ವಯನಾಡು ದುರಂತದ ಕಾರ್ಯಾಚರಣೆ ಮಾಡ್ತಿರೋ ಜಿಲ್ಲಾಧಿಕಾರಿ, ಕೇರಳಿಗರ ಮನ ಸೆಳೆದ ಕೋಟೆನಾಡಿನ ವೀರ ನಾರಿ ಮೇಘಶ್ರೀ!
ದೇವರನಾಡು ಕೇರಳದ ವಯನಾಡಲ್ಲಿ ನಡೆದ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಭಾರೀ ಮಳೆಯಿಂದ ಗುಡ್ಡ ಕುಸಿದು ನದಿಯ ದಿಕ್ಕೇ ತಪ್ಪಿ ನಾಲ್ಕು ಊರುಗಳೇ ನೀರಲ್ಲಿ ಕೊಚ್ಚಿ ಹೋಗಿವೆ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಆ.04): ದೇವರನಾಡು ಕೇರಳದ ವಯನಾಡಲ್ಲಿ ನಡೆದ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಭಾರೀ ಮಳೆಯಿಂದ ಗುಡ್ಡ ಕುಸಿದು ನದಿಯ ದಿಕ್ಕೇ ತಪ್ಪಿ ನಾಲ್ಕು ಊರುಗಳೇ ನೀರಲ್ಲಿ ಕೊಚ್ಚಿ ಹೋಗಿವೆ. ಇಂತಹ ಜಿಲ್ಲೆಗೆ ಡಿಸಿಯಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ದಿಟ್ಟತನ ತೋರಿದ ಚಿತ್ರದುರ್ಗ ಮೂಲದ ವೀರ ವನಿತೆ ಕುರಿತ ಒಂದು ವರದಿ ಇಲ್ಲಿದೆ ನೋಡಿ. ಮಗಳ ರಕ್ಷಣಾ ಕಾರ್ಯಾಚರಣೆ ಕಂಡು ಪುಳಕಿತರಾದ ಕುಟುಂಬವರ್ಗ. ದಿಟ್ಟ ಅಧಿಕಾರಿಯಾಗಿ ಕೇರಳಿಗರ ಮನ ಸೆಳೆದ ಕನ್ನಡತಿ, ಕೋಟೆನಾಡಿನ ವೀರ ನಾರಿ ಮೇಘಶ್ರೀ.
ಹೌದು, ಕೇರಳದ ವಯನಾಡಲ್ಲಿ ಘನಘೋರ ಎನಿಸುವ ದೊಡ್ಡ ದುರಂತ ನಡೆದಿದೆ. ಸಾವು ನೋವುಗಳಿಂದ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಆದ್ರೆ ವಯನಾಡಿನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ,20 ದಿನಗಳಲ್ಲೇ ನಡೆದ ಘೋರ ದುರಂತದಿಂದಾಗಿ ಎದೆಗುಂದದೇ ಚಿತ್ರದುರ್ಗದ ಒನಕೆ ಓಬವ್ವಳಂತೆ ದಿಟ್ಟತನದಿಂದ ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಡಿಸಿ ಮೇಘಶ್ರೀ ಕಾರ್ಯ ಶ್ಲಾಘನೀಯ ಎನಿಸಿದೆ. ಘಟನಾ ಸ್ಥಳದಲ್ಲೇ ಹಗಲಿರುಳು ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಓರ್ವ ಕನ್ನಡತಿ ಮಾತ್ರವಲ್ಲ.
ಕೋಟೆನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿಯ ಮನೆ ಮಗಳು ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಹಾಗೆಯೇ,ಅವರ ಕುಟುಂಬ ವರ್ಗ ಸಹ ಮೇಘಶ್ರೀ ಕಾರ್ಯ ದಕ್ಷತೆ ಕಂಡು ಅಚ್ಚರಿಗೊಂಡಿದ್ದು, ಮನೆ ಮಗಳ ಕಾರ್ಯಸಾಧನೆಗೆ ಸ್ಪೂರ್ತಿ ನೀಡಿದ್ದಾರೆ. ಕೇರಳದಲ್ಲಿ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಹೆಚ್ಚಿನ ಸೇವೆ ನೀಡುವಂತೆ ಅವರ ತಂದೆ ರುದ್ರಮುನಿ ಹಾರೈಸಿದ್ದಾರೆ. ಇನ್ನು ವಯನಾಡು ಡಿಸಿ ಮೇಘಶ್ರೀ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಓದಿದ್ದಾರೆ.
ಸರ್ಕಾರಿ ಶಾಲೆಗಳೆಂದರೆ ಒಂದು ಕಾಲದಲ್ಲಿ ತಿರಸ್ಕಾರ ಭಾವವಿತ್ತು, ಇದೀಗ ಪುರಸ್ಕಾರ ಬಂದಿದೆ: ಸಚಿವ ಮಧು ಬಂಗಾರಪ್ಪ
ಮೂರ‍್ನಾಲ್ಕು ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದು, ಐಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. 2016ರಲ್ಲಿ ತಮ್ಮ ಎರಡನೇ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿರುವ ಮೇಘಶ್ರೀ ಯವರಿಗೆ ಎರಡೂವರೆ ವರ್ಷದ ವಿಸ್ಮಯಾ ಹಾಗೂ 6 ತಿಂಗಳ ಧೃತಿಯಾ ಎಂಬ ಇಬ್ಬರು ಮಕ್ಕಳಿದ್ದಾರೆ. ಮೇಘಶ್ರೀ ಅವರ ಪತಿ ವಿಕ್ರಂ ಸಿಂಹ, ವಿಜ್ಞಾನಿಯಾಗಿದ್ದು ಕೇರಳಾದಲ್ಲೇ ನೆಲೆಸಿದ್ದಾರೆ.ಇವರ ಸಾಧನೆಗೆ ಅವರ ಸೋದರತ್ತೆ ಆನಂದಭಾಷ್ಪ ಸುರಿಸಿದ್ದಾರೆ. ಒಟ್ಟಾರೆ ಕೇರಳದ ವಯನಾಡು ದುರಂತದಲ್ಲಿ ಚಿತ್ರದುರ್ಗ ಮೂಲದ ಡಿಸಿ ಮೇಘಶ್ರೀ ರಕ್ಷಣಾ ಕಾರ್ಯಾಚರಣೆ ಶ್ಲಾಘನೀಯ. ಅವರ ದಿಟ್ಟತನದ ಸಾಧನೆ ಕನ್ನಡಿಗರಿಗೊಂದು ಗರಿ.