ವಕ್ಫ್ ಬೋರ್ಡ್ ಆಸ್ತಿ ವಿಚಾರ ವಿಧಾನಸಭೆಯಲ್ಲಿ ಮಂಡನೆಯಾಗಿದ್ದು, ಇದೀಗ ಹಲವು ಮುಖಂಡರ ಎದೆಯಲ್ಲಿ ನಡುಕ ಶುರುವಾಗಿದೆ.
ವಿಧಾನಸಭೆ (ಸೆ.24): ತೀವ್ರ ವಿವಾದ ಹಾಗೂ ರಾಜಕೀಯ ಜಗ್ಗಾಟಕ್ಕೆ ಕಾರಣವಾಗಿದ್ದ ರಾಜ್ಯ ವಕ್ಫ್ ಆಸ್ತಿ ವಂಚನೆ ಕುರಿತು ಅನ್ವರ್ ಮಾಣಿಪ್ಪಾಡಿ ಅಧ್ಯಕ್ಷರಾಗಿದ್ದ ವೇಳೆ ರಾಜ್ಯ ಅಲ್ಪಸಂಖ್ಯಾತ ಆಯೋಗ ಸಲ್ಲಿಸಿದ ವಿಶೇಷ ಅಧ್ಯಯನ ವರದಿಯನ್ನು ರಾಜ್ಯ ಸರ್ಕಾರ ಎಂಟು ವರ್ಷಗಳ ನಂತರ ವಿಧಾನಸಭೆಯಲ್ಲಿ ಮಂಡಿಸಿದೆ.
ವಕ್ಫ್ ಮಂಡಳಿಯ ಅಧೀನದಲ್ಲಿರುವ ವಕ್ಫ್ ಸಂಸ್ಥೆಗಳ ಎಲ್ಲ ಆಸ್ತಿಗಳ ಭೂಮಿ ಲೆಕ್ಕ ಪರಿಶೋಧನೆ ಮಾಡಬೇಕು, ವಕ್ಫ್ ಆಸ್ತಿ ವಂಚನೆಯಲ್ಲಿ ಭಾಗವಹಿಸಿ ತಪ್ಪಿತಸ್ಥ ಎಲ್ಲರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ ಹಲವು ಶಿಫಾರಸುಗಳನ್ನು ಮಾಡಿದೆ.
ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಬುಧವಾರ ಸದನದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ವಿಶೇಷ ವರದಿಯನ್ನು ಮಂಡಿಸಿದರು. ಈ ಹಿಂದೆ ಆಯೋಗದ ಅಧ್ಯಕ್ಷರಾಗಿದ್ದ ಆರ್.ಅಬ್ದುಲ್ ರಿಯಾಜ್ ಖಾನ್ ವಿರುದ್ಧ ಸೂಕ್ತ ಕ್ರಮಕೊಂಡು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ವಕ್ಫ್ ಮಂಡಳಿಯನ್ನು 12 ತಿಂಗಳಲ್ಲಿ ಅತ್ಯಂತ ಪಾರದರ್ಶಕ ಮತ್ತು ಸ್ವಾಭಿಮಾನಿಯಾಗಿ ಮಾಡಬೇಕು. ಮುಂದಿನ ದಿನದಲ್ಲಿ ಮಂಡಳಿಯ ಎಲ್ಲ ಸಂಸ್ಥೆಗಳ ಅರ್ಥಪೂರ್ಣವಾಗಿ ಕಾರ್ಯನಿರ್ವಹಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. .
ಆಸ್ತಿ ತೆರಿಗೆ ಕಟ್ಟದಿದ್ದರೆ ಚರಾಸ್ತಿ ಜಪ್ತಿ..! ..
ವಕ್ಫ್ ಮಂಡಳಿಗೆ ಸೇರಿದ ವಕ್ಫ್ ಸಂಸ್ಥೆಗಳು ಹೊಂದಿರುವ ಎಲ್ಲ ಆಸ್ತಿಗಳ ಭೂಮಿ ಲೆಕ್ಕ ಪರಿಶೋಧನೆಯನ್ನು ಕೈಗೆತ್ತಿಕೊಳ್ಳಬೇಕು. ಬೀದರ್‌ನಲ್ಲಿನ ಆಸ್ತಿಯನ್ನು ಸಮೀಕ್ಷೆ ಮಾಡಲು ಹಿರಿಯ ಅಧಿಕಾರಿಯ ನೇತೃತ್ವದಲ್ಲಿ ಉಪ ಆಯುಕ್ತರು, ಸಹಾಯಕ ಆಯುಕ್ತರು, ತಹಸೀಲ್ದಾರರು ಮತ್ತು ಸರ್ವೇಯರ್‌ಗಳನ್ನೊಳಗೊಂಡಿರುವ ಒಂದು ವಿಶೇಷ ಉದ್ದೇಶದ ಪಡೆಯನ್ನು ನಿರ್ಮಿಸಬೇಕು. ಆರು ತಿಂಗಳಲ್ಲಿ ಸಮೀಕ್ಷೆಯನ್ನು ಸಂಪೂರ್ಣಗೊಳಿಸಬೇಕು ಎಂದು ಸಲಹೆ ಮಾಡಿದೆ.
