ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಗುರುನಮನಕ್ಕೆ ಸಿದ್ಧಗೊಳ್ತಿದೆ ವಿಜಯಪುರ: ಪಾಲ್ಗೊಳ್ಳಲಿದ್ದಾರಾ ಪ್ರಧಾನಿ ಮೋದಿ?
ನಡೆದಾಡುವ ದೇವರು, ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು ನಮ್ಮನ್ನೆಲ್ಲ ಅಗಲಿ ಒಂದು ವರ್ಷವಾಗಲಿದೆ. ಶ್ರೀಗಳನ್ನ ನೆನಪುಗಳನ್ನ ಅವರ ಭಕ್ತದ ಹೃದಯದಲ್ಲಿ ಅಚ್ಚಾಗಿಸಲು ಜ್ಞಾನಯೋಗಾಶ್ರಮ ಗುರು ನಮನ ಮಹೋತ್ಸವ ನಡೆಸಲಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗು ಆಹ್ವಾನ ನೀಡಲಾಗಿದ್ದು, ನಾಡಿನ ಸಿಎಂ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ..
- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣನ್ಯೂಸ್
ವಿಜಯಪುರ (ನ.26) : ನಡೆದಾಡುವ ದೇವರು, ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು ನಮ್ಮನ್ನೆಲ್ಲ ಅಗಲಿ ಒಂದು ವರ್ಷವಾಗಲಿದೆ. ಶ್ರೀಗಳನ್ನ ನೆನಪುಗಳನ್ನ ಅವರ ಭಕ್ತದ ಹೃದಯದಲ್ಲಿ ಅಚ್ಚಾಗಿಸಲು ಜ್ಞಾನಯೋಗಾಶ್ರಮ ಗುರು ನಮನ ಮಹೋತ್ಸವ ನಡೆಸಲಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗು ಆಹ್ವಾನ ನೀಡಲಾಗಿದ್ದು, ನಾಡಿನ ಸಿಎಂ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ..
ಜ್ಞಾನಯೋಗಿಯ ಗುರುನಮನಕ್ಕೆ ಸಿದ್ಧಗೊಳ್ತಿದೆ ವಿಜಯಪುರ:
ಕಳೆದ 2023ರ ಹೊಸ ವರ್ಷದ ಸಂಭ್ರಮ ಕರಗಿ ನಾಡಿನ ಜನತೆಗೆ ಕಹಿಯಾಗಿತ್ತು. ಕಾರಣ ನಾಡಿನ ನಡೆದಾಡುವ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ನಿಧನ. ಆಧ್ಯಾತ್ಮ, ಜ್ಞಾನದ ಮೇರುಪರ್ವತವಾಗಿದ್ದ ಸಿದ್ದೇಶ್ವರ ಶ್ರೀಗಳನ್ನ ಕಳೆದುಕೊಂಡ ಆಧ್ಯಾತ್ಮಕ್ಷೇತ್ರ ಅನಾಥವಾಗಿತ್ತು. ಈಗ ಶ್ರೀಗಳ ನೆನಪುಗಳನ್ನ ಭಕ್ತರ ಹೃದಯದಂಗಳದಲ್ಲಿ ಇನ್ನಷ್ಟು ಗಟ್ಟಿಯಾಗಿಸಲು ವಿಜಯಪುರ ಸಿದ್ಧವಾಗಿದೆ. ಸಿದ್ದೇಶ್ವರ ನಿಧನರಾಗಿ ವರ್ಷ ಕಳೆಯುತ್ತಿರುವ ಹಿನ್ನೆಲೆಯಲ್ಲಿ ಜನೆವರಿ 1 ಹಾಗೂ 2ರಂದು ಜ್ಞಾನಯೋಗಾಶ್ರಮದಲ್ಲಿ ಗುರು ನಮನ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ.
ಮುಂದಿನ ವರ್ಷದಿಂದ ಪಠ್ಯದಲ್ಲಿ ಸಿದ್ದೇಶ್ವರ ಶ್ರೀ ಪಾಠ: ಸಚಿವ ಮಧು ಬಂಗಾರಪ್ಪ
9 ದಿನಗಳ ಕಾಲ ವಿವಿಧ ಜ್ಞಾನಗೋಷ್ಠಿ ಆಯೋಜನೆ:
ಜ್ಞಾನ ದಾಸೋಹಿಯಾಗಿದ್ದ ಸಿದ್ದೇಶ್ವರ ಶ್ರೀಗಳ ಗುರು ನಮನವನ್ನ ಇನ್ನಷ್ಟು ವಿಶೇಷವಾಗಿಸಲು 11 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ. ಡಿಸೆಂಬರ್ 23 ರಿಂದ 31 ವರೆಗೆ 9 ಜ್ಞಾನಗೋಷ್ಠಿಗಳು ನಡೆಯಲಿವೆ. ಗ್ರಾಮೀಣ ಜನರ ಬದುಕು, ಕ್ರೀಡೆ-ಯೋಗ-ಆರೋಗ್ಯ, ಯುವಕರು-ದೇಶಪ್ರೇಮ, ಜಾಗತಿಕ ಆಧ್ಯಾತ್ಮ ಚಿಂತನೆ, ಪರಿಸರ ಸಂರಕ್ಷಣೆ, ಶಿಕ್ಷಣ ಹಾಗೂ ವಿಜ್ಞಾನ, ಸ್ವಚ್ಛತೆ, ಸಮಯ ಪಾಲನೆ, ವ್ಯಸನಮುಕ್ತ, ಜಾನಪದ ಕಲೆಗಳು ಈ ವಿಷಯಗಳ ಕುರಿತಂತೆ ಗೋಷ್ಠಿಗಳು ನಡೆಯಲಿವೆ. ನಾಡಿನ ಹೆಸರಾಂತ ಸ್ವಾಮೀಜಿಗಳು, ಧಾರ್ಶನಿಕರು, ವಾಗ್ಮೀಗಳು, ಹಿರಿಯ ಪತ್ರಕರ್ತರು ಗೋಷ್ಠಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಗುರುನಮನದಲ್ಲಿ ಪಾಲ್ಗೊಳ್ತಾರಾ ಪ್ರಧಾನಿ ಮೋದಿ?:
ಗುರುನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಈಗಾಗಲೇ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಲಾಗಿದೆಯಂತೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಮೂಲಕ ಪ್ರಧಾನಿಗಳಿಗೆ ಆಹ್ವಾನ ತಲುಪಿಸಲಾಗಿದೆಯಂತೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿಗಳು ಪ್ರಯತ್ನಿಸುವ ಭರವಸೆ ನೀಡಿದ್ದಾರಂತೆ. ಇನ್ನು ತಪ್ಪಿದಲ್ಲಿ ವರ್ಚುವಲ್ ಮೂಲಕ ಪ್ರಧಾನಿಗಳು ಗುರುನಮನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜ್ಞಾನಯೋಗಾಶ್ರಮದ ಅಮೃತಾನಂದ ಶ್ರೀಗಳು ಏಷ್ಯಾನೆಟ್ ಸುವರ್ಣ ನ್ಯೂಸ್. ಕಾಮ್ ಗೆ ತಿಳಿಸಿದ್ದಾರೆ. ಇನ್ನೂ ಸಿಎಂ ಸಿದ್ದರಾಮಯ್ಯ ಸಹ ಗುರು ನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿದ್ದಾರೆ.
ಎರಡು ದಿನಗಳ ಕಾಲ ದೀಪ ನಮನ, ಪುಷ್ಪ ನಮನ:
ಜನೆವರಿ 1 ಹಾಗೂ 2 ರಂದು ಗುರುನಮನ ಕಾರ್ಯಕ್ರಮ ಅರ್ಥಪೂರ್ಣತೆಯಿಂದ ಕೂಡಿರಲಿದೆ. ಸಿದ್ದೇಶ್ವರ ಶ್ರೀಗಳು ದೀಪಗಳನ್ನ ಹಾಗೂ ಪುಷ್ಪಗಳನ್ನು ತುಂಬಾನೆ ಇಷ್ಟ ಪಡುತ್ತಿದ್ದರು. ಹಾಗಾಗಿ ಒಂದು ದಿನ ದೀಪ ನಮನ ಹಾಗೂ ಎರಡನೇ ದಿನ ಪುಷ್ಪ ನಮನ ಕಾರ್ಯಕ್ರಮ ನಡೆಯಲಿದೆ ಎಂದು ಜ್ಞಾನಯೋಗಾಶ್ರಮದ ಬಸವಲಿಂಗ ಶ್ರೀಗಳು ತಿಳಿಸಿದ್ದಾರೆ. ಗುರು ನಮನಕ್ಕೆ ಆಗಮಿಸಲುವ ಭಕ್ತರು ಶ್ರೀಗಳಿಗೆ ದೀಪಗಳ ಮೂಲಕ ನಮನ ಸಲ್ಲಿಸಬಹುದಾಗಿದೆ. ಮತ್ತೊಂದು ದಿನ ಪುಷ್ಪಗಳ ಮೂಲಕ ನಮನ ಸಲ್ಲಿಸಬಹುದಾಗಿದೆ. ಇವರೆಡು ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯಲಿವೆ.
ವಿಜಯಪುರ: ಶಿವರಾತ್ರಿಯಂದು ಸಿದ್ದೇಶ್ವರ ಶ್ರೀಗಳ ರೀತಿ ಉಡುಗೆ ತೊಟ್ಟ ಪುಟಾಣಿ, ಕಾಲಿಗೆ ಬಿದ್ದ ಭಕ್ತರು..!
ಇನ್ನೂ ನಡೆಯಲಿರುವ ಪೂರ್ವಭಾವಿ ಸಭೆಗಳು:
ಕಳೆದ ತಿಂಗಳು ಜ್ಞಾನಯೋಗಾಶ್ರಮದಲ್ಲಿ ನಡೆದ ಗುರುನಮನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಪಾಲ್ಗೊಂಡಿದ್ದರು. ಇನ್ನು ಆಶ್ರಮದಲ್ಲಿ ಎರಡನೇ ಹಂತದ ಸಭೆ ಸಹ ನಡೆಯಲಿದ್ದು, ಸಚಿವ ಎಂ ಬಿ ಪಾಟೀಲ್, ಶಿವಾನಂದ ಪಾಟೀಲ್, ಶಾಸಕ ಬಸನಗೌಡ ಯತ್ನಾಳ್ ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.. ರಾಜ್ಯ ಹೊರ ರಾಜ್ಯಗಳ ಯಾವ ಯಾವ ಗಣ್ಯಮಾನ್ಯರಿಗೆ ಆಹ್ವಾನ ಕೊಡಬೇಕು ಎನ್ನುವ ಬಗ್ಗೆಯೂ ಚರ್ಚೆಗಳು ನಡೆಯಲಿವೆ.