* ಅಲ್‌ಖೈದಾ ಹೇಳಿಕೆಗೆ ತೀವ್ರ ಖಂಡನೆ* ನಾವು ನಮ್ಮ ದೇಶಕ್ಕಾಗಿ ಹಾಗೂ ದೇಶದ ಐಕ್ಯತೆ, ಸಮಗ್ರತೆಗಾಗಿ ಒಗ್ಗಟ್ಟಾಗಿದ್ದೇವೆ* ನಮ್ಮದು ಸಂವಿಧಾನ ಒಪ್ಪಿರುವ ಪ್ರಜಾಪ್ರಭುತ್ವ ರಾಷ್ಟ್ರ
ಬೆಂಗಳೂರು(ಏ.08): ನಮ್ಮ ದೇಶದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡಲು ಅಲ್‌ಖೈದಾ(Al-Qaeda) ಎಂಬ ನಿಷೇಧಿತ ಭಯೋತ್ಪಾದಕ ಸಂಘಟನೆಗೆ ಯಾವುದೇ ನೈತಿಕ ಹಕ್ಕಿಲ್ಲ. ಉಗ್ರ ಸಂಘಟನೆಗಳ ಯಾವುದೇ ಉಪದೇಶ ನಮಗೆ ಅವಶ್ಯಕತೆಯಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್(Saleem Ahmed) ಹೇಳಿದ್ದಾರೆ.
ಹಿಜಾಬ್ ವಿವಾದ(Hijab Controversy) ಕುರಿತ ಅಲ್‌ಖೈದಾ ಮುಖ್ಯಸ್ಥರ ಹೇಳಿಕೆಗೆ ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ಅಲ್‌ಖೈದಾ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ನಾವು ನಮ್ಮ ದೇಶಕ್ಕಾಗಿ ಹಾಗೂ ದೇಶದ ಐಕ್ಯತೆ, ಸಮಗ್ರತೆಗಾಗಿ ಒಗ್ಗಟ್ಟಾಗಿದ್ದೇವೆ. ಮಾನವೀಯತೆಯ ವಿರೋಧಿ ಅಲ್‌ಖೈದಾ ಸಂಘಟನೆಗೆ ಭಾರತದ(India) ಆಂತರಿಕ ವಿಚಾರದಲ್ಲಿ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ನಮ್ಮದು ಸಂವಿಧಾನವನ್ನು ಒಪ್ಪಿರುವ ಪ್ರಜಾಪ್ರಭುತ್ವ ರಾಷ್ಟ್ರ. ಉಗ್ರ ಸಂಘಟನೆಗಳ(Terrorist Organization) ಯಾವುದೇ ಉಪದೇಶ ನಮಗೆ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
ಉಗ್ರ ಜವಾಹಿರಿ ಹೇಳಿಕೆಗೂ ಆರಗ ಹೇಳಿಕೆಗೂ ವ್ಯತ್ಯಾಸವಿಲ್ಲ: ಮಾಕನ್
‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಕುವೆಂಪು ಅವರು ಕೊಂಡಾಡಿದ್ದ ಶಾಂತಿಯ ಬೀಡಾದ ನಮ್ಮ ರಾಜ್ಯದಲ್ಲಿ ಕೋಮು ಗಲಭೆಯನ್ನು ಹುಟ್ಟು ಹಾಕಿ, ಅಮಾಯಕರ ಸಾವು-ನೋವು ಆಗಲೆಂದು ಕೆಲವು ಕಾಣದ ಕೈಗಳು ಹಾಗೂ ಸಂಘಟನೆಗಳು ಪ್ರೇರೇಪಿಸುತ್ತಿವೆ. ಅವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮಂಡ್ಯದ ಮುಸ್ಕಾನ್ ಹೊಗಳಿದ್ದ ಖೈದಾ ವಿಡಿಯೋ ತನಿಖೆ: ಸಿಎಂ ಬೊಮ್ಮಾಯಿ
ಮೈಸೂರು: ಹಿಜಾಬ್(Hijab) ಗಲಾಟೆ ವೇಳೆ ‘ಅಲ್ಲಾ ಹು ಅಕ್ಬರ್’ ಘೋಷಣೆ ಕೂಗಿದ್ದ ಮಂಡ್ಯದ(Mandya) ಯುವತಿ ಮುಸ್ಕಾನ್) (Muskanಬಗ್ಗೆ ಜಗತ್ತಿನ ಕುಖ್ಯಾತ ಉಗ್ರ ಸಂಘಟನೆ ಅಲ್‌ಖೈದಾಮೆಚ್ಚುಗೆ ವ್ಯಕ್ತಪಡಿಸಿದ ವಿಡಿಯೋಗೆ ಸಂಬಂಧಿಸಿ ತನಿಖೆಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನೆಲದ ಮತ್ತು ಕಾನೂನಿನ ವಿರುದ್ಧ ನಿರಂತರ ಷಡ್ಯಂತ್ರ ನಡೆದಿವೆ. ಈ ಬಗ್ಗೆ ತನಿಖೆಗೆ ಪೊಲೀಸರಿಗೆ(Police) ಸೂಚಿಸಿದ್ದೇನೆ, ವರದಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಲ್‌ಖೈದಾ ಹೇಳಿಕೆ ಹಿಂದೆ ಆರ್‌ಎಸ್‌ಎಸ್(RSS) ಕೈವಾಡವಿದೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಆರೋಪಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಅಲ್‌ಖೈದಾ ಹೇಳಿಕೆ ನೀಡಿದರೆ ಸಿದ್ದರಾಮಯ್ಯಗೆ ಯಾಕೆ ಗಲಿಬಿಲಿ? ಸಿದ್ದರಾಮಯ್ಯರದು ಆಧಾರವಿಲ್ಲದ, ಹೋಲಿಕೆಯಾಗದ ಹೇಳಿಕೆ ಎಂದು ಕುಟುಕಿದರು.
