ಪ್ರಜ್ವಲ್ ರೇವಣ್ಣ ವಿರುದ್ಧ ಜಡ್ಜ್ ಮುಂದೆ ಸಂತ್ರಸ್ತೆ ಹೇಳಿಕೆ: ಬಂಧನದ ಆತಂಕ ಹೆಚ್ಚಳ
ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಸಂತ್ರಸ್ತೆಯಿಂದ ಎಸ್ಐಟಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು (ಮೇ.03): ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಸಂತ್ರಸ್ತೆಯಿಂದ ಎಸ್ಐಟಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಎಸ್‌ಐಟಿಗೆ ಸಂತ್ರಸ್ತೆ ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಐಟಿ ಅಧಿಕಾರಿಗಳು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಸಿಆರ್‌ಪಿಸಿ 164ರಡಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದು ಪ್ರಜ್ವಲ್ ಅವರಿಗೆ ಮತ್ತಷ್ಟು ಸಂಕಷ್ಟ ತಂದಿದೆ ಎಂದು ಮೂಲಗಳು ಹೇಳಿವೆ. ತನ್ನ ಮೇಲೆ ನಡೆದಿರುವ ಲೈಂಗಿಕ ಶೋಷಣೆ ಬಗ್ಗೆ ನ್ಯಾಯಾಧೀಶರ ಮುಂದೆ ಸವಿಸ್ತಾರವಾಗಿ ಸಂತ್ರಸ್ತೆ ಹೇಳಿದ್ದಾರೆ ಎನ್ನಲಾಗಿದೆ. ಈ ಹೇಳಿಕೆ ಆಧರಿಸಿ ಪ್ರಜ್ವಲ್ ಬಂಧನಕ್ಕೆ ಎಸ್‌ಐಟಿ ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ.
ಮತ್ತೊಬ್ಬ ಸಂತ್ರಸ್ತೆಯ ದೂರು: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್‌ಐಟಿಗೆ ಮತ್ತೊಬ್ಬ ಸಂತ್ರಸ್ತೆ ದೂರು ನೀಡಿದ್ದು, ಈ ದೂರಿನನ್ವಯ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಇದು ಪ್ರಜ್ವಲ್ ವಿರುದ್ಧ ದಾಖಲಾದ 2ನೇ ಪ್ರಕರಣವಾಗಿದೆ. ಇದರ ಬೆನ್ನಲ್ಲೇ ಪ್ರಕರಣ ಸಂಬಂಧ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಸಂತ್ರಸ್ತೆಯಿಂದ ಎಸ್ಐಟಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದರಿಂದಾಗಿ ಹಾಸನ ಸಂಸದನಿಗೆ ಬಂಧನ ಭೀತಿ ಹೆಚ್ಚಾಗಿದೆ. ಇನ್ನು ಪ್ರಜ್ವಲ್ ವಿರುದ್ಧ ಮತ್ತೊಂದು ದೂರು ದಾಖಲಾಗಿರುವುದನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೂಡ ಖಚಿತಪಡಿಸಿದ್ದಾರೆ.
ಶೋಷಣೆ- ಆರೋಪ: ಸಂತ್ರಸ್ತೆ ಹಾಸನ ಜಿಲ್ಲೆಯವರೇ ಆಗಿದ್ದು, ತನ್ನನ್ನು ಲೈಂಗಿಕವಾಗಿ ಪ್ರಜ್ವಲ್ ಶೋಷಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೂರನ್ನು ಪರಿಶೀಲಿಸಿದ ಎಸ್‌ಐಟಿ ಅಧಿಕಾರಿಗಳು ಈಗಾಗಲೇ ಲೈಂಗಿಕ ಕಿರುಕುಳ ಆರೋಪದಡಿ ದಾಖಲಾಗಿದ್ದ ಎಫ್‌ಐಆರ್‌ಗೆ ಹೊಸದಾಗಿ ಐಪಿಸಿ ಸೆಕ್ಷನ್ 376 ಅನ್ನು ಸೇರ್ಪಡೆಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಮುಸ್ಲಿಂ ಮೀಸಲಾತಿಗಾಗಿ ಕರ್ನಾಟಕ ಕಾಂಗ್ರೆಸ್ ಫತ್ವಾ: ಪ್ರಧಾನಿ ಮೋದಿ ಕಿಡಿ
ತಮ್ಮ ಮನೆಯ ಮಹಿಳಾ ಕೆಲಸದಾಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಹೊಳೆನರಸೀಪುರ ಠಾಣೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಮತ್ತು ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ತಂದೆ-ಮಗನಿಗೆ ಎಸ್‌ಐಟಿ ನೋಟಿಸ್ ನೀಡಿದೆ. ಆದರೆ ಎಸ್‌ಐಟಿ ವಿಚಾರಣೆಗೆ ಹಾಜರಾಗದೆ ಅವರ ಕಾಲಾವಕಾಶ ಕೋರಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಎರಡನೇ ದೂರ ದಾಖಲಾಗಿರುವುದು ಪ್ರಜ್ವಲ್‌ಗೆ ಮತ್ತಷ್ಟು ತಲೆ ಬಿಸಿ ತಂದಿದೆ.