Asianet Suvarna News Asianet Suvarna News

ಚೈತ್ರಾ ಕುಂದಾಪುರ ಗ್ಯಾಂಗ್‌ ವಂಚನೆಗೆ ವಿಡಿಯೋ ಸಾಕ್ಷ್ಯ: ಮೂರ್ಛೆ ಬಂದಂತೆ ಹೈಡ್ರಾಮಾ!

ಕಳೆದ ವಿಧಾನಸಭಾ ಚುನಾವಣೆ ವೇಳೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಗ್ಯಾಂಗ್‌ ಎಸಗಿದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿಡಿಯೋ ಸಾಕ್ಷ್ಯ ಬಹಿರಂಗಗೊಂಡಿದೆ. 

Video evidence of Chaitra Kundapur gang fraud case gvd
Author
First Published Sep 16, 2023, 3:00 AM IST

ಬೆಂಗಳೂರು (ಸೆ.16): ಕಳೆದ ವಿಧಾನಸಭಾ ಚುನಾವಣೆ ವೇಳೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಗ್ಯಾಂಗ್‌ ಎಸಗಿದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿಡಿಯೋ ಸಾಕ್ಷ್ಯ ಬಹಿರಂಗಗೊಂಡಿದೆ. ಕಳೆದ ಏ.24ರಂದು ಆರೋಪಿಗಳಾದ ಚೈತ್ರಾ ಕುಂದಾಪುರ, ಗಗನ್‌ ಕಡೂರ್‌, ಪ್ರಸಾದ್‌ ಬೈಂದೂರು ಹಾಗೂ ಶ್ರೀಕಾಂತ್‌ ಬಂಡೆಪಾಳ್ಯದ ಉದ್ಯಮಿ ಗೋವಿಂದಬಾಬು ಪೂಜಾರಿಯ ಕಚೇರಿಗೆ ಬಂದಿದ್ದಾರೆ. 

ಈ ವೇಳೆ ಮಾತುಕತೆ ನಡೆಯುವಾಗ ಚಿಕ್ಕಮಗಳೂರು ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್‌ ಕಡೂರು ಬ್ಯಾಗ್‌ನಿಂದ ವಿಷದ ಬಾಟಲಿ ತೆಗೆದು ಕುಡಿಯಲು ಯತ್ನಿಸಿದ್ದಾನೆ. ಈ ವೇಳೆ ಇತರೆ ಆರೋಪಿಗಳು ವಿಷದ ಬಾಟಲಿ ಕೆಳಕ್ಕೆ ಬೀಳಿಸಿ ಗಗನ್‌ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಿದಂತೆ ಸಿನಿಮೀಯ ಶೈಲಿಯಲ್ಲಿ ಡ್ರಾಮಾ ಮಾಡಿದ್ದಾರೆ. ನೆಲಕ್ಕೆ ಬಿದ್ದು ಒದ್ದಾಡುವ ಗಗನ್‌ನನ್ನು ಚೈತ್ರಾ ಕುಂದಾಪುರ, ಶ್ರೀಕಾಂತ್‌, ಪ್ರಸಾದ್‌ ಬೈಂದೂರು ಹಾಗೂ ಗೋವಿಂದ ಬಾಬು ಪೂಜಾರಿ ಅವರ ಸಿಬ್ಬಂದಿ ಎತ್ತಿಕೊಂಡು ಹೊರಗೆ ಕರೆದುಕೊಂಡು ಹೋಗುತ್ತಾರೆ.

ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ: ಸಚಿವ ಭೈರತಿ ಸುರೇಶ್ ಹೀಗೆ ಹೇಳಿದ್ಯಾಕೆ?

ಈ ವೇಳೆ ಚೈತ್ರಾ ಕುಂದಾಪುರ ಗಾಬರಿಯಾದಂತೆ ನಟಿಸಿ, ಗಗನ್‌ ಕಡೂರು ವಿಷ ಕುಡಿದಿದ್ದಾನೆ. ಕೆಟ್ಟ ವಾಸನೆ ಬರುತ್ತಿದೆ ಎಂದು ಹೇಳುತ್ತಾಳೆ. ಆಕೆಯ ಕೈಗೆ ಅಂಟಿದ್ದ ನೀರನ್ನು ಶ್ರೀಕಾಂತ್‌ಗೆ ಮೂಸಿಸಲು ಮುಂದಾಗುತ್ತಾಳೆ. ಈ ಘಟನೆಯನ್ನು ನೋಡಿದ ಗೋವಿಂದಬಾಬು ಪೂಜಾರಿ ಕೆಲ ಕಾಲ ಮೌನವಾಗುತ್ತಾರೆ. ಈ ಇಡೀ ಹೈಡ್ರಾಮಾ ಕಚೇರಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಂದಿನ ಮಾತುಕತೆ: ಗೋವಿಂದ ಪೂಜಾರಿ: ಪ್ರಸಾದ್‌ ಮೂಲಕ ಚೈತ್ರಕ್ಕನ ಪರಿಚಯವಾಯಿತು. ಎಲ್ಲಾ ಮಾತುಕತೆ ಆಯಿತು. ಫಸ್ಟ್‌ 50 ಲಕ್ಷ ರು. ಕೊಡಬೇಕು ಅಂದರು. ಕೊಟ್ಟೆ. ಆ ಮೇಲೆ ಮೂರು ಕೋಟಿ ರು. ಕೊಡಬೇಕು ಅಂದ್ರಿ. ಅದರಂತೆ ಕುಮಾರ ಕೃಪಾ ಅತಿಥಿಗೃಹದಲ್ಲಿ 3 ಕೋಟಿ ರು. ಹಣ ಕೊಟ್ಟಿದ್ದೇನೆ. ನೀವು ಹೇಳಿದಂತೆ ಹಣ ಕೊಟ್ಟರೂ ಕೆಲಸವಾಗಿಲ್ಲ.