ಅಲ್ ಜವಾಹಿರಿ ಯಾರೋ ಗೊತ್ತಿಲ್ಲ, ಇಂತಹ ಹೊಗಳಿಕೆ ಬೇಕಿರಲಿಲ್ಲ: ಮುಸ್ಕಾನ್ ಖಾನ್ ತಂದೆ ಆತಂಕ
ಮಂಡ್ಯ: ‘ಅಲ್ ಜವಾಹಿರಿ (Al Zawahiri) ಯಾರು ಅನ್ನುವುದೇ ನನಗೆ ಗೊತ್ತಿಲ್ಲ. ನನ್ನ ಮಗಳಿಗೆ ಇಂತಹ ಹೊಗಳಿಕೆ ಬೇಕಾಗಿರಲಿಲ್ಲ’ ಎಂದು ಹಿಜಾಬ್-ಕೇಸರಿ ವಿವಾದದ ವೇಳೆ ಮಂಡ್ಯದಲ್ಲಿ ಅಲ್ಲಾ ಹೋ ಅಕ್ಬರ್ ಘೋಷಣೆ ಕೂಗಿ ಸುದ್ದಿಯಾಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಅವರ ತಂದೆ ಮಹಮದ್ ಹುಸೇನ್ ಖಾನ್ ತಿಳಿಸಿದ್ದಾರೆ. ಅಲ್‌ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಅಲ್ ಜವಾಹಿರಿ ತಮ್ಮ ಮಗಳನ್ನು ಹೊಗಳಿ ಕವಿತೆ ಬರೆದಿರುವ ಬಗ್ಗೆ ಬುಧವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.
ಅಲ್ ಖೈದಾ ಮುಖ್ಯಸ್ಥನ ವಿಡಿಯೋ ಕೂಡ RSS ಅವ್ರೆ ಕಳ್ಸೋದು ಎಂದ ಸಿದ್ಧರಾಮಯ್ಯ!
ಈ ಅಲ್ ಜವಾಹಿರಿ ಯಾರು ಅನ್ನುವುದೇ ನನಗೆ ಗೊತ್ತಿಲ್ಲ. ಮಾಧ್ಯಮಗಳ ಮುಖಾಂತರ ಈ ವಿಚಾರ ತಿಳಿಯಿತು. ಅರಬ್ಬೀ ಭಾಷೆಯಲ್ಲಿ ಮಗಳನ್ನು ಹೊಗಳಿದ್ದಾರೆ. ಇದರ ಬಗ್ಗೆ ನನಗೇನೂ ಗೊತ್ತಿಲ್ಲ. ಇದೆಲ್ಲಾ ತಪ್ಪು. ಗೊಂದಲ ಮಾಡಿ ನಮ್ಮ ನಮ್ಮಲ್ಲಿ ಜಗಳ ತಂದಿಡಲು ಮಾಡುತ್ತಿದ್ದಾರೆ. ನನ್ನ ಮಗಳಿಗೆ ಇಂತಹ ಹೊಗಳಿಕೆ ಬೇಕಾಗಿರಲಿಲ್ಲ ಎಂದು ಆತಂಕದಿಂದ ನುಡಿದರು.
ಹಿಜಾಬ್ ಇರುವ ಕಾಲೇಜಿಗೆ ಮುಸ್ಕಾನ್:
ಹಿಜಾಬ್ ಕಾರಣಕ್ಕಾಗಿಯೇ ಮಗಳ ಕಾಲೇಜು ಬದಲಿಸುತ್ತಿದ್ದೇವೆ ಎಂದು ಮುಸ್ಕಾನ್ ಖಾನ್ ಅವರ ತಂದೆ ಮಹಮದ್ ಹುಸೇನ್ ಖಾನ್ ತಿಳಿಸಿದರು. ಹಿಜಾಬ್‌ಗೆ ಅವಕಾಶವಿರುವ ಕಾಲೇಜು ಮೈಸೂರಿನಲ್ಲಿದ್ದು ಮುಸ್ಕಾನ್‌ಳನ್ನು ಅಲ್ಲಿಗೆ ದಾಖಲಿಸುತ್ತೇವೆ. ಹಿಜಾಬ್ ಅಥವಾ ವೇಲ್ ಹಾಕಿಕೊಳ್ಳಲು ಅವಕಾಶ ನೀಡಿದರೆ ಮಂಡ್ಯದಲ್ಲೇ ದಾಖಲಿಸುತ್ತೇವೆ ಎಂದು ಹೇಳಿದರು.
