ಮಂಗಳೂರು-ಕೇರಳ ಮಧ್ಯೆ ರೈಲು ಹಳಿ ತಪ್ಪಿಸಲು ನಡೆದಿದ್ಯಾ ಮಹಾ ಸಂಚು?
ಮಂಗಳೂರು ಗಡಿ ಭಾಗದಲ್ಲಿ ವಿಧ್ವಂಸಕ ಕೃತ್ಯಕ್ಕೆ ಭಾರೀ ಸಂಚಿನ ಶಂಕೆ ವ್ಯಕ್ತವಾಗಿದ್ದು, ಮಂಗಳೂರು ಗಡಿ ಭಾಗದ ಕಾಸರಗೋಡಿನ ಹಲವೆಡೆ ರೈಲು ಹಳಿ ತಪ್ಪಿಸಲು ಯತ್ನಿಸಿರುವ ಘಟನೆ ನಡೆದಿದೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಆ.26) : ಮಂಗಳೂರು ಗಡಿ ಭಾಗದಲ್ಲಿ ವಿಧ್ವಂಸಕ ಕೃತ್ಯಕ್ಕೆ ಭಾರೀ ಸಂಚಿನ ಶಂಕೆ ವ್ಯಕ್ತವಾಗಿದ್ದು, ಮಂಗಳೂರು(Mangaluru) ಗಡಿ ಭಾಗದ ಕಾಸರಗೋಡಿ(Kasaragodu)ನ ಹಲವೆಡೆ ರೈಲು ಹಳಿ (Railway track)ತಪ್ಪಿಸಲು ಯತ್ನಿಸಿರುವ ಘಟನೆ ನಡೆದಿದೆ. ಘಟನೆ ಬೆನ್ನಲ್ಲೇ ಕೇರಳ ಪೊಲೀಸ್ ಇಲಾಖೆ(Depertment of Police Kerala)ಹಾಗೂ ರೈಲ್ವೇ ಭದ್ರತಾ ಪಡೆ (RPF) ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿದೆ.
ರೈಲು ಬರುತ್ತಿದ್ದಾಗ ಹಳಿಗೆ ದೂಡಿ ಪತ್ನಿಯ ಹತ್ಯೆ: ಮಕ್ಕಳೆದುರೇ ದುರಂತ
ರೈಲ್ವೇ ಹಳಿ ಮೇಲೆ ಕಲ್ಲು, ಕಬ್ಬಿಣದ ಸರಳು, ಕಾಂಕ್ರೀಟ್ ತುಂಡುಗಳನ್ನಿರಿಸಿ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಲಾಗಿದೆ. ಕಳೆದ ಕೆಲ ದಿನಗಳಲ್ಲಿ ಕೇರಳ ರಾಜ್ಯದ ಕಾಸರಗೋಡಿನ ಹಲವೆಡೆ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ತೃಕ್ಕನ್ನಾಡು, ಕುಂಬಳೆ, ಹೊಸದುರ್ಗ, ತಳಂಗರೆದಲ್ಲಿ ರೈಲು ಹಳಿ ತಪ್ಪಿಸಲು ಯತ್ನಿಸಲಾಗಿದ್ದು, ಅ.21ರ ರವಿವಾರ ಕೋಟಿಕುಳಂ-ಬೇಕಲ(Kotikulam-Bekala) ಮಧ್ಯೆ ತೃಕ್ಕನ್ನಾಡು ದೇಗುಲದ ಹಿಂದುಗಡೆ ರೈಲು ಹಳಿಯಲ್ಲಿ ಕಬ್ಬಿಣದ ಸರಳುಗಳು ಪತ್ತೆಯಾಗಿದೆ.
ರೈಲ್ವೇ ಗಾರ್ಡ್ ಸಮಯಪ್ರಜ್ಞೆಯಿಂದ ಸಂಭಾವ್ಯ ರೈಲು ದುರಂತ ತಪ್ಪಿದ್ದು, 35 ಕಿಲೋ ತೂಕದ ಕಾಂಕ್ರೀಟ್ ತುಂಡನ್ನು ಹಳಿ ಮೇಲೆ ಇರಿಸಿ ದುಷ್ಕೃತ್ಯಕ್ಕೆ ಪ್ಲಾನ್ ಎಸಗಿರೋ ಅನುಮಾನ ವ್ಯಕ್ತವಾಗಿದೆ. ಕುಂಬಳೆ ರೈಲು ನಿಲ್ದಾಣದ 400 ಮೀಟರ್ ದೂರದಲ್ಲೂ ಹಳಿಗಳ ಮೇಲೂ ಕಲ್ಲುಗಳು ಪತ್ತೆಯಾಗಿದ್ದು, ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್), ರೈಲ್ವೇ ಪೊಲೀಸರು ಮತ್ತು ಸ್ಥಳೀಯ ಪೊಲೀಸರಿಂದ ತನಿಖೆ ಆರಂಭವಾಗಿದೆ.
