ಮತ ಅಕ್ರಮ: ಇಂದು ಕೇಂದ್ರ ಚು.ಆಯೋಗಕ್ಕೆ ಡಿಕೆಶಿ ದೂರು ರಾಜ್ಯ ಚು.ಆಯೋಗ ನಮ್ಮ ದೂರಿಗೆ ಸ್ಪಂದಿಸಿಲ್ಲ  ದಾಖಲೆಯಿದ್ರೂ ತಪ್ಪಿತಸ್ಥರ ಮೇಲೆ ಕೇಸ್‌ ಹಾಕಿಲ್ಲ ಬೆಂಗಳೂರಿನ 28 ಕ್ಷೇತ್ರದ ಚುನಾವಣಾಧಿಕಾರಿಗಳ ಮೇಲೆ ಎಫ್‌ಐಆರ್‌ ಹಾಕಿ  ಹಗರಣದಲ್ಲಿ ಭಾಗಿಯಾದ ಸಚಿವರು, ಶಾಸಕರ ವಿರುದ್ಧ ಕ್ರಮ ಕೈಗೊಳ್ಳಿ: ಕಾಂಗ್ರೆಸ್‌

ಬೆಂಗಳೂರು (ನ.22) :‘ವೋಟರ್‌ಗೇಟ್‌ ಹಗರಣದ ಬಗ್ಗೆ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗ ಸೂಕ್ತವಾಗಿ ಸ್ಪಂದಿಸಿಲ್ಲ. ಯಾರು ಪ್ರಕರಣದ ರೂವಾರಿಗಳಾಗಿದ್ದಾರೆಯೋ ಅವರ ಮೇಲೆ ಕ್ರಮವಾಗಬೇಕು. ಬೆಂಗಳೂರಿನ ಎಲ್ಲಾ 28 ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಮೇಲೆ ಎಫ್‌ಐಆರ್‌ ಹಾಕಬೇಕು. ಹೀಗಾಗಿ ಮಂಗಳವಾರ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರ ಭೇಟಿಗೆ ಕಾಲಾವಕಾಶ ಕೇಳಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬಳಿ ದಾಖಲೆಗಳಿದ್ದರೂ ತಪ್ಪಿಸ್ಥರ ಮೇಲೆ ಎಫ್‌ಐಆರ್‌ ದಾಖಲಿಸಿಲ್ಲ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರೂ ಸೂಕ್ತ ತನಿಖೆ ನಡೆಸಿಲ್ಲ. ಮೇಲಿನಿಂದ ಆದೇಶ ಬಂದಿರುವುದರಿಂದ ಈ ರೀತಿ ಮಾಡಿದ್ದೇವೆ ಎಂದು ಚುನಾವಣಾಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಪ್ರಕರಣದ ಕುರಿತು ನಮ್ಮ ಬಳಿ ಹಲವು ದಾಖಲೆಗಳಿವೆ. ಹೀಗಾಗಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರನ್ನೇ ಭೇಟಿ ಮಾಡುತ್ತೇವೆ ಎಂದರು.

ಕೆಳ ಮಟ್ಟದಲ್ಲಿರುವ ಒಂದಿಬ್ಬರನ್ನು ಬಂಧಿಸಿದ ಕೂಡಲೇ ಪ್ರಕರಣ ಇತ್ಯರ್ಥವಾದಂತೆ ಅಲ್ಲ. ಯಾರು ಕಿಂಗ್‌ಪಿನ್‌, ರೂವಾರಿಗಳಿದ್ದಾರೋ ಅವರ ಮೇಲೆ ಕ್ರಮವಾಗಬೇಕು. ಇದರಲ್ಲಿ ಭಾಗಿಯಾಗಿರುವ ಶಾಸಕರು, ಸಚಿವರ ಮಾತುಕತೆ, ಅವರ ವಹಿವಾಟಿನ ದಾಖಲೆಗಳು ನಮ್ಮ ಬಳಿಯಿವೆ. ಈ ಬಗ್ಗೆ ತನಿಖೆಯಾಗಿ ತಪ್ಪಿತಸ್ಥ ಜನಪ್ರತಿನಿಧಿಗಳ ಮೇಲೆ ಕ್ರಮವಾಗಬೇಕು. ಜತೆಗೆ ಬೆಂಗಳೂರಿನ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಮೇಲೆ ಎಫ್‌ಐಆರ್‌ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಪ್ರಕರಣ ಮುಚ್ಚಿಹಾಕಲು ಯತ್ನ:

ಕಾನೂನು ಹೋರಾಟದ ಕುರಿತ ಪ್ರಶ್ನೆಗೆ, ಈ ಪ್ರಕರಣ ಮುಚ್ಚಿಹಾಕಲು ಪೊಲೀಸ್‌ ಅಧಿಕಾರಿಗಳು ಹೇಗೆ ಪ್ರಯತ್ನಿಸುತ್ತಿದ್ದಾರೆ ಎಂದು ನೋಡುತ್ತಿದ್ದೇವೆ. ಈ ಹಿಂದೆ ರೇಪ್‌ ಪ್ರಕರಣದಲ್ಲಿ ಸಚಿವರೊಬ್ಬರಿಗೆ ಕ್ಲೀನ್‌ಚಿಟ್‌ ಕೊಟ್ಟಿದ್ದರು. 40 ಪರ್ಸೆಂಟ್‌ ಭ್ರಷ್ಟಾಚಾರ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಹಾಗೂ ಯಡಿಯೂರಪ್ಪನವರಿಗೆ ಕ್ಲೀನ್‌ಚಿಟ್‌ ನೀಡಿದ್ದರು. ಈ ಪ್ರಕರಣದಲ್ಲೂ ಹಾಗೆ ಮಾಡುವ ಅನುಮಾನವಿದೆ. ಪೊಲೀಸರು ಹೇಗೆ ತನಿಖೆ ಮಾಡುತ್ತಾರೆ, ಪ್ರಕರಣದಲ್ಲಿ ರಾಜ್ಯ ಹೈಕೋರ್ಚ್‌ ಮುಖ್ಯ ನ್ಯಾಯಮೂರ್ತಿಗಳು ಮಧ್ಯಪ್ರವೇಶ ಮಾಡುತ್ತಾರಾ ಎಂದು ಕಾದು ನೋಡುತ್ತೇವೆ. ಬಳಿಕ ಮುಂದಿನ ಹೆಜ್ಜೆ ಕುರಿತು ತೀರ್ಮಾನಿಸುತ್ತೇವೆ ಎಂದರು.

ತಪ್ಪಿದ್ದರೆ ನಮಗೂ ಶಿಕ್ಷೆಯಾಗಲಿ:

ಕಾಂಗ್ರೆಸ್‌ ಅವಧಿಯಲ್ಲಿನ ಮತದಾರರ ಪಟ್ಟಿಪರಿಷ್ಕರಣೆಯ ಬಗ್ಗೆಯೂ ತನಿಖೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. 2013 ರಿಂದ ಈ ಚಿಲುಮೆ ವ್ಯವಹಾರ ತನಿಖೆ ಮಾಡಿಸಲು ಮುಂದಾಗಿರುವ ಮುಖ್ಯಮಂತ್ರಿಗಳ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ನಾವು ಮತದಾರರ ಮಾಹಿತಿ ದುರ್ಬಳಕೆ ಮಾಡಿಕೊಂಡಿದ್ದರೆ ನಮಗೂ ಶಿಕ್ಷೆ ಆಗಲಿ ಎಂದರು.