ಕರ್ನಾಟಕದಲ್ಲಿ ಪಡಿತರ ಹಂಚಿಕೆ ಸ್ಥಗಿತದ ಎಚ್ಚರಿಕೆ..!
ಪಡಿತರ ವಿತರಕರ ಸಮಸ್ಯೆ ಬಗೆಹರಿಸುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಶೀಘ್ರದಲ್ಲೇ ಸಮಸ್ಯೆಗಳನ್ನು ಇತ್ಯರ್ಥ ಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸಿ, ರಾಜ್ಯ ಸರ್ಕಾರದ ನಡೆಯ ವಿರುದ್ಧ ಪ್ರತಿಭಟಿಸುತ್ತೇವೆ ಎಂದು ಹೇಳಿದ ಸಂಘದ ಅಧ್ಯಕ್ಷ ಕೃಷ್ಣ ಡಿ.ನಾಯ್ಕ

ಬೆಂಗಳೂರು(ನ.08): ಪ್ರತಿ ಕ್ವಿಂಟಾಲ್ ಆಹಾರ ಧಾನ್ಯ ವಿತರಣೆಗೆ 250 ರು.ಕಮಿಷನ್ ಕೊಡಬೇಕು. ಇ-ಕೆವೈಸಿ ಮಾಡಿರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಪಡಿತರ ಹಂಚಿಕೆ ಸ್ಥಗಿತಗೊಳಿಸಿ ಹೋರಾಟ ಕೈಗೊಳ್ಳುವುದಾಗಿ ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಎಚ್ಚರಿಸಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೃಷ್ಣ ಡಿ.ನಾಯ್ಕ, ಪಡಿತರ ವಿತರಕರ ಸಮಸ್ಯೆ ಬಗೆಹರಿಸುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಶೀಘ್ರದಲ್ಲೇ ಸಮಸ್ಯೆಗಳನ್ನು ಇತ್ಯರ್ಥ ಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸಿ, ರಾಜ್ಯ ಸರ್ಕಾರದ ನಡೆಯ ವಿರುದ್ಧ ಪ್ರತಿಭಟಿಸುತ್ತೇವೆ ಎಂದು ಹೇಳಿದರು.
ಪಡಿತರ ವಿತರಕರಿಂದ ಹಣ ವಸೂಲಿ?: ದುಡ್ಡು ನೀಡದಿದ್ರೆ ನಡೆಯುತ್ತೆ ರೈಡ್..!
ಸಂಘದ ಕೋಶಾಧ್ಯಕ್ಷ ಡಿ.ಜಿ.ಶಿವಾನಂದಪ್ಪ ಮಾತನಾಡಿ, ರಾಜ್ಯ ಸರ್ಕಾರ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ದಿನಕ್ಕೊಂದು ಕಾನೂನು ತರುವ ಮೂಲಕ ಸಮಸ್ಯೆ ತಂದೊಡ್ಡುತ್ತಿದೆ. ಪ್ರತಿ ನ್ಯಾಯಬೆಲೆ ಅಂಗಡಿಗೆ 300ರಿಂದ 400 ಕಾರ್ಡ್‌ಗಳಿದ್ದು, ಪಡಿತರ ವಿತರಣೆಯಿಂದ ಕೇವಲ 9ರಿಂದ 10 ಸಾವಿರ ಕಮಿಷನ್ ಸಿಗುತ್ತಿದೆ. ಆದರೆ, ರಶೀದಿ ಪ್ರಿಂಟರ್, ವಿದ್ಯುತ್, ಅಂಗಡಿ ಬಾಡಿಗೆ ಸೇರಿದಂತೆ ಮತ್ತಿತರ ಖರ್ಚುಗಳು ಸೇರಿ ಪ್ರತಿ ತಿಂಗಳು ಕನಿಷ್ಠ 20ರಿಂದ 25 ಸಾವಿರ ರು. ವೆಚ್ಚವಾಗುತ್ತಿದೆ. ಇದರಿಂದ ಪಡಿತರ ವಿತರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಬೆಂಗಳೂರು ನಗರ ಅಧ್ಯಕ್ಷ ಜೆ.ಬಿ.ಕುಮಾರ್ ಮಾತನಾಡಿ, 65 ವರ್ಷ ಮೇಲ್ಪಟ್ಟ ವಿತರಕರು ಮರಣ ಹೊಂದಿದರೆ ಅವರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಅಂಗಡಿ ಮಂಜೂರು ಮಾಡಿ ಪ್ರಾಧಿಕಾರ ನೀಡಬೇಕು. ಪಡಿತರ ವಿತರಣೆ ಮಾಡಿದ ರಶೀದಿ ನೀಡಲು ಸರ್ಕಾರದಿಂದ ಪ್ರಿಂಟರ್ ನೀಡಬೇಕು ಎಂದು ಒತ್ತಾಯಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಕೆ.ರಾಮಚಂದ್ರ ಉಪಸ್ಥಿತರಿದ್ದರು.