ಮುಂಜಾನೆ 3 ಗಂಟೆಗೆ ಗರ್ಭಿಣಿಯ ತನ್ನ ಆಟೋದಲ್ಲಿ ಆಸ್ಪತ್ರೆಗೊಯ್ದ ಆಶಾ ಕಾರ್ಯಕರ್ತೆ!
ಆಶಾ ಕಾರಯಕರ್ತೆಯ ಮಾನವೀಯ ನಡೆ| ಮುಂಜಾನೆ 3 ಗಂಟೆಗೆ ಗರ್ಭಿಣಿಯ ತನ್ನ ಆಟೋದಲ್ಲಿ ಆಸ್ಪತ್ರೆಗೊಯ್ದ ರಾಜೀವಿ| ರಾಜೀವಿ ದಿಟ್ಟ ನಡೆ ಶ್ಲಾಘಿಸಿದ ಉಪ ರಾಷ್ಟಟ್ರಪತಿ ವೆಂಕಯ್ಯ ನಾಯ್ಡು
ನವದೆಹಲಿ(ಜು.25): ಕೊರೋನಾ ಅಟ್ಟಹಾಸದ ಸಂಕಷ್ಟದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಬಹಳ. ಜನರಲ್ಲಿ ಅರಿವು ಮೂಡಿಸುವುದರಿಂದ ಹಿಡಿದು ಮನೆ ಮನೆಗೆ ತೆರಳಿ ಜನರ ಆರೋಗ್ಯ ವಿಚಾರಿಸಿ ತಪಾಸಣೆ ನಡೆಸುವ ಈ ಕೊರೋನಾ ವಾರಿಯರ್ಸ್ ತಮ್ಮ ಬಗ್ಗೆ ಯೋಚಿಸದೆ ಈ ಸಮರದಲ್ಲಿ ಜನರ ಸೇವೆಗೆ ಮುಂದಾಗಿದ್ದಾರೆ. ಹೀಗಿರುವಾಗ ಇಲ್ಲೊಬ್ಬ ಆಶಾ ಕಾರ್ಯಕರ್ತೆಯ ಮಾನವೀಯ ನಡೆ ಸದ್ಯ ಭಾರೀ ಚರ್ಚೆಯಾಗುತ್ತಿದೆ. ಖುದ್ದು ಉಪ ರಾಷ್ಟ್ರಪತಿಯೇ ಕರ್ನಾಟಕದ ಉಡುಪಿ ಜಿಲ್ಲೆಯ ಈ ಕಾರ್ಯಕರ್ತೆಯ ದಿಟ್ಟತನವನ್ನು ಹಾಡಿ ಹೊಗಳಿದ್ದಾರೆ.
ಹೋರಾಟ ತೀವ್ರಗೊಳಿಸಲು ಆಶಾ ಕಾರ್ಯಕರ್ತೆಯರ ತೀರ್ಮಾನ
ಹೌದು ಉಡುಪಿ ಜಿಲ್ಲೆಯ ಪೆರ್ಣಂಕಿಲ ಗ್ರಾಮದ ಗರ್ಭಿಣಿ ಮಹಿಳೆ ಶ್ರೀಲತಾ ಎಂಬ ತುಂಬು ಗರ್ಭಿಣಿಗೆ ಬುಧವಾರ ಮುಂಜಾನೆ ಸುಮಾರು ಮೂರು ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಿರುವಾಗ ಅವರು ತಮ್ಮ ಪರಿಚಯದ ಆಶಾ ಕಾರ್ಯಕರ್ತೆಯೂ ಆಗಿರುವ ರಾಜೀವಿ ಅವರಿಗೆ ಕರೆ ಮಾಡಿದ್ದಾರೆ. ಕತ್ತಲು, ಹೇಗೆ ಎತ್ತ ಎಂದು ತಲೆ ಕೆಡಿಸಿಕೊಳ್ಳದ ರಾಜೀವಿ ಕೂಡಲೇ ಶ್ರೀಲತಾ ಮನೆಗೆ ತೆರಳಿ ಬರೋಬ್ಬರಿ 18 ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಆಶಾ ಕಾರ್ಯಕರ್ತೆಗೆ ದೊಣ್ಣೆಯಿಂದ ತಲೆಗೆ ಹೊಡೆದು ಹಲ್ಲೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜೀವಿಯವರು ಒಂದು ಹೆಣ್ಣಾಗಿ ಮತ್ತೊಬ್ಬ ಹೆಣ್ಣಿನ ಕಷ್ಟಕ್ಕೆ ನೆರವಾಗುವುದು ನನ್ನ ಕರ್ತವ್ಯ. ಹವ್ಯಾಸಕ್ಕಾಗಿ ಗಂಡನಿಂದ ಆಟೋ ಚಲಾಯಿಸುವುದನ್ನು ಕಲಿತೊಂಡಿದ್ದೆ. ಈಗ ಅದೇ ನನಗೆ ವೃತ್ತಿಯಾಗಿದೆ. ಈಗಾಗಲೇ ಹತ್ತು ಹದಿನೈದು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ ಎಂದಿದ್ದಾರೆ. ಅಂದ ಹಾಗೆ ಗರ್ಭಿಣಿ ಮಹಿಳೆಯರಿಗೆ ಇವರು ಆಟೋ ಬಾಡಿಗೆ ಪಡೆಯುವುದಿಲ್ಲ ಎಂಬುವುದು ಮತ್ತೊಂದು ವಿಶೇಷ.
ಸದ್ಯ ರಾಜೀವಿಯವರ ಈ ಮಾನವೀಯ ನಡೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದ್ದು, ಎಲ್ಲರೂ ಅವರನ್ನು ಶ್ಲಾಘಿಸಿದದ್ದಾರೆ. ಈ ವಿಚಾರ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರವರ ಗಮನಕ್ಕೆ ಬಂದಿದ್ದು, ಅವರು ಕೂಡಾ ಟ್ವೀಟ್ ಮಾಡಿ ಈ ಆಶಾ ಕಾರ್ಯಕರ್ತೆಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂಜಾನೆ ಮೂರರ ಸುಮಾರಿಗೆ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಆಶಾ ಕಾರ್ಯಕರ್ತೆ ರಾಜೀವಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾದದು, ಬಿಡುವಿನ ವೇಳೆಯಲ್ಲಿ ಆಟೋ ಚಲಾಯಿಸಿ ಗರ್ಭಿಣಿ ಮಹಿಳೆಯರಿಗೆ ಉಚಿತ ಸೇವೆ ನೀಡುವ ರಾಜೀವಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.