ಬೆಂಗಳೂರು(ಸೆ.04): ಸಿಲಿಕಾನ್‌ ಸಿಟಿಯ ಶ್ವಾಸಕೋಶದಂತಿರುವ ಕಬ್ಬನ್‌ ಉದ್ಯಾನದಲ್ಲಿ ಸಂಪೂರ್ಣ ವಾಹನ ಸಂಚಾರ ನಿಷೇಧಿಸಲು ತೋಟಗಾರಿಕೆ ಇಲಾಖೆ ತೀರ್ಮಾನಿಸಿದ್ದು, ಮುಂದಿನ ಎರಡು ವಾರದಲ್ಲಿ ಆದೇಶ ಹೊರ ಬೀಳಲಿದೆ.

ಕಬ್ಬನ್‌ ಉದ್ಯಾನದಲ್ಲಿ ಪರಿಸರ ಮಾಲಿನ್ಯವಾಗದಂತೆ ಕ್ರಮ ವಹಿಸಲು ಈಗಾಗಲೇ ಬಿಬಿಎಂಪಿ ಅಧಿಕಾರಿಗಳು, ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆದಿದ್ದು, ಉದ್ಯಾನದಲ್ಲಿ ಸಂಪೂರ್ಣ ವಾಹನಗಳ ನಿಷೇಧಕ್ಕೆ ಒಮ್ಮತದಿಂದ ಒಪ್ಪಿಗೆ ಸೂಚಿಸಿದ್ದಾರೆ. ಈ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಶೀಘ್ರದಲ್ಲಿ ಎಲ್ಲ ರೀತಿಯ ವಾಹನಗಳ ಪ್ರವೇಶ ನಿಷೇಧಿಸಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉದ್ಯಾನದಲ್ಲಿ ವಾಹನ ಸಂಚಾರ ನಿಷೇಧಿಸುವ ಕುರಿತು ಪರಿಸರ ಪ್ರೇಮಿಗಳು, ಸಾರ್ವಜನಿಕರ ಒತ್ತಡ ಹೆಚ್ಚಾಗುತ್ತಿದೆ. ಇದು ನಗರದ ಹೃದಯ ಭಾಗದಲ್ಲಿರುವುದರಿಂದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬೇಕು ಎಂಬ ಬೇಡಿಕೆಗಳೂ ಬರುತ್ತಿವೆ. ಆದರೆ, ನಗರದಲ್ಲಿ ಉತ್ತಮ ಗಾಳಿ ಲಭ್ಯವಾಗುವಂತೆ ಮಾಡಬೇಕು. ಅಲ್ಲದೆ, ಈ ಉದ್ಯಾನವನ ಕರ್ನಾಟಕ ಸರ್ಕಾರಿ ಉದ್ಯಾನಗಳ (ಸಂರಕ್ಷಣೆ) ಕಾಯ್ದೆ-1975ರ ವ್ಯಾಪ್ತಿಗೆ ಒಳಪಟ್ಟಿದೆ. ಹಾಗಾಗಿ, ವಾಹನ ಸಂಚಾರ ನಿಷೇಧಿಸಲು ನಿರ್ಧರಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಬೆಂಗಳೂರು: ಕಬ್ಬನ್‌- ಲಾಲ್‌ಬಾಗ್‌ ಉದ್ಯಾನದಲ್ಲಿ ವಾಯು ವಿಹಾರಕ್ಕೆ ಅವಕಾಶ

ಲಾಲ್‌ಬಾಗ್‌ ಮಾದರಿ ಅಭಿವೃದ್ಧಿ

ವಾಹನ ಸಂಚಾರವನ್ನು ನಿಷೇಧಿಸಿದ ಬಳಿಕ ಕಬ್ಬನ್‌ ಉದ್ಯಾನವನವನ್ನು ಲಾಲ್‌ಬಾಗ್‌ ಮಾದರಿಯಲ್ಲಿ ಸುತ್ತಲು ಕಾಂಪೌಂಡ್‌ ನಿರ್ಮಿಸಿ ಅಭಿವೃದ್ಧಿ ಪಡಿಸಬೇಕು ಎಂಬ ಚಿಂತನೆಯಿದೆ. ವಾಹನ ಸಂಚಾರಕ್ಕೆ ಅವಕಾಶ ಇರುವುದರಿಂದ ಭದ್ರತೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಉದ್ಯಾನವನದ ಎಲ್ಲ ದ್ವಾರಗಳಿಂದ ಸಾರ್ವಜನಿಕರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಜೊತೆಗೆ, ಉದ್ಯಾನದ ಸೌಂದರ್ಯ ವೃದ್ಧಿಸುವಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ರಾಜೇಂದ್ರ ಕುಮಾರ್‌ ಕಟಾರಿಯಾ ವಿವರಿಸಿದರು.

"