ಬೆಂಗಳೂರು (ಡಿ.07): ಹವಾಮಾನದಲ್ಲಿನ ನಿರಂತರ ಬದಲಾವಣೆಗಳಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಇನ್ನು ಮೂರು ದಿನಗಳ ಕಾಲ ಅಂದರೆ, ಡಿ.10ರವರೆಗೆ ಹಗುರದಿಂದ ಸಾಧಾರಣ ಮಳೆ ಹಾಗೂ ಚಳಿಯ ವಾತಾವರಣ ಮುಂದುವರಿಯಲಿದೆ.

 ಕನ್ಯಾಕುಮಾರಿ ಭಾಗದಲ್ಲಿ ‘ಬುರೆವಿ’ ಚಂಡಮಾರುತದ ಪ್ರಭಾವ ಸಂಪೂರ್ಣ ತಗ್ಗಿಲ್ಲ. ಈ ಮಧ್ಯೆ ಬಂಗಾಳಕೊಲ್ಲಿಯ ಆಗ್ನೇಯ ಭಾಗದ ಅಂಡಮಾನ್‌ ಬಳಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿಯ ಲಕ್ಷಣಗಳು ಕಂಡುಬಂದಿವೆ. ಈ ಕಾರಣಗಳಿಂದ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಡಿ.10ರವರೆಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. 

ಬುರೆವಿ ಅಬ್ಬರ ಕ್ಷೀಣಿಸಿದ್ರೂ ಬೆಂಗ್ಳೂರಲ್ಲಿ ಹೆಚ್ಚಾದ ಚಳಿ ...

ಈ ಮೇಲ್ಮೈ ಸುಳಿಗಾಳಿ ತೀವ್ರಗೊಂಡರೆ ‘ಬುರೆವಿ’ ಬೆನ್ನಲ್ಲೇ ಮತ್ತೆ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಡಿ.9ರವರೆಗೆ ತುಂತುರು, ಡಿ.10ಕ್ಕೆ ಸಾಧಾರಣ ಮಳೆ ಆಗಲಿದೆ. ಕರಾವಳಿ ಭಾಗದಲ್ಲಿ ಡಿ.10ರವರೆಗೆ ತುಂತುರು ಮಳೆ ಬೀಳಲಿದೆ.

ಉತ್ತರ ಒಳನಾಡಿನಲ್ಲಿ ಡಿ.8ರವರೆಗೆ ಒಣಹವೆ ಮುಂದುವರಿಯಲಿದ್ದು, ಡಿ.9ಕ್ಕೆ ಅಲ್ಲಲ್ಲಿ ತುಂತುರು ಮಳೆ ಸಂಭವ ಇದೆ. ಡಿ.6ರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಹಿಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನಲ್ಲಿ ಹಲವು ಕಡೆಗಳಲ್ಲಿ ಮಾತ್ರ ಸಾಮಾನ್ಯ ಮಳೆ ಬಿದ್ದಿದೆ. ಉಳಿದೆಲ್ಲ ಕಡೆಗಳಲ್ಲಿ ಚಳಿಯ ವಾತಾವರಣ ಕಂಡು ಬಂದಿದೆ. ರಾಜ್ಯದ ಕನಿಷ್ಠ ತಾಪಮಾನ ವಿಜಯಪುರದಲ್ಲಿ 11 ಡಿಗ್ರಿ ಸೆಲ್ಸಿಯಸ್‌ ಹಾಗೂ ಗರಿಷ್ಠ ತಾಪಮಾನ 35.5 ಡಿಗ್ರಿ ಸೆಲ್ಸಿಯಸ್‌ ಕಾರವಾರದಲ್ಲಿ ದಾಖಲಾಗಿದೆ.