ಬೆಂಗಳೂರು(ಸೆ.23): ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 100 ಸುಸ್ತಿದಾರರಿಗೆ ಮೊತ್ತ ಪಾವತಿ ಮಾಡುವಂತೆ ಪಾಲಿಕೆ ನೋಟಿಸ್‌ ಜಾರಿ ಮಾಡುತ್ತಿದೆ.

ಬಿಬಿಎಂಪಿಗೆ ಈವರೆಗೆ ಸುಮಾರು .1950 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಸಂಗ್ರಹದ ಮೇಲೆಯೂ ಪರಿಣಾಮ ಬೀರಿದೆ. ಕಳೆದ ವರ್ಷಕ್ಕಿಂತ 120ರಿಂದ 140 ಕೋಟಿ ಕಡಿಮೆ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಹೀಗಾಗಿ, ಬಿಬಿಎಂಪಿ ಆಸ್ತಿ ತೆರಿಗೆ ಅತಿ ಹೆಚ್ಚು ಬಾಕಿ ಉಳಿಸಿಕೊಂಡ ನಗರದ 100 ಸುಸ್ತಿದಾರರಿಗೆ ನೋಟಿಸ್‌ ಜಾರಿ ಮಾಡಲಾರಂಭಿಸಿದೆ.

ಆಸ್ತಿ ತೆರಿಗೆ ಕಟ್ಟ​ದವರ ಸ್ಥಿರಾಸ್ತಿ ಜಪ್ತಿ?

ಸಂಸ್ಥೆಗಳು ಶೋಕಾಸ್‌ ನೋಟಿಸ್‌ ಜಾರಿ ತಕ್ಷಣ ತೆರಿಗೆ ಪಾವತಿ ಮಾಡಬೇಕು. ಇಲ್ಲವಾದರೆ ಚರ ಆಸ್ತಿ ಹರಾಜು ಹಾಕುವ ಎಚ್ಚರಿಕೆ ನೀಡಲಾಗಿದೆ. ಬಿಬಿಎಂಪಿ ಕಂದಾಯ ವಿಭಾಗ ಸಿದ್ಧಪಡಿಸಿರುವ ಆಸ್ತಿ ತೆರಿಗೆ ಬಾಕಿದಾರರ ಪಟ್ಟಿಯಲ್ಲಿ ಮಲ್ಲೇಶ್ವರದ ಅಭಿಷೇಕ್‌ ಡೆವಲಪರ್ಸ್‌ ಸಂಸ್ಥೆ 20 ಕೋಟಿ, ನಾಗಬಾವಿಯ ಎಂಎಫ್‌ಎಆರ್‌ ಡೆವಲಪರ್ಸ್‌ 12 ಕೋಟಿ, ಬೋಗಾನಹಳ್ಳಿಯ ಆರ್‌ಎಂಜೆಡ್‌ ವಲ್ಡ್‌ರ್‍ ಇನ್ಫ್ರಾಸ್ಟ್ರಕ್ಚರ್‌ ಸಂಸ್ಥೆ 8 ಕೋಟಿ, ಬಿಳೇಕಹಳ್ಳಿಯ ಎ.ಎಂ.ರಾಮರಾಜು 2.50 ಕೋಟಿ, ಬೆಳ್ಳಂದೂರು ಖಾನೆಯ ದಿವ್ಯಶ್ರೀ ಇನ್ಫ್ರಾಸ್ಟ್ರಕ್ಚರ್‌ ಪ್ರಾಜೆಕ್ಟ್ ಸಂಸ್ಥೆಯ 4.81 ಕೋಟಿ, ಇಪಿಐಪಿ ಕೈಗಾರಿಕಾ ಪ್ರದೇಶದ ಚಾಲೆಟ್‌ ಹೋಟೆಲ್‌ 1.33 ಕೋಟಿ, ಸುಗಮ ವನಿಜಾ ಹೋಲ್ಡಿಂಗ್‌ ಸಂಸ್ಥೆಯ 3.66 ಕೋಟಿ, ಕೃಷ್ಣರಾಜಲೇಔಟ್‌ನ ಎಸ್‌.ಅನಂತರಾಜು 3.36 ಕೋಟಿ, ಸುಪ್ರಿಂ ಬಿಲ್ಡ್‌ ಕ್ಯಾಪ್‌ ಸಂಸ್ಥೆ 3.23 ಕೋಟಿ, ಮಾಗಡಿ ಮುಖ್ಯ ರಸ್ತೆಯ ಟಿ.ಗಂಗಾಧರ್‌ 3.08 ಕೋಟಿ ಸೇರಿದಂತೆ ಒಟ್ಟು 100 ಮಂದಿ ಆಸ್ತಿ ತೆರಿಗೆ ಸುಸ್ತಿದಾರರ ಪಟ್ಟಿಸಿದ್ಧಪಡಿಸಲಾಗಿದೆ.

ಆಸ್ತಿ ತೆರಿಗೆ ಅತಿ ಹೆಚ್ಚು ಬಾಕಿ ಉಳಿಸಿಕೊಂಡ 100 ಮಂದಿ ಸುಸ್ತಿದಾರರ ಪಟ್ಟಿಸಿದ್ಧಪಡಿಸಿ ನೋಟಿಸ್‌ ನೀಡಲಾಗುತ್ತಿದ್ದು, ನಿಗದಿತ ಅವಧಿಯಲ್ಲಿ ಆಸ್ತಿ ತೆರಿಗೆ ಬಾಕಿ ಪಾವತಿ ಮಾಡದಿದ್ದರೆ ಚರ ಆಸ್ತಿ ಜಪ್ತಿಗೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್ ಅವರು ತಿಳಿಸಿದ್ದಾರೆ.