿಲ್ಲ. ರಾಜ್ಯದ ಇತರೆ ಅನುದಾನಿತ ಕಾಲೇಜಿನಲ್ಲಿ ಖಾಲಿಯಿರುವ ಹುದ್ದೆ ಹುಡುಕಿ ನೀಡಬೇಕೆಂದು ಹೈಕೋರ್ಟ್ ಆದೇಶ.

ಬೆಂಗಳೂರು (ಆ.13): ನಿರ್ದಿಷ್ಟ ಅನುದಾನಿತ ಕಾಲೇಜಿನಲ್ಲಿ ಉದ್ಯೋಗ ಖಾಲಿಯಿಲ್ಲ ಎಂಬ ಕಾರಣಕ್ಕಾಗಿ ಅನುಕಂಪದ ಆಧಾರದ ಮೇಲೆ ನೌಕರಿ ನೀಡಲು ನಿರಾಕರಿಸಲು ಸಾಧ್ಯವಿಲ್ಲ. ರಾಜ್ಯದ ಇತರೆ ಅನುದಾನಿತ ಕಾಲೇಜಿನಲ್ಲಿ ಖಾಲಿಯಿರುವ ನೌಕರಿ ಹುಡುಕಿ ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ. 

ಬಾಗಲಕೋಟೆಯ ಅನುದಾನಿತ ಆದರ್ಶ ಪಿಯು ಕಾಲೇಜಿನಲ್ಲಿ ಎಫ್‌ಡಿಎ ನೌಕರನಾಗಿದ್ದ ತಮ್ಮ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ತನಗೆ ನೌಕರಿ ನೀಡಲು ಕೋರಿ‌ ಸಂತೋಷ್ ಯಮನಪ್ಪ ವಡಕರ್ ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯಿಸಿದ್ದ ಪದವಿ ಪೂರ್ವಶಿಕ್ಷಣ ಇಲಾಖೆಯು ಹುದ್ದೆ ಖಾಲಿಯಿಲ್ಲ ಎಂದು ನೌಕರಿ ನಿರಾಕರಿಸಿ ಹಿಂಬರಹ ನೀಡಿತ್ತು. ಅದನ್ನು ಪ್ರಶ್ನಿಸಿ ಯಮನಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ, ಹುದ್ದೆ ಖಾಲಿಯಿಲ್ಲ ಎಂಬ ಕಾರಣ ನೀಡಿ ಅನುಕಂಪದ ಆಧಾರದ ಹುದ್ದೆಗಳಿಗೆ ಸಲ್ಲಿಕೆಯಾಗುವ ಮನವಿ ತಿರಸ್ಕರಿಸಲಾಗುವುದಿಲ್ಲ. ಇತರೆ ಅನುದಾನಿತ ಸಂಸ್ಥೆಗಳಲ್ಲಿ ಖಾಲಿ ಹುದ್ದೆ ಹುಡುಕಿ ಹಂಚಿಕೆ ಮಾಡಬೇಕು ಎಂದು ತಿಳಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಯಮನಪ್ಪಗೆ ನೀಡಿದ್ದ ಹಿಂಬರಹ ರದ್ದುಪಡಿಸಿದೆ.

ಪ್ರಕರಣದ ವಿವರ:

ಅರ್ಜಿದಾರರ ತಂದೆ ಬಾಗಲಕೋಟೆ ಜಿಲ್ಲೆಯ ಬೇವೂರಿನಲ್ಲಿರುವ ಸರ್ಕಾರಿ ಅನುದಾನಿತ ಆದರ್ಶ ವಿದ್ಯಾವರ್ಧಕ ಸಂಘದ ಅಧೀನದ ಆದರ್ಶ ಕಾಂಪೋಸಿಟ್ ಪ್ರೀ-ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಅವರ ನಿಧನ ಬಳಿಕ ಅವರ ಮಗ ಯಮನಪ್ಪ ಅನುಕಂಪದ ನೇಮಕಾತಿಗಾಗಿ ಆದರ್ಶ ವಿದ್ಯಾವರ್ಧಕ ಸಂಘದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದರು.

ಈ ಮನವಿಯನ್ನು ಸಂಘವು ಪದವಿ ಪೂರ್ವ ಶಿಕ್ಷಣದ ಉಪ ನಿರ್ದೇಶಕರಿಗೆ ರವಾನಿಸಿತ್ತು. ಅರ್ಜಿ ಪರಿಶೀಲಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ, ಪ್ರಸ್ತುತ ಅನುಕಂಪದ ಮೇಲೆ ಉದ್ಯೋಗ ನೀಡಲು ಖಾಲಿ ಹುದ್ದೆಗಳಿಲ್ಲ ಎಂದು ತಿಳಿಸಿ ಮನವಿ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್​ ಮೆಟ್ಟಿಲೇರಿದ್ದರು.