ಕಾಂಗ್ರೆಸ್‌ ವಿರುದ್ಧವೇ ಆಯೋಗಕ್ಕೆ ಬಿಜೆಪಿ ದೂರು ವೋಟರ್‌ಗೇಟ್‌: ಇಂದು ‘ಕೈ’ ದೂರು ಆದರೆ ನಿನ್ನೆ ರಾತ್ರಿಯೇ ಬಿಜೆಪಿ ಫ್ಯಾಕ್ಸ್‌ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌, ಅದರ ನಾಯಕರ ಹಸ್ತಕ್ಷೇಪ: ಬಿಜೆಪಿ

ಬೆಂಗಳೂರು (ನ.23) : ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿಯು ಪ್ರತಿಪಕ್ಷ ಕಾಂಗ್ರೆಸ್‌ ವಿರುದ್ಧ ಗಂಭೀರ ಆರೋಪ ಮಾಡಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ರವಾನಿಸಿದೆ.

ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷವು ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದು ಕಾನೂನುಬಾಹಿರ ಮತ್ತು ಅಪರಾಧ. ಆದರೆ, ರಾಜ್ಯ ಕಾಂಗ್ರೆಸ್‌ ಪಕ್ಷವು ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿ ಕಾನೂನು ಉಲ್ಲಂಘಿಸಿದೆ. ಹೀಗಾಗಿ ಕಾಂಗ್ರೆಸ್‌ ಪಕ್ಷ ಹಾಗೂ ಅದರ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆದ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಅವರು ಮಂಗಳವಾರ ತಡರಾತ್ರಿ ಕೇಂದ್ರ ಚುನಾವಣಾ ಆಯೋಗಕ್ಕೆ ಫ್ಯಾಕ್ಸ್‌ ಮೂಲಕ ದೂರು ನೀಡಿದ್ದಾರೆ.

ಮತ ಅಕ್ರಮ: ಇಂದು ಕೇಂದ್ರ ಚು.ಆಯೋಗಕ್ಕೆ ಡಿಕೆಶಿ ದೂರು

ಕಾಂಗ್ರೆಸ್‌ ಪಕ್ಷ ಬುಧವಾರ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿರುವುದರ ಹಿನ್ನೆಲೆ ಬಿಜೆಪಿಯು ಮಂಗಳವಾರ ತಡರಾತ್ರಿಯೇ ತನ್ನ ವಾದವನ್ನು ಮಂಡಿಸಿ ದೂರು ಸಲ್ಲಿಸಿದೆ.

ಕರ್ನಾಟಕ ವಿಧಾನಸಭೆಗೆ ಮುಂದಿನ ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿಪರಿಷ್ಕರಣೆಗೆ ಒಳಪಡಿಸಿದೆ. ದುರದೃಷ್ಟಕರ ಸಂಗತಿ ಎಂದರೆ, ರಾಜ್ಯ ಚುನಾವಣಾ ಆಯೋಗದ ಕಾರ್ಯ ಚಟುವಟಿಕೆಗಳಲ್ಲಿ ರಾಜ್ಯ ಕಾಂಗ್ರೆಸ್‌ ಹಸ್ತಕ್ಷೇಪ ಮಾಡಿದ್ದು, ಆಯೋಗದ ಕಾರ್ಯ ಚಟುವಟಿಕೆ ಕುರಿತು ಸುಳ್ಳು ಹಾಗೂ ಜನರ ದಾರಿ ತಪ್ಪಿಸುತ್ತಿದೆ ಎಂದು ರವಿಕುಮಾರ್‌ ಆರೋಪಿಸಿದ್ದಾರೆ.

