Asianet Suvarna News Asianet Suvarna News

ವೈಕುಂಠ ಏಕಾದಶಿ ದಿನವೇ ವೈಕುಂಠ ಸೇರಿದ ಸಿದ್ದೇಶ್ವರ ಸ್ವಾಮಿಜಿ, ಸಿಎಂ ಸೇರಿ ಗಣ್ಯರ ಸಂತಾಪ!

ವೈಕುಂಠ ಏಕಾದಶಿ ದಿನ ಸಿದ್ದೇಶ್ವರ ಶ್ರೀಗಳು ವಿಧಿವಶರಾಗಿದ್ದಾರೆ ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿದ್ದಾರಮಯ್ಯ, ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. 

vijayapura siddheshwar swamiji passes away CM Basavaraj bommai Former CM Siddaramaiah HDK express condolence ckm
Author
First Published Jan 2, 2023, 10:58 PM IST

ವಿಜಯಪುರ(ಜ.02): ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಇಂದು(ಜ.02) ಸಂಜೆ 6 ಗಂಟೆಗೆ ವಿಧಿವಶರಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಆನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀಗಳಿಗೆ ಮಠದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ 5 ದಿನಗಳಿಂದ ಶ್ರೀಗಳ ಆರೋಗ್ಯ ತೀವ್ರ ಏರುಪೇರಾಗಿತ್ತು. ಇಂದು ಬೆಳಗ್ಗೆ ಗಂಜಿ ಕುಡಿದ ಬಳಿಕ ಯಾವುದೇ ಆಹಾರ ಸೇವಿಸಿಲ್ಲ. ಅನ್ನ ಆಹಾರ ನಿರಾಕರಿಸಿದ ಶ್ರೀಗಳು ಆಸ್ಪತ್ರೆ ದಾಖಲಾಗಲು ನಿರಾಕರಿಸಿದ್ದರು. ಈ ಮೂಲಕ ವೈಕುಂಠ ಏಕಾದಶಿ ದಿನ ಸಿದ್ದೇಶ್ವರ ಶ್ರೀಗಳು ವಿಧಿವಶರಾಗಿದ್ದಾರೆ. ಸಿದ್ದೇಶ್ವರ ಸ್ವಾಮೀಗಳ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು, ವಿವಿಧ ಮಠದ ಸ್ವಾಮೀಜಿಗಳು ಸಂತಾಪ ಸೂಚಿಸಿದ್ದಾರೆ. 

ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ. ಶ್ರೀಗಳ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ನಾಡಿನಾದ್ಯಂತ ಇರುವ ಶ್ರೀಗಳ ಭಕ್ತ ಸಮೂಹಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ತಮ್ಮ ಪ್ರವಚನಗಳ ಮೂಲಕ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಶ್ರೀಗಳ ಸೇವೆ ಅಮೋಘ ಹಾಗೂ ಅನನ್ಯವಾದುದು ಎಂದು ಬಸವರಾಜ್ ಬೊಮ್ಮಾಯಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ವಿಧಿವಶ, ಶೋಕಸಾಗರದಲ್ಲಿ ಭಕ್ತವೃಂದ!

ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ತಮ್ಮ ಪ್ರವಚನಗಳ‌ ಮೂಲಕ ಕೋಟ್ಯಂತರ ಜನರಿಗೆ ಜ್ಞಾನದಾಸೋಹ ನೀಡಿದ ನಡೆದಾಡುವ ದೇವರು, ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ವಿಧಿವಶರಾದ ಸುದ್ದಿ ಅತ್ಯಂತ ದುಃಖವನ್ನುಂಟು ಮಾಡಿದೆ. ಪೂಜ್ಯರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಕ್ತರಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಬೆಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಶ್ರೀಗಳ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ನಡೆದಾಡುವ ದೇವರು, ತಮ್ಮ ಅತ್ಯಮೂಲ್ಯ ಪ್ರವಚನಗಳ ಮೂಲಕ ನಾಡಿನ ಜನತೆಗೆ ಜ್ಞಾನ ದಾಸೋಹ ನೀಡುತ್ತಾ, ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಣೆ ನೀಡುತ್ತಿದ್ದ ವಿಜಯಪುರದ ಜ್ಞಾನ ಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಶಿವಸಾಯುಜ್ಯವನ್ನು ಪಡೆದಿದ್ದಾರೆ. ಭಗವಂತನು ಆ ಮಹಾನ್ ಚೇತನಕ್ಕೆ ಸದ್ಗತಿ ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಕಟೀಲ್ ಟ್ವೀಟ್ ಮಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ದಿವ್ಯ ಆತ್ಮಕ್ಕೆ ಚಿರಶಾಂತಿ ಸಿಗಲಿ.
ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಮಠದ ಅನುಯಾಯಿಗಳಿಗೆ ಮತ್ತು ಭಕ್ತವೃಂದಕ್ಕೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಧಾರ್ಮಿಕ ಪ್ರವಚನದ ಮೂಲಕ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದ ದಾರ್ಶನಿಕ ಗುರುವಿನ ಅಗಲಿಕೆ ವೈಯಕ್ತಿಕವಾಗಿ ಮತ್ತು ನಾಡಿಗೆ ತುಂಬಿಬಾರದ ನಷ್ಟ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ: ನಾಳೆ ವಿಜಯಪುರ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮೀ ಶ್ರೀಗಳ ಅಗಲಿಕೆಗೆ ನೋವು ವ್ಯಕ್ತಪಡಿಸಿದ್ದಾರೆ. ಸಮಾಜಕ್ಕೆ ಚಿಕಿತ್ಸರಾಗಿದ್ದ ಪೂಜ್ಯರು, ತಮ್ಮ ಪರಿಪೂರ್ಣ ಸಾರ್ಥಕ ಬದುಕಿನಿಂದಲೇ ನಮ್ಮನ್ನು ಪಾವನಗೊಳಿಸಿದವರು. ತಮ್ಮ ಪ್ರತಿ ಹೆಜ್ಜೆಯಲ್ಲೂ ಜ್ಞಾನದ ಬೆಳಕು ಮೂಡಿಸುತ್ತಿದ್ದ ಅವರ ನಿರ್ಗಮನ ಬಹುದೊಡ್ಡ ನಷ್ಟ. ಪೂಜ್ಯರು ಬಿಟ್ಟುಹೋಗಿರುವ ಅರಿವು ನಮಗೆಲ್ಲ ದಿವ್ಯಬೆಳಕು. ಆ ಬೆಳಕಿನಡಿಯಲ್ಲಿ ಮುನ್ನಡೆಯೋಣ ಎನ್ನುವ ಆಶಯ ನನ್ನದಾಗಿದೆ. ನಮ್ಮ ಪಾಲಿಗೆ ನಡೆದಾಡುವ ಬೆಳಕು, ನಡೆದಾಡುವ ಅರಿವು, ನಡೆದಾಡುವ ದೇವರೇ ಆಗಿದ್ದ ಜ್ಞಾನ ಯೋಗಾಶ್ರಮದ ಜ್ಞಾನಯೋಗಿ ಪರಮಪೂಜ್ಯ ಶ್ರೀ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಶಿವೈಕ್ಯರಾಗಿದ್ದಾರೆ ಎಂದು ಹೆಚ್‌ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಇನ್ನು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ನಡೆದಾಡುವ ದೇವರೆಂದೇ ಕರೆಯಲ್ಪಡುವ ಜ್ಞಾನ ಯೋಗಾಶ್ರಮದ ಜ್ಞಾನಯೋಗಿ ಶ್ರೀ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಇಹಲೋಕ ತ್ಯಜಿಸಿದ್ದಾರೆ. ಸ್ವಾಮೀಜಿಗಳು ನೀಡಿರುವ ಜ್ಞಾನದ ಬೆಳಕು, ತೋರಿರುವ ಹಾದಿ ನಮಗೆಲ್ಲಾ ಸಾರ್ಥಕ ಬದುಕು ನಡೆಸಲು ಪ್ರೇರಕ ಶಕ್ತಿಯಾಗಿದೆ. ಶ್ರೀಗಳ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಶಿಕ್ಷಣ ಸಚಿವ ಬಿಸಿ ನಾಗೇಶ್ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಂತ, ಜ್ಞಾನಯೋಗಿ, ಸಮಾಜದ ಹಿತ ಚಿಂತಕರು, ಖ್ಯಾತ ಪ್ರವಚನಕಾರರಾಗಿದ್ದ ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಉತ್ತಮ ಸಮಾಜ ನಿರ್ಮಾಣ ಮತ್ತು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸ್ವಾಮೀಜಿಯವರು ನೀಡುತ್ತಿದ್ದ ಸಂದೇಶಗಳು ಸದಾ ದಾರಿ ದೀಪವಾಗಿರುತ್ತವೆ ಎಂದು ಬಿಸಿ ನಾಗೇಶ್ ಟ್ವೀಟ್ ಮಾಡಿದ್ದಾರೆ.

 

Follow Us:
Download App:
  • android
  • ios