Belagavi: ಹಿಂಡಲಗಾ ಜೈಲಲ್ಲಿ ಸಾವರ್ಕರ್ ಫೋಟೋ ಅನಾವರಣಗೊಳಿಸಿದ ಸಚಿವ ನಾಗೇಶ್
ಸುವರ್ಣ ಸೌಧ ಆಯ್ತು, ಈಗ ಬೆಳಗಾವಿಯ ಹಿಂಡಲಗಾ ಜೈಲಲ್ಲೂ ವೀರ ಸಾವರ್ಕರ್ ಫೋಟೋವನ್ನು ಅನಾವರಣಗೊಳಿಸಲಾಗಿದೆ. ಈ ಹಿಂದೆ ಸಾವರ್ಕರ ಅವರು ಹಿಂಡಲಗಾ ಜೈಲಲ್ಲಿ 100 ದಿನ ವಿಚಾರಣಾಧೀನ ಕೈದಿಯಾಗಿದ್ದರು.
ಬೆಳಗಾವಿ (ಡಿ.30): ಸುವರ್ಣ ಸೌಧ ಆಯ್ತು, ಈಗ ಬೆಳಗಾವಿಯ ಹಿಂಡಲಗಾ ಜೈಲಲ್ಲೂ ವೀರ ಸಾವರ್ಕರ್ ಫೋಟೋವನ್ನು ಅನಾವರಣಗೊಳಿಸಲಾಗಿದೆ. ಈ ಹಿಂದೆ ಸಾವರ್ಕರ ಅವರು ಹಿಂಡಲಗಾ ಜೈಲಲ್ಲಿ 100 ದಿನ ವಿಚಾರಣಾಧೀನ ಕೈದಿಯಾಗಿದ್ದರು. ಹೀಗಾಗಿ, ಅವರಿದ್ದ ಸೆಲ್‌ನಲ್ಲೇ ಅವರ ಫೋಟೋವನ್ನು ಅನಾವರಣಗೊಳಿಸಲಾಗಿದೆ. ಗುರುವಾರ ಹಿಂಡಲಗಾ ಜೈಲಿಗೆ ಭೇಟಿ ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ, ವಿಧಾನ ಪರಿಷತ್ ಸದಸ್ಯ ರವಿಕುಮಾರ, ಶಾಸಕ ಮಸಾಲೆ ಜಯರಾಂ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಜೈಲು ಅಧಿಕಾರಿಗೆ ಫೋಟೋ ನೀಡಿದರು.
ಬಳಿಕ, ಅವರಿದ್ದ ಸೆಲ್‌ನಲ್ಲಿ ಫೋಟೋ ಅನಾವರಣಗೊಳಿಸಿ, ಪುಷ್ಪನಮನ ಸಲ್ಲಿಸಿದರು. ಭಾರತ ಮಾತಾ ಕೀ ಜೈ, ಸ್ವಾತಂತ್ರ್ಯ ವೀರ ಸಾವರ್ಕರಗೆ ಜಯವಾಗಲಿ ಎಂದು ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಸಚಿವ ನಾಗೇಶ, ಈ ಹಿಂದೆ ಸಾವರ್ಕರ ಅವರು ಹಿಂಡಲಗಾ ಜೈಲಿನಲ್ಲಿ ಸೆರೆಮನೆವಾಸ ಅನುಭವಿಸಿದ್ದರು. ಹೀಗಾಗಿ, ಅವರಿದ್ದ ಸೆಲ್‌ನಲ್ಲಿ ಅವರ ಫೋಟೋ ಹಾಕಲಾಗಿದೆ. ಅಂಡಮಾನ್ ಜೈಲಿನಲ್ಲಿ ಅವರ ಫೋಟೋ ಇದೆ. ಅದನ್ನು ನೋಡಿದರೆ ಕರುಳು ಕಿವುಚಿದ ಹಾಗೇ ಆಗುತ್ತದೆ. ಇಂದು ತ್ಯಾಗ ಮಾಡಿದವರ ಬಗ್ಗೆ ಕೆಲ ರಾಜಕಾರಣಿಗಳು ಕೀಳಾಗಿ ಮಾತನಾಡುತ್ತಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು. ಅಲ್ಲದೆ, ಫೋಟೋವನ್ನು ಚೆನ್ನಾಗಿ ಇಟ್ಟುಕೊಳ್ಳುವಂತೆ ಜೈಲಿನ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ: ಬರಮಾಡಿಕೊಂಡ ಸಿಎಂ ಬೊಮ್ಮಾಯಿ
