ಬೆಂಗಳೂರು (ಡಿ.20):  ಪ್ರಧಾನಮಂತ್ರಿ ನರೇಂದ್ರ ಮೋದಿ ಆಧುನಿಕ ಭಸ್ಮಾಸುರನಂತಾಗಿದ್ದು, ರೈತ ವಿರೋಧಿ ಕಾನೂನುಗಳ ಮೂಲಕ ಕೃಷಿಕರನ್ನು ನಿರ್ನಾಮ ಮಾಡಲು ಮುಂದಾಗಿದ್ದಾರೆ. ಮೂರು ಕಾಯಿದೆಗಳನ್ನು ತಡೆ ಹಿಡಿಯುವಂತೆ ಸುಪ್ರೀಂಕೋರ್ಟ್‌ ಆದೇಶಿಸಿದ್ದರೂ ಹಟಮಾರಿ ಧೋರಣೆ ಮುಂದುವರೆಸಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಕಿಡಿ ಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದ ರೈತ ವಿರೋಧಿ ಕಾನೂನುಗಳ ವಿರುದ್ಧ 1 ಕೋಟಿಗೂ ಹೆಚ್ಚು ರೈತರು, 500ಕ್ಕೂ ಹೆಚ್ಚು ಸಂಘಟನೆ ಬೀದಿಗಳಿದು ಹೋರಾಟ ನಡೆಸುತ್ತಿವೆ. ಪ್ರತಿಭಟನೆ ಆರಂಭವಾಗಿ 25 ದಿನ ಆದರೂ ರೈತರ ಹೋರಾಟಕ್ಕೆ ನರೇಂದ್ರ ಮೋದಿ ಬೆಲೆ ನೀಡಿರಲಿಲ್ಲ. ಅನ್ನದಾತನನ್ನು ನಿರ್ಲಕ್ಷಿಸುವ ಮೂಲಕ ಧಾರ್ಷ್ಟ್ಯ ತೋರಿದ್ದಾರೆ ಎಂದು ಕಿಡಿ ಕಾರಿದರು.

ಬಿಜೆಪಿಗೆ ತಾಕತ್ತಿದ್ದರೆ ಎಲ್ಲ ಪಕ್ಷಗಳ ನಾಯಕರ ಆಸ್ತಿ ತನಿಖೆ ನಡೆಸಲಿ: ಉಗ್ರಪ್ಪ

ಇದೀಗ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠವು ರೈತರ ಹೋರಾಟವನ್ನು ಎತ್ತಿ ಹಿಡಿದಿದೆ. ಕೂಡಲೇ ಕಾಯಿದೆಗಳ ಅನುಷ್ಠಾನ ತಡೆ ಹಿಡಿಯುವಂತೆ ಆದೇಶಿಸಿದೆ. ಆದರೂ ಕೇಂದ್ರ ಸರ್ಕಾರ ಗಮನವನ್ನೇ ಹರಿಸುತ್ತಿಲ್ಲ. ಹಟಮಾರಿ ಧೋರಣೆ ಮುಂದುವರೆಸಿದ್ದು, ಇದೀಗ ರೈತರನ್ನು ಮಾತುಕತೆಗೆ ಕರೆಯುತ್ತಿದ್ದಾರೆ. ಮೊದಲು ಕಾಯಿದೆಗಳನ್ನು ತಡೆ ಹಿಡಿದು ಈ ಬಗ್ಗೆ ವಿಶೇಷ ಸಮಿತಿ ರಚನೆ ಮಾಡಲಿ ಎಂದು ಒತ್ತಾಯಿಸಿದರು.

ಸುಪ್ರೀಂಕೋರ್ಟ್‌ ಬಗ್ಗೆ ಗೌರವವಿದ್ದರೆ ಮೂರು ಕಾಯಿದೆ ತಡೆಹಿಡಿಯಬೇಕು. ಇಲ್ಲದಿದ್ದರೆ ರೈತರ ಹೋರಾಟ ಹಾಗೂ ರೈತರ ಪರವಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.

- ಸುಪ್ರೀಂಕೋರ್ಟ್‌ ಹೇಳಿದರೂ ಕೃಷಿ ಕಾಯ್ದೆ ತಡೆಹಿಡಿದಿಲ್ಲ

- ರೈತವಿರೋಧಿ ಕಾಯ್ದೆಗಳ ಮೂಲಕ ಕೃಷಿಕರ ನಿರ್ನಾಮ