ಬೆಂಗಳೂರು(ಡಿ.12): ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಹಿಂಪಡೆಯದಿದ್ದರೆ ಸಾಹಿತ್ಯ ಸಮ್ಮೇಳನವನ್ನು ನಡೆಸುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್‌ ರಾಜ್ಯ ಸರ್ಕಾರದ ಮೇಲೆ ಒತ್ತಡ ತರದಿದ್ದರೆ ಹಾವೇರಿಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಲು ಬಿಡುವುದಿಲ್ಲ ಎಂದು ವಿವಿಧ ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ.

ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಮುಂಭಾಗ ಶುಕ್ರವಾರ ವಿವಿಧ ಕನ್ನಡಪರ ಸಂಘಟನೆಗಳ ಜತೆ ಪ್ರತಿಭಟನೆ ನಡೆಸಿದ ಕನ್ನಡ ಒಕ್ಕೂಟದ ಸದಸ್ಯರು, ಮರಾಠ ಅಭಿವೃದ್ಧಿ ನಿಗಮದ ವಿರುದ್ಧ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್‌ ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ನಾಡು, ನೆಲ-ಜಲದ ಬಗ್ಗೆ ಕಾಳಜಿ ವಹಿಸಬೇಕಾದ ಕನ್ನಡ ಸಾಹಿತ್ಯ ಪರಿಷತ್ತು ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿದರೂ ತಟಸ್ಥ ಧೋರಣೆ ಅನುಸರಿಸಿ ಕನ್ನಡಿಗರಿಗೆ ಅವಮಾನ ಮಾಡಿದೆ ಎಂದರು.

ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಹಾಗೂ ಸಾ.ರಾ.ಗೋವಿಂದು ಮಾತನಾಡಿ, ‘ಕನ್ನಡಿಗರ ಮೇರು ಸಂಸ್ಥೆ ಮುಂಭಾಗ ಪ್ರತಿಭಟನೆ ಮಾಡುವಂಥ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ಮನು ಬಳಿಗಾರ್‌ ಅವರು ನಾವು ಕನ್ನಡಿಗರನ್ನು ಪ್ರತಿನಿಧಿಸುವ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಎಂಬುದನ್ನು ಮರೆತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮರಾಠ ಅಭಿವೃದ್ಧಿ ನಿಗಮ, ಮರಾಠ ಭಾಷೆಯ ಅಭಿವೃದ್ಧಿಗಲ್ಲ: ಡಿಸಿಎಂ ಕಾರಜೋಳ

‘ಕರ್ನಾಟಕ ಬಂದ್‌ ಮಾಡಿ ಹೋರಾಟ ಮಾಡಿದರೂ ಕಸಾಪ ಅಧ್ಯಕ್ಷರು, ಪದಾಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದಾರೆ. ಈ ಧೋರಣೆ ಸರಿಯಲ್ಲ. ಕನ್ನಡಿಗರ ಕಳಶದಂತಿರುವ ಪರಿಷತ್‌ ನಾಡು-ನುಡಿಗೆ ಧಕ್ಕೆಯಾದಾಗ ಹೋರಾಟಕ್ಕೆ ಬೆಂಬಲಿಸಬೇಕು. ವರ್ಷಕ್ಕೊಮ್ಮೆ ಸಮ್ಮೇಳನ ನಡೆಸಿ ಸುಮ್ಮನಾಗುವುದರಿಂದ ಏನು ಪ್ರಯೋಜನವಿಲ್ಲ. ಈ ರೀತಿಯ ವರ್ತನೆ ಬದಲಿಸದ್ದರೆ ಮುಂದಿನ ದಿನಗಳಲ್ಲಿ ನಿಮ್ಮನ್ನು ಕೇಳುವವರು ಇಲ್ಲದಂತಾಗುತ್ತದೆ’ ಎಂದು ಖಂಡಿಸಿದರು.

‘ಸಾಹಿತಿಗಳು, ಬುದ್ಧಿಜೀವಿಗಳು ಕನ್ನಡ ಸಂಘಟನೆಗಳಿಗೆ ಬೆಂಬಲ ನೀಡಬೇಕು. ಆದರೆ, ಕಸಾಪ ನಿಲುವು ಸರಿಯಲ್ಲ. ಮರಾಠ ನಿಗಮ ರಚನೆ ವಿಚಾರ ಸೂಕ್ಷ್ಮವಾದುದು. ಸಾಹಿತಿಗಳು, ಕನ್ನಡಪರ ಹೋರಾಟಗಾರರನ್ನು ಕರೆದು ಚರ್ಚೆ ಮಾಡಬೇಕು ಎಂಬ ಸಲಹೆಯನ್ನಾದರೂ ಪರಿಷತ್ತು ಸರ್ಕಾರಕ್ಕೆ ನೀಡಬೇಕಿತ್ತು. ಆದರೆ, ಆ ಕೆಲಸವನ್ನೂ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕರವೇ ವೇದಿಕೆ ಅಧ್ಯಕ್ಷ ಶಿವರಾಮೇಗೌಡ, ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷ ಮಂಜುನಾಥ ದೇವ್‌ ಸೇರಿದಂತೆ ಇನ್ನಿತರೆ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.