ಬೆಂಗಳೂರು (ಫೆ.14):  ನಮ್ಮ ನಾಯಕರಾದ ಯಡಿಯೂರಪ್ಪ ಅವರಿಗೆ ಕೊಡುತ್ತಿರುವ ಹಿಂಸೆ ನೋಡಿದರೆ ಯಾರಿಗಾದರೂ ಅಯ್ಯೋ ಎನಿಸುತ್ತದೆ. ಒಂದು ಕಡೆ ಕುರುಬರು, ಮತ್ತೊಂದು ಕಡೆ ವಾಲ್ಮೀಕಿಗಳು, ಇನ್ನೊಂದೆಡೆ ನಾವು ಕೂಡ ಅವರಿಗೆ ಹಿಂಸೆ ನೀಡುತ್ತಿದ್ದೇವೆ...

- ಹೀಗಂತ ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎಸ್‌. ಪರಮಶಿವಯ್ಯ ಬೇಸರಿಸಿದ್ದಾರೆ.

ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆದ ರಾಷ್ಟ್ರೀಯ ವೀರಶೈವ ಲಿಂಗಾಯತ ಮಠಾಧೀಶರ ಒಕ್ಕೂಟದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂತಹ ಹಿಂಸೆಯ ನಡುವೆಯೂ ಯಡಿಯೂರಪ್ಪ ಅವರು ಉತ್ತಮವಾಗಿ ಸರ್ಕಾರ ನಡೆಸುತ್ತಿದ್ದಾರೆ. ಕೊರೋನಾ ಸಂಕಷ್ಟದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಇಂತಹ ಸಂಕಷ್ಟದಲ್ಲಿ ಬಜೆಟ್‌ ಮಂಡನೆಯ ಸವಾಲು ಕೂಡ ಅವರ ಮೇಲಿದೆ. ಆದರೂ, ನಮ್ಮ ಸಮುದಾಯದ ಹಿತದೃಷ್ಟಿಯಿಂದ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳಿಗೂ ಒಬಿಸಿ ಸ್ಥಾನಮಾನಕ್ಕಾಗಿ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಮನವಿ ಮಾಡೋಣ. ಫೆಬ್ರವರಿ 19 ರಂದು ಪ್ರಮುಖ ಮಠಾಧೀಶರ ನಿಯೋಗವನ್ನು ಭೇಟಿ ಮಾಡಿ ಮನವಿ ಸ್ವೀಕರಿಸಲು ಯಡಿಯೂರಪ್ಪ ಅವರು ಉದ್ದೇಶಿಸಿದ್ದಾರೆ ಎಂದರು.

ಸಿಎಂಗೆ ಮತ್ತೊಂದು ಟೆನ್ಷನ್, ಮೀಸಲಾತಿ ಹೋರಾಟಕ್ಕೆ ಇನ್ನೊಂದು ಸಮುದಾಯ ಅಖಾಡಕ್ಕೆ ...

ಲಿಂಗಾಯತ ಅಭಿವೃದ್ಧಿ ಮಂಡಳಿ ಅಧ್ಯಕ್ಷನಾಗಿ ನಾನು ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ನಾನು ಕೂಡ ಪಂಚಮಸಾಲಿ ಸಮಾಜಕ್ಕೆ ಸೇರಿದವನೇ. ಹಾಗಾಗಿ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟವನ್ನು ನಾನು ವಿರೋಧಿಸುವುದಿಲ್ಲ, ಬದಲಾಗಿ ಸ್ವಾಗತಿಸುತ್ತೇನೆ. ಎಲ್ಲ ಪಂಚಪೀಠಾಧೀಶ್ವರರು ಹಾಗೂ ವಿರಕ್ತ ಮಠಗಳ ಪೀಠಾಧೀಶ್ವರರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಮಾಜದ ಒಗ್ಗಟ್ಟಿನ ದೃಷ್ಟಿಯಿಂದ ಎಲ್ಲರೂ ಒಂದೇ ಎಂದು ತೋರಿಸಲು ಈ ಸಭೆ ಸೇರಿಸಿದ್ದೇವೆ ಎಂದರು.

ಒಬಿಸಿಗೆ ಸೇರ್ಪಡೆಯಾದರೆ ಸಮುದಾಯಕ್ಕೆ ಅನುಕೂಲವಾಗಲಿದೆ. ಮೊಟ್ಟಮೊದಲು 3ಬಿಗೆ ಹೋರಾಟ ಮಾಡಿದ್ದು ಕೂಡ ನಾವೇ. 3ಬಿಯಿಂದ ಅನುಕೂಲ ಆಗಿದೆ ಆದರೂ ಒಬಿಸಿಗೆ ಸೇರಿಸಿದರೆ ಇನ್ನಷ್ಟುಅನುಕೂಲ ಆಗಲಿದೆ. ನಮ್ಮ ಬೇಡಿಕೆಗೆ ಕೇಂದ್ರ ಮಾನ್ಯತೆ ಕೊಡದೆ ಇದ್ದರೆ ನಾವು ಕೂಡ ಪಂಚಮ ಸಾಲಿಗರು ಮಾಡುತ್ತಿರುವುದಕ್ಕಿಂತ ದೊಡ್ಡದಾಗಿ ಬಸವ ಕಲ್ಯಾಣದಿಂದ ಬೃಹತ್‌ ಜಾಥಾ ಮಾಡೋಣ ಎಂದು ಹೇಳಿದರು.