ಬಿಬಿಎಂಪಿಯು ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಚಿಲುಮೆ ಎಂಬ ಸಂಸ್ಥೆ ಜತೆಗೆ ಷರತ್ತುಬದ್ಧ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಆ ಸಂಸ್ಥೆ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದಡಿ ಬಿಬಿಎಂಪಿ ಆ ಸಂಸ್ಥೆ ಜತೆಗಿನ ಒಪ್ಪಂದ ರದ್ದುಪಡಿಸಿದೆ. ಅಷ್ಟೇ ಅಲ್ಲದೆ, ಸಂಸ್ಥೆ ವಿರುದ್ಧ ಕೇಳಿ ಬಂದ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆಗೆ ದೂರು ನೀಡಿದೆ. ಅದರಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಸಂಸ್ಥೆಯ ಕೆಲವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

ಸಿದ್ದು ಅವಧಿಯಲ್ಲಿ ನೇಮಕ:

ಆಶ್ಚರ್ಯದ ಸಂಗತಿ ಎಂದರೆ, ಈ ಚಿಲುಮೆ ಸಂಸ್ಥೆಯನ್ನು 2017ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮತದಾರರ ಪಟ್ಟಿಪರಿಷ್ಕರಣೆ ಕಾರ್ಯಕ್ಕೆ ನಿಯೋಜಿಸಿತ್ತು. ಅಷ್ಟೇ ಅಲ್ಲದೆ, ಮತದಾರರ ಪಟ್ಟಿನೋಂದಣಿಗೆ ಸಂಬಂಧಿಸಿದಂತೆ ನಿಯಮ ಹಾಗೂ ನಿಬಂಧನೆಗಳನ್ನು ಗಾಳಿಗೆ ತೂರಿ ಖಾಸಗಿ ವ್ಯಕ್ತಿಗಳನ್ನು ಹೊರಗುತ್ತಿಗೆಯಡಿ ಬೂತ್‌ ಮಟ್ಟದ ಅಧಿಕಾರಿಗಳಾಗಿ (ಬಿಎಲ್‌ಓ) ನೇಮಿಸಿಕೊಂಡಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ.

ಬಾಂಗ್ಲಾದೇಶಿಯರ ಸೇರ್ಪಡೆ:

ಅಂತೆಯೇ ಕಾಂಗ್ರೆಸ್‌ ವೋಟ್‌ ಬ್ಯಾಂಕ್‌ ಹೆಚ್ಚಿಸಿಕೊಳ್ಳಲು ಮತದಾರರ ಪಟ್ಟಿಗೆ ಸಾವಿರಾರು ಬಾಂಗ್ಲಾದೇಶಿಗರು ಸೇರಿದಂತೆ ಹಲವು ಅಕ್ರಮ ಮತದಾರರನ್ನು ಸೇರ್ಪಡೆ ಮಾಡಿದೆ. ಇದು ರಾಜ್ಯ ಚುನಾವಣಾ ಆಯೋಗಕ್ಕೆ ಮಾಡಿದ ವಂಚನೆಯಾಗಿದೆ. ಈ ಮೂಲಕ ಕಾಂಗ್ರೆಸ್‌ ಚುನಾವಣಾ ಪ್ರಕ್ರಿಯೆಯನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಂಡಿರುವುದು ಸ್ಪಷ್ಟವಾಗಿದೆ. ಇದೊಂದು ಗಂಭೀರ ವಿಚಾರವಾಗಿದ್ದು, ಈ ಸಂಬಂಧ ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ.

Voter ID Scam: ದೂರು ನೀಡಲು ಹೊರಟ್ಟಿದ್ದ ಕಾಂಗ್ರೆಸ್‌ಗೆ ಬಿಜೆಪಿ ಶಾಕ್!

ರಾಜ್ಯ ಕಾಂಗ್ರೆಸ್‌ ಪಕ್ಷವು ಸಿದ್ದರಾಮಯ್ಯ ಅವರ ಅವಧಿಯಲ್ಲಿ ಮಾಡಿದ ಚುನಾವಣಾ ಅಕ್ರಮಗಳು ಹಾಗೂ ಸದ್ಯ ರಾಜ್ಯ ಚುನಾವಣಾ ಆಯೋಗದ ಕಾರ್ಯ ಚಟುವಟಿಕೆಗಳಲ್ಲಿನ ಹಸ್ತಕ್ಷೇಪ, ಸುಳ್ಳು ಆರೋಪಗಳ ಮೂಲಕ ಜನರ ಹಾದಿ ತಪ್ಪಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಕಾಂಗ್ರೆಸ್‌ ಪಕ್ಷ ಹಾಗೂ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ರವಿಕುಮಾರ್‌ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.