ರಾಜ್ಯದಲ್ಲಿ ಮತ್ತೊಂದು ಬಂದ್ ಗೆ ಕರೆ ನೀಡಲಾಗಿದೆ. ಕನ್ನಡ ಪರ ಹೋರಾಟಗಾರ ವಾಟಾಳ್ ನಾಗಾರಜ್ ರಾಜ್ಯದ ಗಡಿನಾಡು ಪ್ರದೇಶಗಳ ಅಭಿವೃದ್ಧಿಗೆ ಆಗ್ರಹಿಸಿ ನ.24 ರಂದು ಕಾರವಾರ ಬಂದ್‌ಗೆ ಕರೆ ನೀಡಿದ್ದಾರೆ. 

ಬೆಂಗಳೂರು : ರಾಜ್ಯದ ಗಡಿನಾಡು ಪ್ರದೇಶಗಳ ಅಭಿವೃದ್ಧಿಗೆ ಆಗ್ರಹಿಸಿ ನ.24 ರಂದು ಕಾರವಾರ ಬಂದ್‌ಗೆ ಕರೆ ನೀಡಲಾಗಿದೆ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಗಡಿಪ್ರದೇಶಗಳು ಅಭಿವೃದ್ಧಿ ಇಲ್ಲದೇ ತಬ್ಬಲಿಯಾಗಿವೆ. ಈವರೆಗೆ ಅಧಿಕಾರಕ್ಕೆ ಬಂದ ಯಾವುದೇ ಪಕ್ಷಗಳು ಗಡಿ ಪ್ರದೇಶದ ಅಭಿವೃದ್ಧಿಗೆ ಕ್ರಮ ಕೈಗೊಂಡಿಲ್ಲ. ಗಡಿ ಪ್ರದೇಶದಲ್ಲಿನ ಜನ ಉದ್ಯೋಗ, ಮೂಲಸೌಕರ್ಯ ಸಿಗದೆ ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಮುದ್ರ ತೀರದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಹ ಹೊರತಾಗಿಲ್ಲ ಎಂದರು.

ಚಾಮರಾಜನಗರ ಜಿಲ್ಲೆ ಮಾಡಲಾಗಿದೆ. ಆದರೆ, ಜಿಲ್ಲೆಯ ಅಭಿವೃದ್ಧಿಗೆ ಬೇಕಾದ ಯಾವುದೇ ಕಾರ್ಯಕ್ರಮಗಳನ್ನು ರೂಪಿಸದೇ ಕಡೆಗಣಿಸಲಾಗುತ್ತಿದೆ. ಹೀಗಾಗಿ ರಾಜ್ಯದ ಗಡಿನಾಡು ಅಭಿವೃದ್ಧಿಗೆ ಆಗ್ರಹಿಸಿ ನ. 24 ರಂದು ಕಾರವಾರ ಬಂದ್‌ ಕರೆ ನೀಡಲಾಗಿದ್ದು, ಕಾರವಾರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಂದು ಬೆಳಗ್ಗೆ 10 ಗಂಟೆಗೆ ಧರಣೆ ನಡೆಸಲಾಗುವುದು ಎಂದು ತಿಳಿಸಿದರು.

ಕಾರವಾರ ಅತ್ಯಂತ ಸುಂದರ ಮತ್ತು ಪ್ರವಾಸೋದ್ಯಮಕ್ಕೆ ಉತ್ತಮ ಸ್ಥಳವಾಗಿದೆ. ಆದರೆ, ಅಲ್ಲಿನ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಅಭಿವೃದ್ಧಿ ಮಾಡುವ ಇಚ್ಛಾಶಕ್ತಿ ಇಲ್ಲ. ಕಾರವಾರದ ಜನ ಪಕ್ಕದ ಗೋವಾ ಹಾಗೂ ಮಹಾರಾಷ್ಟ್ರದ ಮುಂಬೈಗೆ ಉದ್ಯೋಗಕ್ಕಾಗಿ ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

ಇನ್ನು ಕಾರವಾರದಲ್ಲಿ ರಕ್ಷಣಾ ಇಲಾಖೆಯ ಸೀಬರ್ಡ್‌ ನೌಕಾನೆಲೆ ಸ್ಥಾಪನೆಗೆ ಸಾವಿರಾರು ಎಕರೆ ಪ್ರದೇಶವನ್ನು ನೀಡಲಾಗಿದೆ. ಆದರೆ, ಸೀಬರ್ಡ್‌ನಲ್ಲಿ ಕನ್ನಡಿಗರಿಗೆ ಉದ್ಯೋಗವಿಲ್ಲ. ಉದ್ಯೋಗದ ಸಂದರ್ಶನ ಮುಂಬೈನಲ್ಲಿ ನಡೆಯುತ್ತದೆ. ಈ ಬಗ್ಗೆ ಕೇಂದ್ರ ರಕ್ಷಣಾ ಇಲಾಖೆಯೊಂದಿಗೆ ರಾಜ್ಯ ಸರ್ಕಾರ ಚರ್ಚೆ ಮಾಡಬೇಕು ಎಂದು ಇದೇ ವೇಳೆ ಆಗ್ರಹಿಸಿದರು.