ಆಸ್ತಿಗಳನ್ನು ಮರು ಸ್ಥಾಪಿಸಲು ಕಂದಾಯ ಇಲಾಖೆಯಿಂದ ಅಧಿಕಾರಿಗಳನ್ನು ನೇಮಿಸಬೇಕು, ಪೊಲೀಸ್ ಮತ್ತು ಕಾನೂನು ವಿಭಾಗದ ಹಿರಿಯ ಅಧಿಕಾರಿಯ ಸುಪರ್ದಿಯಲ್ಲಿ ವಕ್ಫ್ ಆಸ್ತಿಗಳ ಕಾರ್ಯಪಡೆಯನ್ನು ರಚಿಸಬೇಕು. ವಕ್ಫ್ ಆಸ್ತಿಗಳ ಯಾವುದೇ ವಂಚನೆಯ ಕಾರ್ಯಗಳಲ್ಲಿ ಭಾಗಹಿಸಿ ತಪ್ಪಿತಸ್ಥರೆಂದು ಸಾಬೀತಾದರೆ ಎಲ್ಲ ವಕ್ಫ್ ಅಧಿಕಾರಿಗಳು, ಮಂಡಳಿಯ ಅಧ್ಯಕ್ಷರು, ಸದಸ್ಯರು, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರು, ಚುನಾಯಿತ ಪ್ರತಿನಿಧಿಗಳು, ರಾಜಕೀಯ ನಾಯಕರು ಮತ್ತು ಸಮಾಜ ಸುಧಾರಕರ ಸೋಗು ಹಾಕುವವರ ವಿರುದ್ಧ ಕ್ರಿಮಿನಲ್ ಕ್ರಮವನ್ನು ಕೈಗೊಳ್ಳಬೇಕು. ವಕ್ಫ್ ಕಾನೂನು 1995 ಮತ್ತು ಕರ್ನಾಟಕ ರಾಜ್ಯ ವಕ್ಫ್ ನಿಯಮಗಳ 1997 ಇವೆರಡಕ್ಕೂ ಸೂಕ್ತ ತಿದ್ದುಪಡಿ ತಂದು ಅತಿಕ್ರಮಣ ಮತ್ತು ದುರ್ಬಳಕೆ ಎರಡೂ ಒಂದು ಶಿಕ್ಷರ್ಹಾ ಅಪರಾಧ ಎಂದು ಮಾಡಬೇಕು. ವಿವಿಧ ಜಿಲ್ಲೆಯಲ್ಲಿ ವಕ್ಫ್ ಆಸ್ತಿಗಳ ಮೇಲೆ ಸರ್ಕಾರಿ ಏಜೆನ್ಸಿಗಳು ಅತಿಕ್ರಮಣ ನಡೆಸಿದ ಪ್ರಕರಣವನ್ನೂ ಸಹ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು ಗುರುತಿಸಬೇಕು ಮತ್ತು ಈ ಆಸ್ತಿಗಳಿಂದ ಅವಶ್ಯಕ ಬಾಡಿಗೆಯನ್ನು ಸಂಗ್ರಹಿಸಲು ಪ್ರಾರಂಭಿಸಬೇಕು. ಬಾಡಿಗೆಯನ್ನು ಮುಸ್ಲಿಂ ಸಮುದಾಯದ ಉನ್ನತಿಗಾಗಿ ಸರಿಯಾದ ಮಾರ್ಗಸೂಚಿಗಳೊಡನೆ ಸಂಬಂಧಿತ ವಕ್ಫ್ ಸಂಸ್ಥೆಗೆ ನೀಡಬೇಕು ಎಂದು ತಿಳಿಸಲಾಗಿದೆ.
ರಾಜ್ಯ ಸರ್ಕಾರವು ಕ್ರಮ ಜರುಗಿಸಲು ಹಿಂಜರಿಕೆ ತೋರಿದರೆ ವಿವಿಧ ವಕ್ಫ್ ಆಸ್ತಿಗಳು ಸಹ ಅತಿಕ್ರಮಣಗಳು, ದುರ್ಬಳಕೆ, ರಾಜಿಗಳು, ಕಾನೂನು ಬಾಹಿರ ವಿಲೇವಾರಿ ಇತ್ಯಾದಿಗಳ ಮೂಲಕ ಕಳೆದು ಹೋಗುತ್ತದೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
