ಕೆಆರ್‌ಎಸ್‌ಗೆ ಒಳ ಹರಿವು ಹೆಚ್ಚಳ, 100 ಅಡಿ ದಾಟಿದ್ದಕ್ಕೆ ರಾಜ್ಯ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ!
ಕೆಆರ್‌ಎಸ್ ಡ್ಯಾಂ 100 ಅಡಿ ಭರ್ತಿಯಾಗಿದೆ. ಹೀಗಾಗಿ ರಾಜ್ಯ ಸರ್ಕಾರದಿಂದ ಅನ್ನದಾತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಜುಲೈ 8 ರಿಂದ ನಾಲೆಗಳಿಗೆ ನೀರು ಹರಿಸಲು ಪ್ಲಾನ್ ಮಾಡಲಾಗಿದೆ.
ಬೆಂಗಳೂರು (ಜು.5): ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣ ಮಳೆಯಾಗುತ್ತಿದ್ದು, ಬತ್ತಿ ಬರಡಾಗಿದ್ದ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದೀಗ ಪ್ರಸಿದ್ಧ ಕಾವೇರಿ ಜಲಾನಯನ ಪ್ರದೇಶದಲ್ಲಿ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ ಜಲಾಶಯಕ್ಕೆ ಒಳ ಹರಿವಿನಲ್ಲಿ ಮತ್ತಷ್ಟು ಏರಿಕೆಯಾಗಿದೆ.
ಕೊಡಗು, ಭಾಗಮಂಡಲ ಸೇರಿದಂತೆ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಕನ್ನಂಬಾಡಿ ಅಣೆಕಟ್ಟೆಗೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಹೀಗಾಗಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ 100 ಅಡಿ ಭರ್ತಿಯಾಗಿದೆ. ಕಳೆದ 15 ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಚುರುಕುಗೊಂಡಿದೆ. ಕೆಆರ್‌ಎಸ್ ಡ್ಯಾಂಗೆ ಎರಡು ವಾರದಿಂದ ಸರಾಸರಿ 10 ಸಾವಿರ ಕ್ಯೂಸೆಕ್ ಒಳಹರಿವು ಆಗಿದೆ. ಇದರ ಬೆನ್ನಲ್ಲೇ ಕೆಆರ್‌ಎಸ್ ಡ್ಯಾಂ ಇದೀಗ 100 ಅಡಿ ಭರ್ತಿಯಾಗಿದೆ. ಕೆಆರ್‌ಎಸ್ 100 ಅಡಿ ಭರ್ತಿ ಹಿನ್ನೆಲೆ ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಇನ್ನಷ್ಟು ಚುರುಕುಗೊಂಡರೆ ಶೀಘ್ರ ಕೆಆರ್‌ಎಸ್ ಭರ್ತಿಯಾಗಲಿದೆ.
ರಾಜ್ಯದಲ್ಲಿ ಅಧಿಕ ಮಳೆ, ಬತ್ತಿ ಬರಡಾಗಿದ್ದ ತುಂಗಭದ್ರಾ ಸೇರಿ ಎಲ್ಲಾ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳ
ಇದೀಗ 100 ಅಡಿ ಭರ್ತಿಯಾದ ರಾಜ್ಯ ಸರ್ಕಾರದಿಂದ ಅನ್ನದಾತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಜುಲೈ 8 ರಿಂದ ನಾಲೆಗಳಿಗೆ ನೀರು ಹರಿಸಲು ಪ್ಲಾನ್ ಮಾಡಲಾಗಿದೆ. ಜುಲೈ 6ರಂದು ಬೆಂಗಳೂರಿನಲ್ಲಿ ನಡೆಯಲಿರುವ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದ್ದು, ನಾಳಿನ ಸಭೆಯಲ್ಲಿ ನಾಲೆಗೆ ನೀರು ಹರಿಸಲು ಅಧಿಕೃತ ಆದೇಶ ಹೊರಡಿಸಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಂಡ್ಯ ಉಸ್ತುವಾರಿ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿಯಿಂದ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಬರಗಾಲ ಹಿನ್ನೆಲೆ ರೈತರ ಬೇಡಿಕೆಯಂತೆ ನೀರು ಹರಿಸಲು ಸಾಧ್ಯವಾಗಿಲ್ಲ. ಸದ್ಯ ಈ ಬಾರಿ ಜಲಾಶಯದಲ್ಲಿ 100 ಅಡಿಗೆ ಡ್ಯಾಂನ ನೀರಿನ ಮಟ್ಟ ತಲುಪಿದೆ. ಜುಲೈ 8 ರಿಂದ ನಾಲೆಗಳಿಗೆ ನೀರು ಬಿಡಲು ಸಿದ್ದತೆಯಾಗ್ತಿದೆ. ರೈತರು ಕೃಷಿ ಚಟುವಟಿಕೆ ಆರಂಭಿಸಿ ಉತ್ತಮ ಬೆಳೆ ಬೆಳೆಯಿರಿ ಎಂದು ರೈತರಿಗೆ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.
ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟವರಿಂದಲೇ ಮುಡಾ ಹಗರಣ ಬಯಲು: ಹೆಚ್‌ಡಿಕೆ ಸ್ಫೋಟಕ ಹೇಳಿಕೆ!
ಕೆಆರ್‌ಎಸ್ ಜಲಾಶಯ ಮಟ್ಟ ಇಂದು ಹೀಗಿದೆ.:
ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 100.30 ಅಡಿ.
ಗರಿಷ್ಠ ಸಾಂದ್ರತೆ - 49.452 ಟಿಎಂಸಿ
ಇಂದಿನ ಸಾಂದ್ರತೆ - 23.047 ಟಿಎಂಸಿ
ಒಳ ಹರಿವು - 9,686 ಕ್ಯೂಸೆಕ್
ಹೊರ ಹರಿವು - 546 ಕ್ಯೂಸೆಕ್