ಪ್ರೀಮಿಯಂ ಕಟ್ಟಿದ ಕ್ಷಣದಿಂದಲೇ ವಿಮೆ ಜಾರಿ| ವಾಹನ ವಿಮೆ ಮಾಡಿಸಿದ ದಿನದ ಮಧ್ಯರಾತ್ರಿಯಿಂದ ಜಾರಿ ಎಂದ ವಿಮಾ ಕಂಪನಿಯ ವಾದ ತಪ್ಪು| ಹೈಕೋರ್ಟ್ ಮಹತ್ವದ ತೀರ್ಪು
ಬೆಂಗಳೂರು(ಡಿ.23): ಪ್ರೀಮಿಯಂ ಮೊತ್ತ ಸ್ವೀಕರಿಸಿದ ದಿನದ ಮಧ್ಯರಾತ್ರಿಯಿಂದ ಪಾಲಿಸಿ ಜಾರಿಯಾಗಿ ಹಾನಿ ಪರಿಹಾರದ ವ್ಯಾಪ್ತಿ (ರಿಸ್ಕ್ ಕವರ್) ಆರಂಭವಾಗುತ್ತದೆ ಎಂಬ ವಿಮಾ ಕಂಪನಿಯ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್, ಪ್ರೀಮಿಯಂ ಸ್ವೀಕರಿಸಿದ ಕ್ಷಣದಿಂದಲೇ ಪಾಲಿಸಿ ಜಾರಿಗೆ ಬಂದು ವಾಹನವು ಹಾನಿ ಪರಿಹಾರದ ವ್ಯಾಪ್ತಿಗೆ ಬರಲಿದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ವಾಹನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚೇಟಿ ಸಂಜೀವ್ ಕುಮಾರ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಆದೇಶಿಸಿದೆ.
ವಿಮೆ ಮಾಡಿಸಿದ ದಿನವೇ ಅಪಘಾತ:
ಬೀದರ್ ಜಿಲ್ಲೆಯ ನಿವಾಸಿ ಸುಭಾಷ್ ಮ್ಯಾಕ್ಸಿ ಕ್ಯಾಬ್‌ವೊಂದರ ಮಾಲಿಕರಾಗಿದ್ದು, 2008ರ ಮೇ 7ರಂದು ಬೆಳಗ್ಗೆ 10 ಗಂಟೆಗೆ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಾರ್ಪೋರೇಷನ್ ಲಿಮಿಟೆಡ್ ಕಂಪನಿ ಏಜೆಂಟ್‌ಗೆ ವಿಮಾ ಪಾಲಿಸಿಯ ಪ್ರೀಮಿಯಂ ಪಾವತಿಸಿದ್ದರು. ಅದೇ ದಿನ ಮಧ್ಯಾಹ್ನ 1.30ರಂದು ಕ್ಯಾಬ್ ಅಪಘಾತಕ್ಕೆ ಗುರಿಯಾಗಿತ್ತು. ಸುದರ್ಶನ್ ಸೇರಿ ಕ್ಯಾಬ್‌ನಲ್ಲಿದ್ದ ಇತರರು ಗಂಭೀರವಾಗಿ ಗಾಯಗೊಂಡಿದ್ದರು.
ಬೀದರ್ ಪ್ರಧಾನ ಜಿಲ್ಲಾ ಮತ್ತು ಮೋಟಾರು ವಾಹನ ಅಪಘಾತ ಕ್ಲೇಮು ನ್ಯಾಯಾಧಿಕರಣ, 2008ರ ಮೇ 8ರ ಮಧ್ಯರಾತ್ರಿ 12ರಿಂದ ವಿಮಾ ಪಾಲಿಸಿ ಜಾರಿಯಲ್ಲಿದೆ. ಹೀಗಾಗಿ, ಕ್ಯಾಬ್ ಮಾಲಿಕರೇ ಸುದರ್ಶನ್ ಹಾಗೂ ಅಪಘಾತ ಸಂತ್ರಸ್ತರಿಗೆ ವಾರ್ಷಿಕ ಶೇ.6 ಬಡ್ಡಿದರಲ್ಲಿ 1,07,300 ರು. ಪರಿಹಾರ ಪಾವತಿಸಬೇಕು ಎಂದು ನಿರ್ದೇಶಿಸಿ 2012ರ ಜು.27ರಂದು ಆದೇಶಿಸಿತ್ತು. ಪರಿಹಾರ ಮೊತ್ತವನ್ನು ಹೆಚ್ಚಿಸಲು ಕೋರಿ ಕ್ಲೇಮುದಾರ ಸುದರ್ಶನ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಜತೆಗೆ, ಪರಿಹಾರ ಪಾವತಿ ಹೊಣೆಯನ್ನು ಕ್ಯಾಬ್ ಮಾಲಿಕನ ಮೇಲೆ ಹೊರಿಸಿದ್ದನ್ನು ಆಕ್ಷೇಪಿಸಿದ್ದರು.
