ಹೋರಾಟ ತೀವ್ರಗೊಳಿಸಲು ಆಶಾ ಕಾರ್ಯಕರ್ತೆಯರ ತೀರ್ಮಾನ
ಮಾಸಿಕ ಗೌರವ ಧನ ಹೆಚ್ಚಳ, ವೈಯಕ್ತಿಕ ಆರೋಗ್ಯ ಸುರಕ್ಷಾ ಸಾಧನಗಳು, ಸೇವಾ ಭದ್ರತೆ, ಉಚಿತ ಕೊರೋನಾ ಚಿಕಿತ್ಸೆ ಹಾಗೂ ಎಲ್ಲ ಕಾರ್ಯಕರ್ತೆಯರಿಗೆ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಜು.10ರಿಂದ ರಾಜ್ಯದಾದ್ಯಂತ ಸೇವೆ ಸ್ಥಗಿತಗೊಳಿಸಿ ಮುಷ್ಕರ ಹೂಡಿದ ಆಶಾ ಕಾರ್ಯಕರ್ತೆಯರು
ಬೆಂಗಳೂರು(ಜು.13): ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ರಾಜ್ಯಾದ್ಯಂತ ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ಮೂರು ದಿನ ಪೂರೈಸಿದ್ದು, ಜು.13ರಿಂದ ಜು.17ರವರೆಗೆ ರಾಜ್ಯದಾದ್ಯಂತ ವಿವಿಧ ಹಂತಗಳಲ್ಲಿ ಹೋರಾಟ ನಡೆಸಲು ಉದ್ದೇಶಿಸಿದ್ದಾರೆ.
ಮಾಸಿಕ ಗೌರವ ಧನ ಹೆಚ್ಚಳ, ವೈಯಕ್ತಿಕ ಆರೋಗ್ಯ ಸುರಕ್ಷಾ ಸಾಧನಗಳು, ಸೇವಾ ಭದ್ರತೆ, ಉಚಿತ ಕೊರೋನಾ ಚಿಕಿತ್ಸೆ ಹಾಗೂ ಎಲ್ಲ ಕಾರ್ಯಕರ್ತೆಯರಿಗೆ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಜು.10ರಿಂದ ರಾಜ್ಯದಾದ್ಯಂತ ಸೇವೆ ಸ್ಥಗಿತಗೊಳಿಸಿ ಮುಷ್ಕರ ಹೂಡಿದ್ದಾರೆ. ಇದೀಗ ಹೋರಾಟವನ್ನು ಹಂತ ಹಂತವಾಗಿ ಮುಂದುವರೆಸಲು ತೀರ್ಮಾನಿಸಿದ್ದಾರೆ. ಜು.13ರಂದು ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಪಟ್ಟಣ, ಗ್ರಾಮ ಪಂಚಾಯಿತಿ ಮುಂದೆ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಿದ್ದಾರೆ.
ಬೇಡಿಕೆ ಈಡೇರಿಸಲು ಸರ್ಕಾರ ನಕಾರ; ಹೋರಾಟಕ್ಕಿಳಿದ ಆಶಾ ಕಾರ್ಯಕರ್ತೆಯರು
ನಗರ, ಪಟ್ಟಣದಲ್ಲಿರುವವರು ಮುನ್ಸಿಪಾಲಿಟಿ, ಕಾರ್ಪೋರೇಷನ್ ಬಳಿ ಹೋರಾಟ ನಡೆಸಲಿದ್ದಾರೆ. ಜು.14ರಂದು ಜಿಲ್ಲೆ, ತಾಲೂಕು, ಪಟ್ಟಣ ಕೇಂದ್ರಗಳಲ್ಲಿ ಮಾನವ ಸರಪಳಿ ಮಾಡಿ ಪ್ರತಿಭಟನೆ ಜರುಗಲಿದೆ ಎಂದು ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಜು.15ರಂದು ಮುಖ್ಯಮಂತ್ರಿಗಳಿಗೆ ಪತ್ರ ಚಳವಳಿ ನಡೆಯಲಿದೆ. ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಿದ್ದಾರೆ. ಜು.16ರಂದು ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)ದ ಮುಂಭಾಗ ಧರಣಿ ಕೈಗೊಳ್ಳಲಿದ್ದಾರೆ. ಜು.17ರಂದು ಕುಟುಂಬ ಸಮೇತ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಪೋಸ್ಟರ್ ಹಿಡಿದ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಸರ್ಕಾರವನ್ನು ಒತ್ತಾಯಿಸಲಿದ್ದಾರೆ ಎಂದು ಸಂಘದ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ ಮಾಹಿತಿ ನೀಡಿದರು.