ಕೇಂದ್ರ ಸರ್ಕಾರದ್ದು ಜಾತಿಗಣತಿಯಾದರೆ, ನಾವು ಮಾಡುತ್ತಿರುವುದು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ದಾವಣಗೆರೆ : ಕೇಂದ್ರ ಸರ್ಕಾರದವರು 2027ರಿಂದ ಮಾಡಲು ಹೊರಟಿರುವುದು ಜಾತಿಗಣತಿಯಾದರೆ, ನಾವು ಮಾಡುತ್ತಿರುವುದು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆಯಾಗಿದೆ. ಇದರಲ್ಲೇ ಜಾತಿಗಣತಿಯೂ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, 2027ರಿಂದ ಜಾತಿಗಣತಿಯನ್ನು ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೆ, ಕೇಂದ್ರವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ಕೈಗೊಳ್ಳುವುದಾಗೇನೂ ಹೇಳಿಲ್ಲ. ಸಾಮಾಜಿಕ ನ್ಯಾಯ ಒದಗಿಸಬೇಕಾದರೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಪರಿಸ್ಥಿತಿಯೂ ಗೊತ್ತಿರಬೇಕಾಗುತ್ತದೆ. ಅದು ಗೊತ್ತಿಲ್ಲದಿದ್ದರೆ, ಸಾಮಾಜಿಕ ನ್ಯಾಯ ಒದಗಿಸುವುದು ಕಷ್ಟ. ಅದಕ್ಕಾಗಿ ಶೈಕ್ಷಣಿಕ, ಸಾಮಾಜಿಕ ಗಣತಿ ಮಾಡಬೇಕಾಗುತ್ತದೆ. ಅದಕ್ಕಾಗಿ ಈ ಸಮೀಕ್ಷೆಯನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.

ಸಮೀಕ್ಷೆಗೆ ದುರ್ಬಲರು ಆಕ್ಷೇಪಣೆ ವ್ಯಕ್ತಮಾಡಿದ್ದಾರೆ. ಪ್ರಬಲರೂ ಆಕ್ಷೇಪಣೆ ವ್ಯಕ್ತಮಾಡಿದ್ದಾರೆ. ಮುಖ್ಯವಾಗಿ ಸೆಕ್ಷನ್‌ 11(1)ರ ಪ್ರಕಾರ ವರದಿಗೆ 10 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೊಸದಾಗಿ ಮರುಸಮೀಕ್ಷೆ ಆಗಬೇಕು ಅಂತಾ ತಿಳಿಸಿದ್ದಾರೆ. ಈಗಾಗಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ಮರುಸಮೀಕ್ಷೆ ಕೈಗೊಳ್ಳುವುದಕ್ಕೆ ಹೇಳಿದ್ದೇನೆ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಮೋದಿ ಎದೆಯಲ್ಲಿ ಬಡವರ ಬಗ್ಗೆ ಪ್ರೀತಿ ಇಲ್ಲ:

ಬಳಿಕ, ನಗರದ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲೆಯ ₹1,350 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಐವತ್ತಾರು ಇಂಚಿನ ಎದೆಯ ಪ್ರಧಾನಿ ನರೇಂದ್ರ ಮೋದಿ ಎದೆಯೊಳಗೆ ಬಡವರು, ಮಧ್ಯಮ ವರ್ಗದವರ ಬಗ್ಗೆ ಪ್ರೀತಿ, ಕಾಳಜಿಯೇ ಮೋದಿಗೆ ಇಲ್ಲವಾಗಿದೆ. ಎದೆ ಎಷ್ಟು ಇಂಚು ಎನ್ನುವುದು ಮುಖ್ಯವಲ್ಲ. ಇಂದಿನ ಬೆಲೆ ಏರಿಕೆಗೆ ಮೋದಿಯೇ ಕಾರಣ ಎಂದು ವಾಗ್ದಾಳಿ ನಡೆಸಿದರು.

ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ನಮ್ಮ ರಾಜ್ಯಕ್ಕೆ ದ್ರೋಹ ಮಾಡಿದೆ. ಈ ವಿಚಾರದಲ್ಲಿ ನಾನು ಸುಳ್ಳು ಹೇಳಿದ್ದರೆ ಮತ್ತೆಂದಿಗೂ ಸಾರ್ವಜನಿಕ ವೇದಿಕೆ ಹತ್ತುವುದಿಲ್ಲ. ಭಾಷಣ‍ವನ್ನೂ ಮಾಡುವುದಿಲ್ಲ ಎಂದು ಘೋಷಿಸಿದರು. ಅಭಿವೃದ್ಧಿ ವಿಚಾರದಲ್ಲಿ ನಾವೆಂದಿಗೂ ಜಾತಿ, ಧರ್ಮ, ಪಕ್ಷವನ್ನು ನೋಡುವುದಿಲ್ಲ. ಎಲ್ಲ ಪಕ್ಷದವರೂ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು. ಅಭಿವೃದ್ಧಿಗೆ ರಾಜ್ಯ ಸರ್ಕಾರದ ಬ‍ಳಿ ಹಣವಿಲ್ಲವೆಂದು ಬಿಜೆಪಿ, ಜೆಡಿಎಸ್‌ನವರು ಹಸಿಸುಳ್ಳುಗಳನ್ನೇ ಹೇಳುತ್ತಿದ್ದಾರೆ.

ಒಂದೇ ದಿನ ₹1,350 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಕ್ಕೆ ಇಲ್ಲಿ ಚಾಲನೆ ನೀಡಿದ್ದೇವೆ. ಇದೆಲ್ಲಾ ವಿಪಕ್ಷ ಬಿಜೆಪಿಯವರ ಕಣ್ಣಿಗೆ ಕಾಣುತ್ತಿಲ್ಲವಾ?. ಉದ್ಘಾಟನೆ, ಶಂಕುಸ್ಥಾಪನೆ ಬೋರ್ಡ್ ಹಾಕಿದ್ದೇವೆ. ಸುಮ್‌ಸುಮ್ನೇ ಹಾಕಿರ್ತೀವಾ?. ರಾಜ್ಯದ ಆರ್ಥಿಕತೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಅವರು ಸಾರ್ವಜನಿಕವಾಗಿ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ನಮ್ಮ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳು ಜನರ ಮನೆ ಬಾಗಿಲಿಗೆ ತಲುಪುತ್ತಿವೆ. ನಾವು ಗ್ಯಾರಂಟಿಗಳನ್ನು ಘೋಷಿಸಿದಾಗ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಸ್ಥಳೀಯ ಬಿಜೆಪಿ ನಾಯಕರವರೆಗೆ ಗ್ಯಾರಂಟಿಗಳು ಜಾರಿ ಆಗುವುದೇ ಇಲ್ಲವೆಂದು ಹಸಿಸುಳ್ಳು ಹೇಳುತ್ತಿದ್ದರು. ಈಗ ಐದೂ ಗ್ಯಾರಂಟಿ ಯೋಜನೆ ಜಾರಿಯಾಗಿದ್ದು, ಬಿಜೆಪಿ ಮತದಾರರೂ ಸೇರಿದಂತೆ ರಾಜ್ಯದ ಜನತೆ ಗ್ಯಾರಂಟಿಗಳ ಫಲಾನುಭವಿಯಾಗಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಬಜೆಟ್ ಗಾತ್ರ ಹೆಚ್ಚಾಗಿದ್ದಷ್ಟೇ ಅಲ್ಲ, ಜಿಎಸ್‌ಟಿ ಸಂಗ್ರಹದಲ್ಲೂ ಕರ್ನಾಟಕ ಇಡೀ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಇದು ರಾಜ್ಯದ ಆರ್ಥಿಕತೆ ಏರುಮುಖದಲ್ಲಿ, ಪ್ರಗತಿ ಪಥದಲ್ಲಿ ಇರುವುದಕ್ಕೆ ಸಾಕ್ಷಿಯಾಗಿದೆ.

ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯದ ಜನರಿಗೆ ಒಂದೇ ಒಂದು ಮನೆ ಕೊಡಲಿಲ್ಲ. ಆದರೆ, ನಾವು ಬರೀ ದಾವಣಗೆರೆ ಜಿಲ್ಲೆಯಲ್ಲಿ ಒಂದೇ ದಿನ ಪೌರಕಾರ್ಮಿಕ ವರ್ಗಕ್ಕೆ 1,892 ಮನೆಗಳನ್ನು ವಿತರಿಸಿದ್ದೇವೆ ಎಂದು ವಿಪಕ್ಷಕ್ಕೆ ತಿರುಗೇಟು ನೀಡಿದರು.