ಗಗನ್‌ ಕಡೂರು: ನೀವು ನೀಡಿದ್ದ 3.50 ಕೋಟಿ ರು. ಹಣವನ್ನು ವಿಶ್ವನಾಥ್‌ ಜೀ ಅವರಿಗೆ ಕೊಟ್ಟಿದ್ದೇನೆ. ಈಗ ಅವರು ಮೃತಪಟ್ಟಿದ್ದಾರೆ.

ಗೋವಿಂದ ಬಾಬು: ನನಗೆ ಅದೆಲ್ಲ ಗೊತ್ತಿಲ್ಲ. ನೀವು ದುಡ್ಡಿಗೆ ಗ್ಯಾರಂಟಿ ಎಂದು ಹೇಳಿದ್ರಿ ಅಲ್ವಾ?

ಚೈತ್ರಾ ಕುಂದಾಪುರ: ಇದು ಎಲ್ಲರ ಲೈಫ್‌ ಪ್ರಶ್ನೆ, ಇಲ್ಲಿ ಜಸ್ಟಿಫಿಕೇಶನ್‌ ಬೇಡ, ಹಣದ ಬಗ್ಗೆ ಅವರು ಕೇಳುತ್ತಿದ್ದಾರೆ. ಆ ಬಗ್ಗೆ ಮಾತನಾಡಿ.

ಗೋವಿಂದ ಬಾಬು: ನಿಮ್ಮ ನಾಟಕ ನನಗೆ ಗೊತ್ತಿದೆ. ಹಣ ಪಡೆಯಲು ಪೊಲೀಸರ ಬಳಿ ಹೋಗಬೇಕೆ? ಆರ್‌ಎಸ್‌ಎಸ್‌ನಲ್ಲಿ ವಿಶ್ವನಾಥ್‌ ಜೀ ಎಂಬುವವರು ಯಾರೂ ಇಲ್ಲ. ನಾನು ಎಲ್ಲಾ ಕಡೆ ಚೆಕ್‌ ಮಾಡಿಸಿ ತಿಳಿದುಕೊಂಡಿದ್ದೇನೆ. ಮುಂಬೈನಲ್ಲಿ ಸಂತೋಷ್‌ ಶೆಟ್ಟಿ ಎಂಬುವವರ ಜತೆ ಮಾತನಾಡಿದೆ. ಅವರ ರಿಪೋರ್ಟ್‌ ತರಿಸಿದ್ದೇನೆ. ವಿಶ್ವನಾಥ್‌ ಜೀ ಎಂಬುವವರು ಯಾರೂ ಇಲ್ಲ ಎಂದು ಗೊತ್ತಾಗಿದೆ. ನೀವು ಸತ್ಯ ಒಪ್ಪಿಕೊಳ್ಳಿ.

ಗಗನ್‌ ಕಡೂರು: ನಾನು ಎಲ್ಲದಕ್ಕೂ ಡಿಸೈಡ್‌ ಮಾಡಿಕೊಂಡು ಬಂದಿದ್ದೀನಿ. ನಾನು ಇಲ್ಲೇ ಸತ್ತು ಬಿಡಬೇಕು ಎಂದು ರೆಡಿಯಾಗಿ ಬಂದಿದ್ದೇನೆ.

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ: ಸಂಸದ ಮುನಿಸ್ವಾಮಿ ಭವಿಷ್ಯ

ಮೂರ್ಛೆ ಬಂದಂತೆ ಚೈತ್ರಾ ಹೈಡ್ರಾಮಾ: ಉದ್ಯಮಿ ಗೋವಿಂದಬಾಬು ಪೂಜಾರಿಗೆ ವಂಚನೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ದಿಢೀರ್‌ ಅಸ್ವಸ್ಥಳಾಗಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾದ ನಾಟಕೀಯ ಬೆಳವಣಿಗೆ ನಡೆದಿದೆ. ಪೊಲೀಸರ ವಿಚಾರಣೆ ತಪ್ಪಿಸಿಕೊಳ್ಳಲು ಆಕೆ ಮೂರ್ಛೆ ನಾಟಕ ಮಾಡಿದ್ದಾಳೆ ಎನ್ನಲಾಗಿದೆ.

Follow Us:
Download App:
  • android
  • ios