ಕೇಂದ್ರ ಸರ್ಕಾರ ಜಾತಿಗಣತಿ ಮತ್ತು ಜನಗಣತಿ ಮಾಡಲು ತೀರ್ಮಾನಿಸಿರುವಾಗ ರಾಜ್ಯ ಸರ್ಕಾರ ಪ್ರತ್ಯೇಕವಾಗಿ ಜಾತಿಗಣತಿ ಮಾಡುವ ಅಗತ್ಯವಿಲ್ಲ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರು (ಜೂ.15): ಕೇಂದ್ರ ಸರ್ಕಾರ ಜಾತಿಗಣತಿ ಮತ್ತು ಜನಗಣತಿ ಮಾಡಲು ತೀರ್ಮಾನಿಸಿರುವಾಗ ರಾಜ್ಯ ಸರ್ಕಾರ ಪ್ರತ್ಯೇಕವಾಗಿ ಜಾತಿಗಣತಿ ಮಾಡುವ ಅಗತ್ಯವಿಲ್ಲ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಕಾಂಗ್ರೆಸ್‌ ಸರ್ಕಾರ 10 ವರ್ಷದ ಹಿಂದೆ ಸುಮಾರು 180 ಕೋಟಿ ರು. ವೆಚ್ಚದಲ್ಲಿ ಜಾತಿಗಣತಿ ಮಾಡಿಸಿದೆ. ಈಗ ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಮರು ಜಾತಿಗಣತಿಗೆ ಮುಂದಾಗಿರುವುದು ಸರಿಯಲ್ಲ. ಮತ್ತೆ ಜಾತಿ ಗಣತಿ ಮಾಡಲು ಜನರ ತೆರಿಗೆ ಹಣ ದುಂದುವೆಚ್ಚ ಮಾಡಬಾರದು ಎಂದರು.

ರಾಜ್ಯದಲ್ಲಿ ರಾಜಕೀಯ ಲಾಭಕ್ಕಾಗಿ ಕೆಲ ಸಮುದಾಯಗಳನ್ನು ಮೇಲೆತ್ತಲು ಕೆಲ ಜಾತಿಗಳನ್ನು ತುಳಿಯುವ ಕೆಲಸವಾಗುತ್ತಿವೆ. ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕಾಗಿ ಈ ಜಾತಿಗಣತಿ ನಡೆಯಬೇಕು. ಇಲ್ಲಿ ಯಾವುದೇ ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕಾಗಿ ನಡೆಯುತ್ತಿಲ್ಲ ಎಂದರು. ರಾಜ್ಯ ಕಾಂಗ್ರೆಸ್‌ ಸರ್ಕಾರ ತನ್ನ ರಾಜಕೀಯ ಕಾರ್ಯಸೂಚಿ ಹಾಗೂ ರಾಜಕೀಯ ಭವಿಷ್ಯ ಕಟ್ಟಿಕೊಳ್ಳಲು ಮುಂದಾಗಿದೆ. ಜಾತಿ ಗಣತಿ ಮುಖಾಂತರ ಬಹುಸಂಖ್ಯಾತರನ್ನು ಕಡಿಮೆ ತೋರಿಸುವುದು, ಕಡಿಮೆ ಇರುವವರನ್ನು ಹೆಚ್ಚು ತೋರಿಸುವ ದುರುದ್ದೇಶ ಇದರ ಹಿಂದಿದೆ ಎಂದು ಕಿಡಿಕಾರಿದರು.

ಮತ್ತೆ ಜಾತಿ ಸಮೀಕ್ಷೆಯಿಂದ ಸರ್ಕಾರಿ ಹಣ ಅಪವ್ಯಯ: ಕಾಂತರಾಜು ಸಮೀಕ್ಷೆ ವರದಿಯಲ್ಲಿ ಯಾವುದು ತಪ್ಪಾಗಿದೆ. ಅವೈಜ್ಞಾನಿಕ ಏನು? ಎಂಬ ಬಗ್ಗೆ ಸಾಬೀತಾಗಬೇಕಾಗಿತ್ತು. ಕೆಲವರ ವಿರೋಧದಿಂದಾಗಿ ಹೊಸ ಸಮೀಕ್ಷೆಯ ಹೊಸ ಪ್ರಸ್ತಾವನೆ ಹುಟ್ಟಿಕೊಂಡಿದೆ ಎಂದು ರಾಜ್ಯಸಭೆ ಮಾಜಿ ಸದಸ್ಯ ಡಾ.ಎಲ್‌.ಹನುಮಂತಯ್ಯ ಹೇಳಿದ್ದಾರೆ. ಸರ್ಕಾರದ ಹಣ ಅಪವ್ಯಯ ಆಗುವುದು ಸತ್ಯ. ಈಗಿನ ವರದಿ ಪರಿಪೂರ್ಣ ಅಲ್ಲ ಎಂಬುದನ್ನು ಯಾರಾದರೂ ಸಾಬೀತು ಮಾಡಿದ್ದರೆ ಹೊಸದಾಗಿ ಸಮೀಕ್ಷೆ ಮಾಡಬಹುದು. ಆದರೆ ಆರೀತಿ ಯಾರಾದರೂ ಸಾಬೀತುಪಡಿಸಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ. ಸರ್ಕಾರದ ಹಣ ಈ ರೀತಿ ಬಳಸಿರುವುದು ನನಗೆ ಸರಿ ಎನಿಸುವುದಿಲ್ಲ. ಹೈಕಮಾಂಡ್‌ ಕೂಡ ಅಭಿಪ್ರಾಯ ಕೊಟ್ಟವರು ಯಾರು ಎಂಬುದನ್ನು ಸಾರ್ವಜನಿಕವಾಗಿ ಹೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿರೋಧಕ್ಕೆ ಮಣಿದ ಕೈ ಹೈಕಮಾಂಡ್‌: ರಾಜ್ಯ ಸರ್ಕಾರ ಹತ್ತು ವರ್ಷಗಳ ಹಿಂದೆ ನಡೆಸಿದ್ದ ಜಾತಿ ಗಣತಿ ವರದಿಗೆ ಪ್ರಬಲ ಲಿಂಗಾಯತ, ಒಕ್ಕಲಿಗ ಸಮುದಾಯದ ಸಂಘ, ಸಂಸ್ಥೆಗಳ ಜತೆಗೆ ಆ ಸಮುದಾಯಗಳ ಸಚಿವ ಸಂಪುಟದ ಸಚಿವರೂ ಒಟ್ಟಾಗಿ ತೀವ್ರ ವಿರೋಧ ವ್ಯಕ್ತಪಡಿಸಿದ ಪರಿಣಾಮ ಈ ಸಮೀಕ್ಷೆ ಜಾರಿಗೆ ಒಪ್ಪದ ಕಾಂಗ್ರೆಸ್‌ ಹೈಕಮಾಂಡ್‌ ಮರುಗಣತಿ ನಡೆಸಲು ಸೂಚಿಸಿದೆ. ಸರ್ಕಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ) ವರದಿಯನ್ನು ಸಚಿವ ಸಂಪುಟದ ಮುಂದೆ ತಂದು ಬಹಿರಂಗಪಡಿಸುತ್ತಿದ್ದಂತೆ ರಾಜ್ಯದಲ್ಲಿ ಪ್ರಬಲ ಸಮುದಾಯಗಳಿಂದ ಅಸಮಾಧಾನ, ಆಕ್ರೋಶ ಬುಗಿಲೆದ್ದಿತ್ತು.