ಹಿಂಡಲಗಾ ಜೈಲಿಗೆ ಅರಗ ಜ್ಞಾನೇಂದ್ರ ದಿಢೀರ್ ಭೇಟಿ: ಈ ಮಧ್ಯೆ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಗುರುವಾರ ದಿಢೀರ್ ಭೇಟಿ ನೀಡಿ, ಅಲ್ಲಿನ ರಕ್ಷಣಾ ವ್ಯವಸ್ಥೆ ಪರಿಶೀಲಿಸಿ, ಕೈದಿಗಳ ಜೊತೆ ಸಂವಾದ ನಡೆಸಿದರು. ಜೈಲಿನೊಳಗೆ, ಮೊಬೈಲ್, ಗಾಂಜಾ ಹಾಗೂ ಮಾದಕ ವಸ್ತುಗಳ ಅಕ್ರಮ ಸರಬರಾಜು ತಡೆಯಲು ಜೈಲು ಸಿಬ್ಬಂದಿ ಕೈಗೊಂಡ ಕ್ರಮಗಳ ಖುದ್ದು ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜೈಲಿನೊಳಗೆ ಆಹಾರ, ಭದ್ರತೆ, ಆಸ್ಪತ್ರೆಯ ವ್ಯವಸ್ಥೆ ಹೇಗಿದೆ ಎಂಬುದರ ಕುರಿತು ಕೈದಿಗಳಿಂದ ಮಾಹಿತಿ ಪಡೆದಿದ್ದೇನೆ. ಕೆಲ ಲೋಪದೋಷಗಳ ಬಗ್ಗೆ ಇಲ್ಲಿನ ಸಿಬ್ಬಂದಿ ಜೊತೆ ಮಾತನಾಡಿ, ಎಚ್ಚರಿಕೆ ನೀಡಿದ್ದೇನೆ. ಈ ಜೈಲಿನಲ್ಲಿ ಬಹಳ ನಟೋರಿಯಸ್ ಕೈದಿಗಳಿದ್ದಾರೆ. ಬೇರೆ, ಬೇರೆ ಜೈಲುಗಳಲ್ಲಿ ಕೈದಿಗಳಿಗೆ ಗಾಂಜಾ, ಅಫೀಮು ಸೇರಿ ಮಾದಕವಸ್ತುಗಳು ಸಿಗುತ್ತಿದ್ದವು. ಕೊಲೆ ಕೈದಿಗಳಿಗೆ ರಾಯಲ್ ಟ್ರೀಟ್‌ಮೆಂಟ್ ಸಿಗುತ್ತಿತ್ತು. ಪರಪ್ಪನ ಅಗ್ರಹಾರದಲ್ಲಿ ಇದಕ್ಕೆ ಸಂಬಂಧಿಸಿ 35 ಜನರನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಲಾಗಿದೆ. ಅವರಿಗೆ ಭವಿಷ್ಯದಲ್ಲಿ ಯಾವುದೇ ಬಡ್ತಿ ಕೂಡ ಸಿಗುವುದಿಲ್ಲ ಎಂದು ಹೇಳಿದರು.
ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಅಸ್ತು: ಹೋರಾಟ ಹಾದಿ ಮೆಲುಕು ಹಾಕಿದ ಗಣ್ಯರು
ರಾಜ್ಯದಲ್ಲಿ 3,000 ಕೈದಿಗಳಿಗೆ ಅಕ್ಷರ ಜ್ಞಾನ ಹೇಳಿಕೊಡುವ ಕೆಲಸ ಆಗುತ್ತಿದೆ. ಜೈಲು ಸುಧಾರಣೆಗೆ ಇನ್ನೂ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ದೊಡ್ಡ ಕೈಗಾರಿಕೆಗಳು ಜೈಲಿನಲ್ಲಿರುವ ಕೈದಿಗಳಿಗೆ ತಾಂತ್ರಿಕ ಮಾಹಿತಿ, ತರಬೇತಿ ನೀಡಲು ಮುಂದೆ ಬಂದರೆ ಅವಕಾಶ ಕಲ್ಪಿಸಲಾಗುತ್ತದೆ. ಜೈಲಿನಲ್ಲಿರುವ ಮಾನವ ಸಂಪನ್ಮೂಲ ರಾಷ್ಟ್ರೀಯ ಸಂಪನ್ಮೂಲವಾಗಿ ಪರಿವರ್ತನೆ ಆಗಬೇಕು ಎಂಬುದು ನಮ್ಮ ಧ್ಯೇಯವಾಗಿದೆ ಎಂದು ಹೇಳಿದರು.