* ವೈಷಮ್ಯದ ಹೇಳಿಕೆ ನೀಡಿದ ಅರಗ ವಿರುದ್ಧ ಕೇಸಿಗೆ ಒತ್ತಾಯ* ಆಯುಕ್ತರು ದೂರದಿದ್ದರೆ ಕಾಂಗ್ರೆಸ್ಸಿಂದಲೇ ದೂರು* ಬಿಜೆಪಿ ಕೂಡ ಅಲ್‌ಖೈದಾ ರೀತಿಯ ಬಲಪಂಥೀಯ ಸಂಘಟನೆ
ಬೆಂಗಳೂರು(ಏ.08): ‘ಹಿಜಾಬ್ ವಿವಾದ ಬಗ್ಗೆ ಮಂಡ್ಯದ ಮುಸ್ಕಾನ್ ಖಾನ್‌ಳನ್ನು(Muskan Khan) ಬೆಂಬಲಿಸಿ ಅಲ್‌ಖೈದಾ ನಾಯಕ ಐಮನ್ ಅಲ್ ಜವಾಹಿರಿ(Ayman al-Zawahiri) ನೀಡಿರುವ ಹೇಳಿಕೆಗೂ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೋಮು ಸಂಘರ್ಷಕ್ಕೆ ಪೂರಕವಾಗಿ ನೀಡಿದ ಆಧಾರ ರಹಿತ ಹೇಳಿಕೆಗೂ ಯಾವುದೇ ವ್ಯತ್ಯಾಸವಿಲ್ಲ. ಇಲ್ಲಿ ಬಿಜೆಪಿಯವರು ಬಲಪಂಥೀಯರು. ಅಲ್ಲಿ ಅಲ್‌ಖೈದಾದವರು ಬಲಪಂಥೀಯರು. ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್(Ajay Makan) ಹೇಳಿದ್ದಾರೆ.
ಕೆಪಿಸಿಸಿ(KPCC) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ನಾವು ಹಿಜಾಬ್ ವಿಚಾರವಾಗಿ ಅಲ್‌ಖೈದಾ ಸಂಘಟನೆ ನಾಯಕರ ಹೇಳಿಕೆಯನ್ನು ನಾವು ಕಟುವಾಗಿ ಖಂಡಿಸುತ್ತೇವೆ. ಅಲ್‌ಖೈದಾ ನಿಷೇಧಿತ ಉಗ್ರ ಸಂಘಟನೆ. ಆ ಸಂಘಟನೆಗೆ ಭಾರತದ ಆಂತರಿಕ ವಿಚಾರವಾಗಿ ಮಾತನಾಡುವ ಯಾವುದೇ ಹಕ್ಕಿಲ್ಲ. ನಮ್ಮ ದೇಶದ ವಿಚಾರವನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ, ಹೊರಗಿನವರ ಹಸ್ತಕ್ಷೇಪ ಬೇಕಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಹಿಜಾಬ್ ವಿವಾದದ ಹಿಂದಿನ ಕಾಣದ ಕೈ ‘ಅಲ್‌ಖೈದಾ'(Al-Qaeda) ಎಂಬ ಅರ್ಥದ ಹೇಳಿಕೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra)ಅವರ ವಿರುದ್ಧ ಕಿಡಿ ಕಾರಿದ್ದು, ಗೃಹ ಸಚಿವರ ಹೇಳಿಕೆಯನ್ನು ಖಂಡಿಸುತ್ತೇನೆ ಎಂದಿದ್ದಾರೆ.
