ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಮಾದರಿಯಾಗಬೇಕು ಜಾತಿರಹಿತ, ವರ್ಗ ರಹಿತ ಸಮಾಜ ನಿರ್ಮಾಣವಾಗಬೇಕು, ಜಾತಿ ವ್ಯವಸ್ಥೆ ಹೋಗಲಾಡಿಸಬೇಕು ವಿರೋಧ ಪಕ್ಷದ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ
ಬಾದಾಮಿ (ಜು.14): ವಿದ್ಯಾರ್ಥಿಗಳು ಮನಸು ಮಾಡಿದರೆ ಏನನ್ನಾದರೂ ಸಾಧಿಸಬಹುದು. ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಮಾದರಿಯಾಗಬೇಕು, ಜಾತಿರಹಿತ, ವರ್ಗ ರಹಿತ ಸಮಾಜ ನಿರ್ಮಾಣವಾಗಬೇಕು, ಜಾತಿ ವ್ಯವಸ್ಥೆ ಹೋಗಲಾಡಿಸಬೇಕು ಎಂದು ವಿರೋಧ ಪಕ್ಷದ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ಸ್ವಕ್ಷೇತ್ರ ಬಾದಾಮಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ವಿತರಣೆ ಮಾಡಿ ಮಾತನಾಡಿದ ಅವರು, ನಿಜವಾದ ವಿದ್ಯಾವಂತ ಯಾರೆಂದರೆ ಜಾತಿ-ಜಾತಿ ಎಂದು ಬಡಿದಾಡುವವನಲ್ಲ. ಆ ಮೌಢ್ಯತೆಯಿಂದ ಹೊರಗೆ ಬಂದು ಮನುಷ್ಯತ್ವವನ್ನು ಬೆಳೆಸಿಕೊಂಡವನೇ ನಿಜವಾದ ವಿದ್ಯಾರ್ಥಿ ಎಂದು ಅಭಿಪ್ರಾಯಪಟ್ಟರು.
ತಮ್ಮ ಮುಂದಿನ ಚುನಾವಣಾ ಕ್ಷೇತ್ರದ ಬಗ್ಗೆ ತಿಳಿಸಿದ ಸಿದ್ದರಾಮಯ್ಯ
ಅಪಹಾಸ್ಯ ಮಾಡಿದ್ದರು: ಇದೇ ವೇಳೆ ತನ್ನ ಬಾಲ್ಯದಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಂಡ ಅವರು, ನನ್ನ ಬಾಲ್ಯ ಜೀವನದಲ್ಲಿ ನನ್ನ ತಂದೆ ಸ್ನೇಹಿತರು ಇವನನ್ನು ಲಾಯರಾಗಿ ಮಾಡು ಎಂದು ಹೇಳಿದ್ದರು. ಆಗ ನಾವು ಕುರಿ ಕಾಯುವವರು ನಮಗೆ ಎಲ್ಲಿ ವಿದ್ಯೆ ತಲೆಗೆ ಹತ್ತುತ್ತದೆ ಎಂದು ಅಪಹಾಸ್ಯ ಮಾಡುತ್ತಿದ್ದರು. ಅವತ್ತಿನ ದಿನಗಳಲ್ಲಿ ನಾನು ಓದದೆ ಹೋಗಿದ್ದರೆ ಈ ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ. ರಾಜ್ಯದ ಜನತೆಗೆ ನಾನು ಯಾರು ಎಂದು ಗೊತ್ತಾಗುತ್ತಿರಲಿಲ್ಲ ಎಂದರು.
ಬಾದಾಮಿಯಲ್ಲಿ ಅದ್ಧೂರಿ ಸ್ವಾಗತ
ಸಿದ್ದರಾಮಯ್ಯುನವರು ಬಾದಾಮಿಯ ಗುಳೇದಗುಡ್ಡಕ್ಕೆ ಆಗಮಿಸಿದ ಸಂದರ್ಭದಲ್ಲಿ ಪಟ್ಟಣದ ಹಾದಿಬಸವೇಶ್ವರ ದೇವಸ್ಥಾನದ ಹತ್ತಿರ ಅವರ ಅಭಿಮಾನಿಗಳು, ಕಾರ್ಯಕರ್ತರು ಜೆಸಿಬಿ ಮೇಲೆ ನಿಂತು ಪುಷ್ಪವೃಷ್ಟಿಮಾಡಿದರು. ಹೂಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು.