ಮುಂದೆಯೂ ನಾವೇ ಗೆಲ್ತೀವಿ:ಬಿಜೆಪಿಯವರ ಸುಳ್ಳುಗಳಿಗೆ ರಾಜ್ಯದ ಜನತೆ ಸೊಪ್ಪು ಹಾಕುತ್ತಿಲ್ಲ. ಉಪ ಚುನಾವಣೆಗಳಲ್ಲಿ ಶಿಗ್ಗಾವಿ, ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನೇ ಜನರು ಸೋಲಿಸಿ, ಕಾಂಗ್ರೆಸ್‌ಗೆ ಶಕ್ತಿ ತುಂಬಿದರು. ಸಂಡೂರಿನಲ್ಲೂ ನಾವೇ ಗೆದ್ದೆವು. ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ನಾವೇ ಗೆದ್ದು, ಅಧಿಕಾರಕ್ಕೂ ಬರುತ್ತೇವೆ. ಈ ಬಗ್ಗೆ ಯಾವುದೇ ಅನುಮಾನವೇ ಬೇಡ ಎಂದು ಹೇಳಿದರು.

ಶಾಮನೂರು ಒಪ್ಪಿದರೆ 2028ರಲ್ಲೂ ಟಿಕೆಟ್‌:

ಹಿರಿಯರಾದ ಶಾಸಕ ಡಾ। ಶಾಮನೂರು ಶಿವಶಂಕರಪ್ಪ ಅವರು ಆರೋಗ್ಯವಾಗಿದ್ದು, ಶತಾಯುಷಿಗಳಾಗಲಿದ್ದಾರೆ. ಅವರು ಬಯಸಿದರೆ 2028ರಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಟಿಕೆಟ್‌ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.

ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಸೋಮವಾರ ಶಿವಂಕರಪ್ಪ ಅವರ 95ನೇ ಜನ್ಮದಿನ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶಿವಶಂಕರಪ್ಪ ಅವರ ಉತ್ಸಾಹ, ಕ್ರಿಯಾಶೀಲತೆ ನೋಡಿದರೆ ಮತ್ತೊಂದು ಚುನಾವಣೆಗೆ ನಿಲ್ಲಬಹುದು. ಅವರು ಉತ್ಸಾಹ ತೋರಿಸಿದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಟಿಕೆಟ್ ನೀಡಲಿದೆ ಎಂದರು. ಕಾರ್ಯಕ್ರಮದಲ್ಲಿ 50 ವಧು-ವರರು ದಾಂಪತ್ಯ ಜೀವನಕ್ಕೆ ಅಡಿ ಇಟ್ಟರು.

ಅಂತರ್ಜಾತಿ ಸಾಮೂಹಿಕ ವಿವಾಹಗಳು ಹೆಚ್ಚು ಹೆಚ್ಚು ಆದಷ್ಟೂ ಜಾತ್ಯತೀತ ಸಮಾಜ ನಿರ್ಮಾಣ ಸಾಧ್ಯ. ಲಿಂಗ ತಾರತಮ್ಯ, ಜಾತಿ ತಾರತಮ್ಯ ನಿವಾರಣೆ ಆಗಬೇಕಾದರೆ ಇಂತಹ ಸಾಮೂಹಿಕ ವಿವಾಹ, ಅಂತರ್ಜಾತಿ ವಿವಾಹ ಹೆಚ್ಚು ಹೆಚ್ಚಾಗಿ ನಡೆಯಬೇಕು ಎಂದರು.

ಜಾತಿ, ವರ್ಗ ಇಲ್ಲದ ಸಮಾಜ ನಿರ್ಮಾಣ ಬಸವಣ್ಣ ಮತ್ತು ಬಸವಾದಿ ಶರಣರ ಆಶಯವಾಗಿತ್ತು. ನಮ್ಮ ಸರ್ಕಾರವು ಈ ನಿಟ್ಟಿನಲ್ಲಿ ಸಾಕಷ್ಟು ಯೋಜನೆ, ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಮತ್ತಷ್ಟು ಜನಪರ, ಅಭಿವೃದ್ಧಿ ಪರ ಕೆಲಸ ಮಾಡಲಿದೆ ಎಂದು ತಿಳಿಸಿದರು.(ಕೋಟ್‌) ಕೇಂದ್ರ ಸರ್ಕಾರ ಜನಗಣತಿಯನ್ನು 2027ರಿಂದ ಕೈಗೊಳ್ಳಲಿದೆ. ಆದರೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡುವುದಾಗಿ ಎಲ್ಲೂ ಹೇಳಿಲ್ಲ.

ನಾವು ಮಾಡುತ್ತಿರುವುದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ. ಅದರ ಜೊತೆ ಜಾತಿಗಣತಿಯೂ ಒಳಗೊಂಡಿದೆ. ಕೇಂದ್ರದ ಜಾತಿಗಣತಿಗೂ, ನಮ್ಮ ಸಮೀಕ್ಷೆಗೂ ವ್ಯತ್ಯಾಸವಿದೆ.