ಮಂಗಳೂರು-ಚೆನ್ನೈ(Mangaluru-Chennai) ಸೂಪರ್‌ಫಾಸ್ಟ್ ರೈಲು(Super fast Train) ಸಂಚರಿಸುವ ಮಾರ್ಗದಲ್ಲಿ ಕಲ್ಲುಗಳು ಪತ್ತೆಯಾದರೆ, ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯ ಹಲವೆಡೆ ರೈಲಿಗೆ ಕಲ್ಲು ತೂರಿದ ಬಗ್ಗೆಯೂ ಮಾಹಿತಿ ಇದೆ. ಕಳೆದ ಶನಿವಾರ ಚಿತ್ತಾರಿ ಎಂಬಲ್ಲಿ ಕೊಯಮತ್ತೂರು-ಮಂಗಳೂರು ರೈಲಿನ ಮೇಲೆ ಕಲ್ಲು ತೂರಾಟವಾಗಿದ್ದು, ಕರ್ನಾಟಕ ಗಡಿ ಭಾಗದ ಕಾಸರಗೋಡಿನ ರೈಲ್ವೇ ಹಳಿಗಳಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿರೋ ಅನುಮಾನ ಮತ್ತಷ್ಟು ಹೆಚ್ಚಾಗಿದೆ.
ಉತ್ತರ ವಲಯ ರೈಲ್ವೇ ಪೊಲೀಸ್ ಡಿವೈಎಸ್ಪಿ ಕೆ.ಎನ್.ರಾಧಾಕೃಷ್ಣನ್(Dysp K.N.Radhakrishnan) ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಎರಡು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳಿಂದ 'ಉದ್ದೇಶಪೂರ್ವಕ' ಕೃತ್ಯದ ಶಂಕೆ ವ್ಯಕ್ತವಾಗಿದೆ. ಕಾಸರಗೋಡು, ಕುಂಬಳೆ, ಕಣ್ಣೂರು ಪೊಲೀಸರಿಂದಲೂ ಸುತ್ತಮುತ್ತ ಗಂಭೀರ ತನಿಖೆ ಆರಂಭಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಗೂಡ್ಸ್, ಪ್ಯಾಸೆಂಜರ್ ರೈಲು ಡಿಕ್ಕಿ: 50 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಕಾಸರಗೋಡು ರೈಲ್ವೇ ನಿಲ್ದಾಣದ ಆರ್‌ಪಿಎಫ್ ತಂಡ ಸ್ಥಳಕ್ಕೆ ಆಗಮಿಸಿ ಅಡೆತಡೆಯನ್ನು ನಿವಾರಿಸಿ ಪರಿಶೀಲನೆ ನಡೆಸಿದೆ. ಕಾಸರಗೋಡು ಕಡೆಗೆ ಬೇಕಲ್-ಕೊಟ್ಟಿಕುಳಂ ವಿಭಾಗದಲ್ಲಿ ಕಬ್ಬಿಣದ ಬ್ಲಾಕ್‌ಗಳು ಪತ್ತೆಯಾದ ಬೆನ್ನಲ್ಲೇ ಎಲ್ಲಾ ಟ್ರ್ಯಾಕ್ ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಭಾರವಾದ ವಸ್ತುವನ್ನು ಟ್ರ್ಯಾಕ್‌ನಲ್ಲಿ ಇಡುವಲ್ಲಿ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳ ಪಾತ್ರವನ್ನು ಆರ್‌ಪಿಎಫ್ ತನಿಖಾ ತಂಡ ಶಂಕಿಸಿದೆ. ಅಲ್ಲದೇ ಈ ರೀತಿ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯ ನಾಲ್ಕೈದು ಕಡೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ವರದಿಯಾಗಿದ್ದು, ಇದೊಂದು ಉದ್ದೇಶಪೂರ್ವಕ ಕೃತ್ಯ ಎಂದು ಶಂಕಿಸಲಾಗಿದೆ.