ಆಕ್ಸಿಜನ್‌ಗೆ ತೀವ್ರ ಅಭಾವ ಸೃಷ್ಟಿಯಾದ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಸರ್ಕಾರ, ಯಾವುದೇ ಸಮಸ್ಯೆಯಾಗದಂತೆ ಆಕ್ಸಿಜನ್‌ ಪೂರೈಕೆ ನಿರ್ವಹಿಸಲು ಪ್ರತ್ಯೇಕ ವಾರ್‌ ರೂಂ ರಚನೆ ಮಾಡಿದೆ.

ಬೆಂಗಳೂರು (ಏ.19):  ಕೊರೋನಾ ಗಂಭೀರ ಸೋಂಕಿತರಿಗೆ ಅಗತ್ಯವಾದ ಮೆಡಿಕಲ್‌ ಆಕ್ಸಿಜನ್‌ಗೆ ತೀವ್ರ ಅಭಾವ ಸೃಷ್ಟಿಯಾದ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಸರ್ಕಾರ, ಯಾವುದೇ ಸಮಸ್ಯೆಯಾಗದಂತೆ ಆಕ್ಸಿಜನ್‌ ಪೂರೈಕೆ ನಿರ್ವಹಿಸಲು ಪ್ರತ್ಯೇಕ ವಾರ್‌ ರೂಂ ರಚನೆ ಮಾಡಿದೆ.

"

ಬೆಂಗಳೂರಿನ ಅರಮನೆ ರಸ್ತೆಯ ಔಷಧ ನಿಯಂತ್ರಣ ಕಚೇರಿಯಲ್ಲಿ ಈ ವಾರ್‌ ರೂಂ ರಚನೆ ಮಾಡಲಾಗಿದ್ದು, ಆಕ್ಸಿಜನ್‌ ಸಮಸ್ಯೆ ಎದುರಾದಲ್ಲಿ ಸಂಬಂಧಪಟ್ಟಯಾವುದೇ ಆಸ್ಪತ್ರೆಗಳು, ವೈದ್ಯರು ಹಾಗೂ ಸಾರ್ವಜನಿಕರು ಈ ವಾರ್‌ ರೂಂ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಲು ಪ್ರಯೋಜನ ಪಡೆಯಬಹುದು. ವಿವರಗಳಿಗೆ ಕಚೇರಿ ದೂ: 080-22262846 ಅಥವಾ ಮೊ: 9448478874 ಸಂಪರ್ಕಿಸಬಹುದು ಎಂದು ಔಷಧ ನಿಯಂತ್ರಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ನಿಲ್ಲದ ಕೊರೋನಾ ಕಾಟ: ಇಂದಿನಿಂದ ಈ ನಗರಗಳಲ್ಲಿ ನೈಟ್‌ ಕರ್ಫ್ಯೂ ಜಾರಿ..! ..

ಆಕ್ಸಿಜನ್‌ ಪೂರೈಕೆಗೆ ಒತ್ತಾಯಿಸಿದ್ದ ‘ಫನಾ’: ಶನಿವಾರ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಮ್‌ಗಳ ಸಂಘ-ಕರ್ನಾಟಕ (ಫನಾ) ಆರೋಗ್ಯ ಸಚಿವರಿಗೆ ಪತ್ರ ಬರೆದು ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ಮೆಡಿಕಲ್‌ ಆಕ್ಸಿಜನ್‌ ಕೊರತೆ ಎದುರಿಸುತ್ತಿರುವುದರಿಂದ ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಸಮರ್ಪಕ ಪ್ರಮಾಣದ ಆಕ್ಸಿಜನ್‌ ಪೂರೈಕೆಗೆ ಕ್ರಮ ವಹಿಸಬೇಕೆಂದು ಆಗ್ರಹಿಸಿತ್ತು.

‘ರಾಜ್ಯದ ಸಾಕಷ್ಟುಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಪೂರ್ಣ ಖಾಲಿಯಾಗಿದ್ದು, ಇನ್ನೂ ಹಲವು ಆಸ್ಪತ್ರೆಗಳಲ್ಲಿ ಖಾಲಿಯಾಗುವ ಹಂತ ತಲುಪಿದೆ. ಆಕ್ಸಿಜನ್‌ ಪೂರೈಕೆದಾರರು ಸಮರ್ಪಕವಾಗಿ ಪೂರೈಕೆ ಮಾಡದೆ ಸ್ಥಗಿತಗೊಳಿಸಿದ್ದಾರೆ. ಪೂರೈಕೆ ಸಂಬಂಧ ಯಾವುದೇ ಪ್ರತಿಕ್ರಿಯೆಯನ್ನೂ ನೀಡುತ್ತಿಲ್ಲ. ಆಕ್ಸಿಜನ್‌ ಪೂರೈಕೆಯಲ್ಲಿ ಕೊರತೆ, ಸ್ಥಗಿತ ಉಂಟಾದರೆ ಭಾರೀ ಅನಾಹುತವಾಗಲಿದೆ’ ಎಂದು ಎಚ್ಚರಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಭಾನುವಾರ ಆಕ್ಸಿಜನ್‌ ಪೂರೈಕೆ ನಿರ್ವಹಿಸಲು ಪ್ರತ್ಯೇಕ ವಾರ್‌ ರೂಂ ರಚನೆ ಮಾಡಿದೆ.