‘ಅಲ್‌ಖೈದಾ ಹಾಗೂ ಆರಗ ಜ್ಞಾನೇಂದ್ರ- ಇವರಿಬ್ಬರೂ ತಮ್ಮ ಹೇಳಿಕೆ ಮೂಲಕ ದೇಶದ ವಾತಾವರಣ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಇವರು ಇಲ್ಲಿ ಬಲಪಂಥೀಯರಾದರೆ, ಅಲ್‌ಖೈದಾ ಆ ದೇಶದ ಬಲಪಂಥೀಯರಾಗಿದ್ದಾರೆ. ಇದು ಕೇವಲ ರಾಜ್ಯದ ಘನತೆ ಮಾತ್ರವಲ್ಲ ರಾಜ್ಯದ ಆರ್ಥಿಕತೆಯನ್ನು ನಾಶ ಮಾಡುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ರಾಜ್ಯದ ಐಟಿ-ಬಿಟಿ ಸಚಿವರೂ ಸೇರಿದಂತೆ ಅನೇಕರು ರಾಜ್ಯದಲ್ಲಿ ಧರ್ಮಕ್ಕೆ ಅತಿರೇಕದ ಹೆಜ್ಜೆ ಇಡುತ್ತಿದ್ದಾರೆ. ಅಲ್ಲಿ ಅಲ್‌ಖೈದಾದವರು ಅವರ ಧರ್ಮಕ್ಕೆ ಅತಿರೇಕದ ಹೆಜ್ಜೆ ಇಡುತ್ತಿದ್ದಾರೆ. ಹೀಗಾಗಿ ಇಬ್ಬರ ನಡುವೆ ವ್ಯತ್ಯಾಸವಿಲ್ಲ. ಇಂತಹ ಶಾಂತಿ ಕದಡುವ ಪ್ರಯತ್ನಗಳಿಂದ ಹಣದುಬ್ಬರ, ನಿರುದ್ಯೋಗ ಸಮಸ್ಯೆಗಳು ಮತ್ತಷ್ಟುಹೆಚ್ಚಲಿವೆ’ ಎಂದು ಕಿಡಿಕಾರಿದರು.
‘ರಾಜ್ಯ ಸರ್ಕಾರ ತನ್ನ ಶೇ.40 ಭ್ರಷ್ಟಾಚಾರ ಮರೆ ಮಾಚಲು ಹಲಾಲ್, ಹಿಜಾಬ್, ವ್ಯಾಪಾರ ನಿಷೇಧ, ಆಜಾನ್ ನಿಷೇಧದಂತಹ ವಿಷಯಗಳನ್ನು ವಿವಾದಗಳನ್ನಾಗಿಸುತ್ತಿದೆ. ಇದು ಆರ್‌ಎಸ್‌ಎಸ್, ಬಿಜೆಪಿ ಷಡ್ಯಂತ್ರ’ ಎಂದು ಮಾಕನ್ ಆರೋಪಿಸಿದರು.
ಗೃಹ ಸಚಿವರ ವಜಾಗೆ ಡಿಕೆಶಿ ಆಗ್ರಹ
‘ಸಮಾಜದಲ್ಲಿ ಅಶಾಂತಿ, ಜಾತಿ ಹಾಗೂ ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಗೆ ಪ್ರಚೋದಿಸುವಂತಹ ಹೇಳಿಕೆ ಕೊಟ್ಟಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಜಾಗೊಳಿಸಬೇಕು. ಪೊಲೀಸ್ ಆಯುಕ್ತರು ಗೃಹ ಸಚಿವರ ವಿರುದ್ಧ ಸುಮೋಟೊ ಕೇಸು ದಾಖಲಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯ ಮಾಡಿದ್ದಾರೆ.
‘ಒಂದು ವೇಳೆ ಪೊಲೀಸ್ ಆಯುಕ್ತರು ಪ್ರಕರಣ ದಾಖಲಿಸದಿದ್ದರೆ ನಾವೇ ದೂರು ಸಲ್ಲಿಸುತ್ತೇವೆ. ಕೊಲೆ ಪ್ರಕರಣದಲ್ಲಿ ಕೋಮು ತಳಕು ಹಾಕಿ ವೈಷಮ್ಯ ಸೃಷ್ಟಿಸಲು ಯತ್ನಿಸಿದ ಸಚಿವರ ವಿರುದ್ಧ ಜನರ ಮುಂದೆ ಹೋಗಿ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಅಲ್ ಜವಾಹಿರಿ ಯಾರೋ ಗೊತ್ತಿಲ್ಲ, ಇಂತಹ ಹೊಗಳಿಕೆ ಬೇಕಿರಲಿಲ್ಲ: ಮುಸ್ಕಾನ್ ಖಾನ್ ತಂದೆ ಆತಂಕ
ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಗೃಹ ಸಚಿವರಿಗೆ ಸಾಮಾನ್ಯ ಜ್ಞಾನ ಎಂಬುದೇ ಇಲ್ಲ. ಸಮಾಜದಲ್ಲಿ ಅಶಾಂತಿ ಮೂಡಿಸಲು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.
