Asianet Suvarna News Asianet Suvarna News

Bengaluru: ಚಿಲುಮೆಗೆ ಅನುಮತಿ ನೀಡಿದ್ದು ಸರ್ಕಾರವಲ್ಲ: ಅನುಮೋದನೆ ಕೊಟ್ಟಿದ್ದು ಚುನಾವಣಾಧಿಕಾರಿ

ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಗುರುತಿನ ಚೀಟಿ ಮತ್ತು ಆಧಾರ್‌ ಅನ್ನು ಆನ್‌ಲೈನ್‌ ಮೂಲಕ ಲಿಂಕ್‌ ಮಾಡಲು ಹಾಗೂ ಮತದಾರರಲ್ಲಿ ಮತದಾನದ ಅರಿವು ಮೂಡಿಸುವ ಕುರಿತು ಚಿಲುಮೆ ಸಂಸ್ಥೆಗೆ ಅನುಮತಿ ನೀಡಿರುವುದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಪಾಲಿಕೆ ಮುಖ್ಯ ಆಯುಕ್ತರೇ ಹೊರತು ರಾಜ್ಯ ಸರ್ಕಾರವಲ್ಲ. 

Chilume institution was approved by the Election Officer gvd
Author
First Published Nov 19, 2022, 2:33 PM IST | Last Updated Nov 19, 2022, 2:33 PM IST

ಬೆಂಗಳೂರು (ನ.19): ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಗುರುತಿನ ಚೀಟಿ ಮತ್ತು ಆಧಾರ್‌ ಅನ್ನು ಆನ್‌ಲೈನ್‌ ಮೂಲಕ ಲಿಂಕ್‌ ಮಾಡಲು ಹಾಗೂ ಮತದಾರರಲ್ಲಿ ಮತದಾನದ ಅರಿವು ಮೂಡಿಸುವ ಕುರಿತು ಚಿಲುಮೆ ಸಂಸ್ಥೆಗೆ ಅನುಮತಿ ನೀಡಿರುವುದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಪಾಲಿಕೆ ಮುಖ್ಯ ಆಯುಕ್ತರೇ ಹೊರತು ರಾಜ್ಯ ಸರ್ಕಾರವಲ್ಲ. ಇದು ಸಂಪೂರ್ಣವಾಗಿ ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ನಡೆದಿರುವ ಪ್ರಕ್ರಿಯೆಯೇ ಹೊರತು, ಇದರಲ್ಲಿ ರಾಜ್ಯ ಸರ್ಕಾರ ಯಾವುದೇ ಪಾತ್ರ ಹೊಂದಿಲ್ಲ ಎಂದು ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ.

ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬರುವ ಪ್ರತಿಯೊಂದು ಮತಗಟ್ಟೆವ್ಯಾಪ್ತಿಯ ಮನೆಗಳಿಗೆ ಭೇಟಿ ಮಾಡಿ ಮತದಾರರಿಗೆ ಮತದಾನದ ಬಗ್ಗೆ ಹಾಗೂ ಹೊಸದಾಗಿ ಮತದಾರರನ್ನು ನೋಂದಣಿ ಮಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರಾಜ್ಯದ ಮತದಾರರ ಗುರುತಿನ ಚೀಟಿಯ ಜೊತೆಗೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಲು ಕೇಂದ್ರ ಚುನಾವಣಾ ಆಯೋಗವು ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಮತದಾರರು ತಮ್ಮ ಹಾಗೂ ಕುಟುಂಬದ ಆಧಾರ್‌ ಕಾರ್ಡ್‌ಗಳ ನಂಬರ್‌ಗಳನ್ನು ವೋಟರ್‌ ಹೆಲ್ಪ್‌ ಲೈನ್‌ ಆ್ಯಪ್‌ ಮತ್ತು ಗರುಡ ಆ್ಯಪ್‌ ಮೂಲಕ ಲಿಂಕ್‌ ಮಾಡುವ ಕಾರ್ಯಕ್ಕೆ ಚಿಲುಮೆ ಸಂಸ್ಥೆಯ ಸದಸ್ಯರು ಸ್ವಯಂ ಆಸಕ್ತಿಯನ್ನು ಹೊಂದಿದ್ದು ಆಗಸ್ಟ್‌ 16 ಮತ್ತು 19ರಂದು ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರು. 

