ಬಾವಿಗೆ ನೀರು ತುಂಬುವ ಸಮಯದಲ್ಲಿ ಟ್ರ್ಯಾಕ್ಟರ್‌ ನಿಯಂತ್ರಣ ತಪ್ಪಿ ಚಾಲಕ ಬಾವಿಗೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ವಿಜಯಪುರ[ಜ.31]: ಟ್ಯಾಂಕರ್‌ ಮೂಲಕ ಬಾವಿಗೆ ನೀರು ತುಂಬುವ ಸಮಯದಲ್ಲಿ ಟ್ರ್ಯಾಕ್ಟರ್‌ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದ ತೋಟದ ವಸ್ತಿಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗ್ರಾಮದ ಮಾಳಪ್ಪ ಅವದುರಿಸಿದ್ದ ನರೂಟಿ (24) ಸ್ಥಳದಲ್ಲೇ ಮೃತಪಟ್ಟವ್ಯಕ್ತಿ. ರಾತ್ರಿ ಮಲ್ಲಿಕಾರ್ಜುನ ಕೊಂಗನಳ್ಳಿ ಎಂಬುವರ ಹೊಲದಲ್ಲಿ ಬಾವಿಗೆ ನೀರು ಪೂರೈಕೆ ಮಾಡಲು ಟ್ರ್ಯಾಕ್ಟರ್‌ ಹಿಂಬದಿ ನಡೆಸುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಟ್ರ್ಯಾಕ್ಟರ್‌ ಟ್ಯಾಂಕರ್‌ ಸಮೇತ ಬಾವಿಗೆ ಬಿದ್ದಿದೆ. ಆಗ ಚಾಲಕನಿಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ಅಸುನೀಗಿದ್ದಾನೆ.

ಕ್ರೇನ್‌ ಮೂಲಕ ಟ್ರ್ಯಾಕ್ಟರ್‌ ಅನ್ನು ಹೊರ ತೆಗೆಯಲಾಗಿದೆ. ಕಳೆದ ವರ್ಷವೇ ಮಾಳಪ್ಪನ ವಿವಾಹವಾಗಿದ್ದು, ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಈ ಬಗ್ಗೆ ತಿಕೋಟಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.