ಸಿಎಎ ಹಾಗೂ ಇತರೆ ವಿಚಾರ ಸಂದರ್ಭದಲ್ಲಿ ಹೇಳಿಕೆ ಕೊಟ್ಟವರ ವಿರುದ್ಧ ಪ್ರಕರಣ ದಾಖಲಿಸಿದಂತೆ ಈಗ ಶಾಂತಿ ಕದಡಲು, ಜಾತಿ, ಧರ್ಮದ ನಡುವೆ ವೈಷಮ್ಯ ಮೂಡಿಸಿ, ಗಲಭೆಗೆ ಪ್ರಚೋದನೆ ನೀಡಲು ಪ್ರಯತ್ನಿಸಿದ್ದಾರೆ. ಜೆಜೆ ನಗರ ಕೊಲೆ ಪ್ರಕರಣವನ್ನು ನಾನು ಖಂಡಿಸುತ್ತೇನೆ. ಇಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಈ ವಿಚಾರದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಆದರೆ ಕೊಲೆ ಪ್ರಕರಣ ತನಿಖೆಯಾಗುವ ಮುನ್ನವೇ ಉರ್ದು ಬರುವುದಿಲ್ಲ ಎಂದು ಹೇಳಿದ್ದಕ್ಕೇ ಆ ಯುವಕನನ್ನು ಚುಚ್ಚಿ, ಚುಚ್ಚಿ ಕೊಂದಿದ್ದಾರೆ ಎಂದು ಗೃಹ ಸಚಿವರು ಮೊದಲು ಹೇಳಿಕೆ ನೀಡಿ, ನಂತರ ತಲೆ ಕೆರೆದುಕೊಂಡು ತಮ್ಮ ಹೇಳಿಕೆ ಬದಲಾಯಿಸಿದ್ದಾರೆ. ಸಿ.ಟಿ. ರವಿ ಅವರು ಹೋಗಿ ಅವರ ಕುಟುಂಬದವರಿಗೆ ಹೀಗೆ ಹೇಳಿ ಎಂದು ಹೇಳಿಕೊಡುತ್ತಾರೆ. ಇವರೆಲ್ಲರೂ ಕರ್ನಾಟಕ ರಾಜ್ಯವನ್ನು ಏನು ಮಾಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು.
ಆಯುಕ್ತರಿಗೆ ಅಭಿನಂದನೆ:
‘ಗೃಹ ಸಚಿವರು ಇಂತಹ ವಿವಾದಿತ ಹೇಳಿಕೆಗಳನ್ನು ನೀಡುತ್ತಿರುವುದು ಮೊದಲಲ್ಲ. ಇವರು ಸಾಮಾನ್ಯ ವಿವೇಚನೆಯೇ ಇಲ್ಲದ ಗೃಹಸಚಿವರು. ಬೆಂಗಳೂರು ಪೊಲೀಸ್ ಆಯುಕ್ತರು ಸಮಯಕ್ಕೆ ಸರಿಯಾಗಿ, ಯಾರ ಒತ್ತಡಕ್ಕೂ ಮಣಿಯದೆ ವಾಸ್ತವ ತೆರೆದಿಟ್ಟರು. ಇದಕ್ಕಾಗಿ ಆಯುಕ್ತರನ್ನು ಅಭಿನಂದಿಸುತ್ತೇನೆ. ತನಿಖೆ ಮಾಡುವ ಮುನ್ನವೇ ಗೃಹ ಸಚಿವರು ಈ ರೀತಿ ತೀರ್ಪು ನೀಡಿದರೆ ಪ್ರಾಮಾಣಿಕವಾಗಿ ತನಿಖೆ ನಡೆಯುವುದಾದರೂ ಹೇಗೆ?’ ಎಂದು ಕಿಡಿ ಕಾರಿದರು.
ಜವಾಹಿರಿ ಹೇಳಿಕೆಗೆ ಖಂಡನೆ
ಮಂಡ್ಯ ಯುವತಿ ಮುಸ್ಕಾನ್ ವಿಚಾರವಾಗಿ ವಿದೇಶದ ನಿಷೇಧಿತ ಸಂಘಟನೆಯ ವ್ಯಕ್ತಿಯೊಬ್ಬ (ಜವಾಹಿರಿ) ಹೇಳಿಕೆ ನೀಡಿರುವುದನ್ನು ನಾವು ಖಂಡಿಸುತ್ತೇವೆ. ನಮ್ಮ ದೇಶದ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಬೇರೆ ಯಾರಿಗೂ ಅಧಿಕಾರವಿಲ್ಲ. ನಮ್ಮ ದೇಶದ ಐಕ್ಯತೆ, ಸಮಗ್ರತೆ, ಶಾಂತಿ ವಿಚಾರದಲ್ಲಿ ಬೇರೆಯವರು ತಲೆ ಹಾಕಬಾರದು ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ತಿಳಿಸಿದ್ದಾರೆ.
