ಬೆಂಗಳೂರು: ಅಯ್ಯಯ್ಯಪ್ಪೋ ಏನ್ ಸೆಖೆ? ಕೂರಕ್ಕೆ ಆಗಲ್ಲ, ಹೊರ ಹೋಗಕ್ಕೆ ಅಗಲ್ಲ, ರಾತ್ರಿ ಮಲಗಕ್ಕೆ ಆಗಲ್ಲ... ಇದು ರಾಜ್ಯದ ಯಾವ ಭಾಗಕ್ಕೂ ಹೋದ್ರೂ ಕೇಳಿಬರೋ ಕಾಮನ್ ಡೈಲಾಗ್.

ಆದರೆ ರಾಜ್ಯದ ಕೆಲ ಭಾಗದ ಜನರಿಗೆ ಕೆಲವು ಗಂಟೆಗಳ ಮಟ್ಟಿಗೆ ಸ್ವಲ್ಪ ತಂಪಾಗುವ ಸುದ್ದಿಯೊಂದು ಬಂದಿದೆ. ಕೆಲವು ಕಡೆ ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ವರದಿಯು ಹೇಳಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಘಟಕ,  ರಾಜ್ಯದ ದಕ್ಷಿಣ ಮತ್ತು ಆಗ್ನೇಯ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ ಎಂದಿದೆ.

ಮುಂದಿನ 24 ಗಂಟೆಯಲ್ಲಿ ರಾಜ್ಯದ ಕೋಲಾರ,  ಚಿಕ್ಕಬಳ್ಳಾಪುರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಮತ್ತು ಚಾಮರಾಜನಗರದಲ್ಲಿ ಲಘು ಅಥವಾ ಸಾಧಾರಣ ಮಳೆಯನ್ನು ನಿರೀಕ್ಷಿಸಲಾಗಿದೆ.

ಆದರೆ, ಮೈಸೂರು ಜಿಲ್ಲೆಯ ದಕ್ಷಿಣ ಭಾಗ ಮತ್ತು ಚಾಮರಾಜನಗರದಲ್ಲಿ ಭಾರೀ ಮಳೆಯಾಗಬಹುದು, ಎಂದು ಇಲಾಖೆಯು ಹೇಳಿದೆ.

ಜನವರಿ ಮುಗಿಯುತ್ತಿದ್ದಂತೆ ರಾಜ್ಯಾದ್ಯಂತ ಸೆಖೆ ಆರಂಭವಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉಷ್ಣತೆ ಸರಿಸುಮಾರು 40 ಡಿಗ್ರಿಗಳನ್ನು ಮುಟ್ಟಿದೆ.