ವಿಮಾ ಕಂಪನಿ ಪರ ವಕೀಲರು, 2008ರ ಮೇ 7ರಂದು ಮಧ್ಯಾಹ್ನ 1.30ಕ್ಕೆ ಅಪಘಾತ ಸಂಭವಿಸಿದೆ. 2008ರ ಮೇ 8ರ ಮಧ್ಯರಾತ್ರಿ 12ರಿಂದ ವಿಮಾ ಪಾಲಿಸಿ ಜಾರಿಯಲ್ಲಿದ್ದು, ಮುಂದಿನ 12 ತಿಂಗಳಿಗೆ ಅನ್ವಯವಾಗಿತ್ತು. ಹೀಗಾಗಿ, ಅಪಘಾತ ನಡೆದ ದಿನದಂದು ಪಾಲಿಸಿ ಜಾರಿಯಲ್ಲಿ ಇರಲಿಲ್ಲ. ಈ ಆಂಶವನ್ನು ಪರಿಗಣಿಸಿ ಕ್ಲೇಮುದಾರರಿಗೆ ಪರಿಹಾರ ಪಾವತಿ ಹೊಣೆಯನ್ನು ಕ್ಯಾಬ್ ಮಾಲಿಕನಿಗೆ ಹೊರಿಸಿರುವುದು ಸರಿಯಾಗಿದೆ ಎಂದು ವಾದಿಸಿದ್ದರು.
ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ಹೈಕೋರ್ಟ್, ಅಪಘಾತವು 2008ರ ಮೇ 7ರಂದು ಮಧ್ಯಾಹ್ನ 1.30ಕ್ಕೆ ಸಂಭವಿಸಿದೆ. ವಿಮಾ ಪಾಲಿಸಿಯು ಮೇ 8ರ ಮಧ್ಯರಾತ್ರಿ 12ರಿಂದ ಜಾರಿಗೆ ಬಂದಿರುವುದಾಗಿ ಕಂಪನಿ ಹೇಳುತ್ತದೆ. ಆದರೆ, ಮೇ 7ರಂದು ಕಚೇರಿ ಸಮಯ ಬೆಳಗ್ಗೆ 10ರಿಂದ ಆರಂಭವಾಗಲಿದೆ. ಕಚೇರಿ ಸಮಯ ಆರಂಭವಾದ ಕೆಲವೇ ಸಮಯದಲ್ಲಿ ಕ್ಯಾಬ್ ಮಾಲಿಕ ಪ್ರೀಮಿಯಂ ಪಾವತಿಸಿದ್ದಾರೆ. ಹೀಗಾಗಿ, ವಿಮಾ ಕಂಪನಿ ಮತ್ತು ವಾಹನ ಮಾಲಿಕರ ನಡುವಿನ ಪಾಲಿಸಿ ಒಪ್ಪಂದವು ಪ್ರೀಮಿಯಂ ಪಾವತಿಸಿದ ಕ್ಷಣದಿಂದಲೇ ಆರಂಭವಾಗುತ್ತದೆ ಹಾಗೂ ವಾಹನವು ನಷ್ಟಪರಿಹಾರದ ವ್ಯಾಪ್ತಿಗೆ ಬರಲಿದೆ ಎಂದು ಆದೇಶಿಸಿತು.
ಜತೆಗೆ, ಕ್ಲೇಮುದಾರರು ಅಪಘಾತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿರುವುದರಿಂದ ಅಧೀನ ನ್ಯಾಯಾಲಯ ಪ್ರಕಟಿಸಿದ ಮೊತ್ತಕ್ಕಿಂತ ಹೆಚ್ಚುವರಿ 30,487 ರು. ಪಡೆಯಲು ಅರ್ಹರಾಗಿರುತ್ತದೆ. ವಿಮಾ ಕಂಪನಿಯು, ಪರಿಹಾರ ಮೊತ್ತವನ್ನು ಆರು ವಾರಗಳಲ್ಲಿ ಕ್ಲೇಮುದಾರರ ಹೆಸರಿಗೆ ಠೇವಣಿ ಇಡಬೇಕು ಎಂದು ಆದೇಶಿಸಿತು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 23, 2020, 8:31 AM IST