ರಾಯಚೂರು ಜಿಲ್ಲೆಯ ಲಿಂಗಸೂಗೂರಲ್ಲಿ ವರದಿಗಾರಿಕೆಗೆಂದು ಹೊರಗೆ ಹೋಗಿದ್ದ ಪತ್ರಕರ್ತರೊಬ್ಬರ ಮನೆಯ ಬೀಗ ಮುರಿದು ಖದೀಮರು ಕಳ್ಳತನ ಮಾಡಿದ್ದಾರೆ. ಸುಮಾರು 14 ಲಕ್ಷ ರೂ. ನಗದು ಮತ್ತು 95 ಗ್ರಾಂ ಚಿನ್ನಾಭರಣಗಳು ಕಳುವಾಗಿವೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ರಾಯಚೂರು(ನ.28): ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ಹಾಡುಹಗಲೇ ಮನೆ ಬೀಗ ಮುರಿದು ಭಾರಿ ಕಳ್ಳತನ ನಡೆದಿದೆ. ವರದಿಗೆಂದು ಹೊರಗೆ ತೆರಳಿದ್ದ ಪತ್ರಕರ್ತರೊಬ್ಬರ ಮನೆಯಲ್ಲಿ ಇದ್ದ ಬರೋಬ್ಬರಿ 14 ಲಕ್ಷ ರೂಪಾಯಿ ನಗದು ಮತ್ತು 95 ಗ್ರಾಂ ಚಿನ್ನಾಭರಣಗಳನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ.
ವರದಿಗೆ ಹೋದಾಗ ನಡೆದ ಘಟನೆ
ಲಿಂಗಸೂಗೂರು ಪಟ್ಟಣದ ನಿವಾಸಿ ಹಾಗೂ ಪತ್ರಕರ್ತರಾದ ಸಿದ್ದನಗೌಡ ಪಾಟೀಲ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಸಿದ್ದನಗೌಡ ಪಾಟೀಲ್ ಅವರು ವರದಿಗಾರಿಕೆಗೆಂದು ಹೊರಗೆ ಹೋಗಿದ್ದ ಸಮಯವನ್ನು ಬಳಸಿಕೊಂಡ ಖದೀಮರು, ಮನೆಯ ಬೀಗ ಮುರಿದು ಒಳನುಗ್ಗಿದ್ದಾರೆ. ಪತ್ರಕರ್ತ ಸಿದ್ದನಗೌಡ ಪಾಟೀಲ್ ಅವರು ಇತ್ತೀಚೆಗೆ ಪಿತ್ರಾರ್ಜಿತ ಜಮೀನು ಮಾರಾಟ ಮಾಡಿ ಸುಮಾರು 14 ಲಕ್ಷ ರೂಪಾಯಿಗಳು ಮನೆಯಲ್ಲಿಟ್ಟಿದ್ದರು. ಇದರ ಜೊತೆಗೆ ಅವರ ಪತ್ನಿ, ಶಿಕ್ಷಕಿ ನಾಗಮ್ಮ ಅವರಿಗೆ ಸೇರಿದ ಚಿನ್ನದ ಮಾಂಗಲ್ಯ ಸರ, ಝುಮುಕಿ, ಕಿವಿಯೋಲೆ ಮತ್ತು ಉಂಗುರ ಸೇರಿದಂತೆ ಒಟ್ಟು 95 ಗ್ರಾಂ ಚಿನ್ನಾಭರಣಗಳು ಕಳ್ಳತನವಾಗಿವೆ. ಇದರ ಜೊತೆಗೆ, ಸುಮಾರು 50 ಗ್ರಾಂ ಬೆಳ್ಳಿ ಆಭರಣಗಳೂ ಕಳುವಾಗಿವೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಪೊಲೀಸರ ಭೇಟಿ
ಕಳ್ಳತನದ ಮಾಹಿತಿ ತಿಳಿದ ತಕ್ಷಣ ಲಿಂಗಸೂಗೂರು ಪೊಲೀಸ್ ಇನ್‌ಸ್ಪೆಕ್ಟರ್ ಪುಂಡಲೀಕ ಪಟಾತರ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.