- ಸಿದ್ದರಾಮಯ್ಯ, ಸಿಎಂ.

ಮನವಿ ನೀಡಲು ಬಂದ್ರೆ ಪೊಲೀಸ್ರು ಒದ್ದರೆಂದು ಸಿಎಂ ಕಾರಿಗೆ ಅಡ್ಡಬಿದ್ರು!

ಇಲ್ಲಿನ ಸರ್ಕ್ಯೂಟ್ ಹೌಸ್‌ನಲ್ಲಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲು ಬೆಳಗ್ಗೆಯಿಂದ ಮಳೆಯಲ್ಲಿ ಕಾದು ನಿಂತಿದ್ದ ರೈತ ಮುಖಂಡರಿಗೆ ಪೊಲೀಸ್ ಸಿಬ್ಬಂದಿ ಕಾಲಿನಿಂದ ಒದ್ದಿದ್ದಾರೆಂದು ಆರೋಪಿಸಿ, ದಾವಣಗೆರೆ ನೆಲ, ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನಾ ಸಮಿತಿ ಒಕ್ಕೂಟದ ಬಲ್ಲೂರು ರವಿಕುಮಾರ್‌ ಮತ್ತಿತರರು ಸಿದ್ದರಾಮಯ್ಯ ಅವರ ಕಾರಿಗೆ ಅಡ್ಡವಾಗಿ ಮಲಗಿ ಪ್ರತಿಭಟಿಸಿದ ಹೈಡ್ರಾಮಾ ನಡೆಯಿತು.

ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಅಹವಾಲು ಆಲಿಸಿ ಹೊರಟು ನಿಂತ ಸಿದ್ದರಾಮಯ್ಯ ಅವರಿದ್ದ ವಾಹನವನ್ನು ಚಾಲಾಯಿಸಲು ಮುಂದಾದರು. ಸಿದ್ದರಾಮಯ್ಯ, ಡಾ। ಜಿ.ಪರಮೇಶ್ವರ ಇತರರು ಕಾರಿನಲ್ಲಿದ್ದರು. ಇನ್ನೇನು ಸಚಿವ ಮಲ್ಲಿಕಾರ್ಜುನ ಕಾರು ಚಾಲನೆ ಮಾಡಬೇಕು ಎನ್ನುವಷ್ಟರಲ್ಲೇ ರವಿಕುಮಾರ ಇತರರು ವಾಹನದ ಮುಂದೆ ಅಡ್ಡಲಾಗಿ ಮಲಗಿ ಪ್ರತಿಭಟಿಸ ತೊಡಗಿದರು. ದಿಢೀರ್ ಘಟನೆಯಿಂದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು, ಸಿಎಂ ಬೆಂಗಾವಲು ಸಿಬ್ಬಂದಿ ಸಹ ಒಂದು ಕ್ಷಣ ಕಕ್ಕಾಬಿಕ್ಕಿಯಾದರು. ಬಳಿಕ ಸಿಎಂ ಬಳಿ ರವಿಕುಮಾರ್‌ ತಮಗಾದ ನೋವನ್ನು ಹೇಳಿಕೊಂಡರು. ತಾವು ಮನವಿ ಸ್ವೀಕರಿಸಲು ಬಂದರೆ ತಮಗೆ, ತಮ್ಮ ಜೊತೆಗಿದ್ದ ಮುಖಂಡರಿಗೆ ಪೊಲೀಸರು ಎಳೆದಾಡಿ, ಕಾಲಿನಿಂದ ಒದ್ದಿದ್ದಾರೆ. ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಮನವಿ ಸಲ್ಲಿಸಿದರು.

ಒಕ್ಕೂಟದ ಮನವಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ದುರ್ವರ್ತನೆ ತೋರಿದ ಪೊಲೀಸರ ಮೇಲೂ ಕ್ರಮ ಕೈಗೊಳ್ಳುವೆ ಎಂದು ಭರವಸೆ ನೀಡಿದರು. ಅನಂತರ‍ವೂ ರವಿಕುಮಾರ ಬಲ್ಲೂರು ಇತರರ ಆಕ್ರೋಶ ತಣಿಯಲಿಲ್ಲ. ಬಳಿಕವೂ ಪೊಲೀಸರ ವಿರುದ್ಧ ಘೋಷಣೆ ಕೂಗತೊಡಗಿದರು.