ಮತದಾರರ ಮಾಹಿತಿ ಕಳವು: ಚಿಲುಮೆ ವಿರುದ್ಧ ಬಿಬಿಎಂಪಿ ದೂರು

ಈ ಹಿನ್ನೆಲೆಯಲ್ಲಿ ಪಾಲಿಕೆಯು 20 ಆಗಸ್ಟ್‌ 2022ರಂದು ಚಿಲುಮೆ ಸಂಸ್ಥೆಗೆ ಅನುಮತಿಯನ್ನು ನೀಡಿ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಎಲ್‌ಓಗಳೊಂದಿಗೆ ಮನೆ ಮನೆಗೆ ಹಾಗೂ ವಸತಿ ಸಮುಚ್ಚಯಗಳಿಗೆ ಭೇಟಿ ನೀಡಿ ಮತದಾರರ ನೋಂದಣಾಧಿಕಾರಿಗಳ ಸಹಯೋಗದೊಂದಿಗೆ ಮತದಾರರ ಪಟ್ಟಿಪರಿಷ್ಕರಣೆ ಜಾಗೃತಿ ಹಾಗೂ ಆಧಾರ್‌ ಸಂಖ್ಯೆಯನ್ನು ಲಿಂಕ್‌ ಮಾಡುವ ಕಾರ್ಯಕ್ಕೆ ಜಿಲ್ಲಾ ಚುನಾವಣಾಧಿಕಾರಿಗಳು ಅನುಮತಿ ನೀಡಿದ್ದರು. ಅಲ್ಲದೆ, ಈ ಅಭಿಯಾನ ನಡೆಸಲು ಸಂಸ್ಥೆಗೆ ಹಲವಾರು ಷರತ್ತುಗಳನ್ನು ವಿಧಿಸಲಾಗಿತ್ತು. ಸದರಿ ಸಂಸ್ಥೆಯು ಯಾವುದೇ ರಾಜಕೀಯ ಪಕ್ಷದೊಂದಿಗೆ ಒಡನಾಟವಾಗಲಿ, ಸಂಬಂಧವಾಗಲಿ ಹೊಂದಿರಬಾರದು, ನಿಷ್ಪಕ್ಷಪಾತವಾಗಿ ಜಾಗೃತಿ ಮೂಡಿಸಬೇಕು, 

ಮತದಾರರ ಮಾಹಿತಿ ಕಳ್ಳತನ, ಬಿಜೆಪಿ ಮೇಲೆ ಮುಗಿಬಿದ್ದ ಕಾಂಗ್ರೆಸ್‌, ಚುನಾವಣಾ ಆಯೋಗದಿಂದ ಸ್ಪಷ್ಟನೆ!

ಈ ಕೆಲಸಕ್ಕೆ ಯಾವುದೇ ಪಕ್ಷದಿಂದ ದೇಣಿಗೆ ಅಥವಾ ಸಂಭಾವನೆ ಪಡೆಯಬಾರದು, ಸಂಸ್ಥೆಯ ವಿರುದ್ಧ ಯಾವುದೇ ದೂರು ಬಂದಲ್ಲಿ ಜಾಗೃತಿ ನಡೆಸಲು ನೀಡಿದ ಅನುಮತಿ ರದ್ದುಗೊಳಿಸಲಾಗುವುದು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಲಾಗಿತ್ತು ಎಂದು ಸರ್ಕಾರದ ಮೂಲಗಳು ವಿವರಿಸಿವೆ. ಅಲ್ಲದೆ, ಈ ಪ್ರಕ್ರಿಯೆಗೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಸಂಪೂರ್ಣವಾಗಿ ಸರ್ಕಾರದ ಹಸ್ತಕ್ಷೇಪ ಇಲ್ಲದೆ ನಡೆದಿರುವ ಪ್ರಕ್ರಿಯೆ. ಹಾಗಾಗಿ, ಚಿಲುಮೆ ಸಂಸ್ಥೆಗೆ ಮತದಾರರ ಮಾಹಿತಿ ಪಡೆಯಲು ಸರ್ಕಾರದಿಂದಲೇ ಅನುಮತಿ ನೀಡಲಾಗಿತ್ತು ಎಂಬ ಆರೋಪ ಹುರುಳಿಲ್ಲದ್ದು ಎಂದು ಸರ್ಕಾರದ ಮೂಲಗಳು ಸಮರ್ಥಿಸಿಕೊಂಡಿವೆ.

Latest Videos
Follow Us:
Download App:
  • android
  • ios