ಕೋರ್ಟ್ ಹೊರಗೆ ಕಾವೇರಿ ಸಮಸ್ಯೆಪರಿಹಾರಕ್ಕೆ ನಾವು ಸಿದ್ಧ: ಸಿಎಂ
ನ್ಯಾಯಾಲಯದ ಹೊರಗೆ ಕಾವೇರಿ ಸಮಸ್ಯೆ ಬಗೆಹರಿಸಿಕೊಳ್ಳಲು ನಾವು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರು (ಸೆ.27) : ನ್ಯಾಯಾಲಯದ ಹೊರಗೆ ಕಾವೇರಿ ಸಮಸ್ಯೆ ಬಗೆಹರಿಸಿಕೊಳ್ಳಲು ನಾವು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಹಾಗೂ ಮೈಸೂರು ತಾಲೂಕು ಉತ್ತನಹಳ್ಳಿಯಲ್ಲಿ ಪಶುಸಖಿಯರಿಗೆ ಎ- ಹೆಲ್ಪ್ ರಾಜ್ಯ ಮಟ್ಟದ ತರಬೇತಿ, ಎನ್ಎಡಿಸಿಪಿ ಯೋಜನೆಯಡಿ 4ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು ಈ ವಿಚಾರ ತಿಳಿಸಿದರು.
ಕಾವೇರಿ ವಿಚಾರದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು, ಕೋರ್ಟ್ ಮಧ್ಯಸ್ಥಿಕೆ ಇಲ್ಲದೆ ಎರಡೂ ರಾಜ್ಯ ಕೂತು ಮಾತುಕತೆ ನಡೆಸಲು ಈಗಲೂ ನಾವು ಸಿದ್ಧವಿದ್ದೇವೆ ಎಂದರು.
ಬೆಂಗಳೂರು ಬಂದ್ ಆಯ್ತು, ನಾಡಿದ್ದು ಕರ್ನಾಟಕ ಬಂದ್! ಡಿಕೆಶಿ ಏನು ಹೇಳಿದ್ರು?
ಕೇಂದ್ರದಿಂದ ತಜ್ಞರ ತಂಡ ಬರಬೇಕು. ಇದನ್ನು ನಾನು ಎರಡು ಬಾರಿ ಕೇಂದ್ರಕ್ಕೆ ಕೇಳಿದ್ದೇನೆ. ದೇವೇಗೌಡರು ಕೂಡ ಈಗ ಪತ್ರ ಬರೆದು ಕೇಳಿದ್ದಾರೆ. ಈಗಲಾದರೂ ಕೇಂದ್ರದಿಂದ ತಂಡ ಬರಲಿ. ಯಾಕೆ ಕೇಂದ್ರದ ತಂಡ ಬರುತ್ತಿಲ್ಲ ಅಂತ ಬಿಜೆಪಿಯವರು ಹೇಳಲಿ. ಬಿಜೆಪಿಯವರು ಹಾದಿಬೀದಿಯಲ್ಲಿ ಹೋರಾಟ ಮಾಡುವ ಬದಲು ಕೇಂದ್ರದಿಂದ ತಜ್ಞರ ತಂಡ ಕರೆಸಲಿ ಎಂದು ಹೇಳಿದರು.
ಸಂಕಷ್ಟ ಸೂತ್ರ ಇಲ್ಲದಿರುವುದರಿಂದ ಸಮಸ್ಯೆ ಆಗುತ್ತಿದೆ. ಮಳೆಯಾದಾಗ ಸಮಸ್ಯೆ ಇಲ್ಲ. ಆದರೆ ಮಳೆ ಕೊರತೆಯಾದಾಗ ತೊಂದರೆಯಾಗುತ್ತಿದೆ. ಇದಕ್ಕೆ ಸಂಕಷ್ಟ ಸೂತ್ರವೇ ಪರಿಹಾರ ಎಂದರು.
ಕಾವೇರಿ ನೀರು ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಧಾನಿಗೆ ಪತ್ರ ಬರೆದಿರುವುದನ್ನು ನಾವು ಸ್ವಾಗತಿಸುತ್ತೇವೆ. ಈಗ ಅವರದು ಬಿಜೆಪಿ ಜೊತೆಗೆ ಹೊಸ ಪ್ರೇಮ. ಅವರು ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಲಿ. ಆದರೆ ರಾಜ್ಯ ಸರ್ಕಾರ ಸರಿಯಾದ ನಿರ್ಧಾರ ಕೈಗೊಳ್ಳಲಿಲ್ಲ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿರುವುದನ್ನು ನಾವು ಒಪ್ಪುವುದಿಲ್ಲ ಎಂದರು.
ನಮ್ಮಲ್ಲೇ ನೀರಿಲ್ಲ: ನಮ್ಮಲ್ಲೇ ನೀರು ಇಲ್ಲ, ಇನ್ನು ತಮಿಳುನಾಡಿಗೆ ಹೇಗೆ ನೀರು ಬಿಡಲು ಸಾಧ್ಯ? ನಾವು ಕುಡಿಯುವ ನೀರಿಗೂ ಪರಿತಪಿಸುತ್ತಿದ್ದೇವೆ. ತಮಿಳುನಾಡಿನವರು ಕುರುವೈ ಬೆಳೆಗಾಗಿ ನೀರು ಕೇಳುತ್ತಿದ್ದಾರೆ. ತಮಿಳುನಾಡಿನ ಬೇಡಿಕೆಗೆ ತಕ್ಕಂತೆ ನೀರು ಬಿಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಒಂದು ಕಡೆ ಬರಗಾಲ, ಮತ್ತೊಂದು ಕಡೆ ಕಾವೇರಿ ನೀರಿನ ಸಮಸ್ಯೆ ಉದ್ಭವಿಸಿದೆ. ಪ್ರತಿ ವರ್ಷ ತಮಿಳುನಾಡಿಗೆ 177.25 ಟಿಎಂಸಿ ನೀರು ಬಿಡಬೇಕು. ಆದರೆ, ನಮ್ಮ ಜಲಾಶಯಗಳಲ್ಲಿ ಒಟ್ಟಾರೆ 50 ಟಿಎಂಸಿ ನೀರು ಮಾತ್ರವಿದೆ ಎಂದರು.
ಚಾ.ನಗರಕ್ಕೆ ಭೇಟಿ ಕೊಟ್ರೆ ಅಧಿಕಾರ ಹೋಗುತ್ತೆನ್ನುವುದು ಸುಳ್ಳು:ಸಿಎಂ
ವಿರೋಧ ಪಕ್ಷಗಳಿಂದ ರಾಜಕೀಯ: ಕಾವೇರಿ ವಿಚಾರದಲ್ಲಿ ವಿರೋಧ ಪಕ್ಷಗಳಿಗೆ ವಸ್ತುಸ್ಥಿತಿ ಗೊತ್ತಿದ್ದರೂ ಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ. ರೈತರ ಪ್ರತಿಭಟನೆ ಸರಿ ಇದೆ. ಆದರೆ, ಬಿಜೆಪಿ- ಜೆಡಿಎಸ್ ಪಕ್ಷದವರು ಇದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳು 5 ಗ್ಯಾರಂಟಿಗಳಿಂದ ಹತಾಶರಾಗಿ ಈಗ ಕಾವೇರಿ ನೀರು ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.