ಮುದ್ದೇಬಿಹಾಳ(ನ.23): ಕರ್ನಾಟಕ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವುದು ಕರ್ನಾಟಕದಲ್ಲಿ ವಾಸಿಸುತ್ತಿರುವ ಮರಾಠ ಸಮುದಾಯದ ಬಡ ಜನರ ಅಭಿವೃದ್ಧಿಗೆ ವಿನಃ ಮರಾಠಿ ಭಾಷೆಯ ಅಭಿವೃದ್ಧಿಗಲ್ಲ. ಮರಾಠಿಗರು ನಮ್ಮ ಅಣ್ಣ, ತಮ್ಮಂದಿರು ಇದ್ದಂತೆ ಎಂದು ಉಪ ಮುಖ್ಯಮಂತ್ರಿ, ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. 

ಪಟ್ಟಣದಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆಗೆ ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಉತ್ತರ ಕರ್ನಾಟಕದ ಹಲವಾರು ಗಡಿ ಜಿಲ್ಲೆಗಳಲ್ಲಿ ಮರಾಠಿಗರು ವಾಸಿಸುತಿದ್ದು ಕರ್ನಾಟಕದ ಜನರ ಜೊತೆ ಅನ್ಯೂನ್ಯವಾಗಿದ್ದಾರೆ. ಮರಾಠಿಗರಲ್ಲಿಯು ಬಡವರಿದ್ದು ಅವರ ಅಭಿವೃದ್ಧಿಗೆ ಮರಾಠ ಅಭಿವೃದ್ಧಿ ನಿಗಮ ಮಾಡಲಾಗಿದೆ. ಶಿವಾಜಿ ಮಹಾರಾಜರು ಪೂರ್ವಜರು ಕರ್ನಾಟಕ ಮೂಲದವರು. ನಮ್ಮ ಉತ್ತರ ಕರ್ನಾಟಕ ಭಾಗದ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸೊರಟೂರ ಗ್ರಾಮದವರು. ಹಾಗಿದ್ದ ಮೇಲೆ ಮಹಾರಾಷ್ಟ್ರದವರು ಹೇಗಾಗುತ್ತಾರೆ. ಇದಕ್ಕೆ ಪುರಾತನ ಇತಿಹಾಸವಿದೆ. ಆದರೆ, ಇತಿಹಾಸ ಗೊತ್ತಿಲ್ಲದವರ ಏನೇನೋ ಬಣ್ಣ ಕಟ್ಟಿಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕಾರ್ಯ ಮಾಡುತ್ತಿದ್ದಾರೆ. ಕಾರಣ ಕರ್ನಾಟಕ ಬಂದ್‌ ಕರೆಯನ್ನು ಕೈಬಿಡಬೇಕು ಎಂದು ಹೇಳಿದರು.

ಅಂದು ಬೈದಾಡಿದ್ರೂ, ಇಂದು ಯತ್ನಾಳ್‌ ಪರ ರೇಣುಕಾಚಾರ್ಯ ಬ್ಯಾಟಿಂಗ್

ಮಾದರಿ ಶಾಸಕ:

ಸಿಎಂ ಯಡಿಯುರಪ್ಪನವರು ಕೊರೋನಾ ಸಂಕಷ್ಟದಲ್ಲಿಯು ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಾ ಅಭಿವೃದ್ಧಿಯಲ್ಲಿ ರಾಜ್ಯ ಹಿನ್ನಡೆಯಾಗದಂತೆ ಆಡಳಿತ ನಡೆಸುತಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಿ ನೌಕರರಿಗೆ ವೇತನ ಕಡಿತಗೊಳಿಸಲಾಗಿದೆ. ಆದರೆ, ನಮ್ಮ ಯಡಿಯೂರಪ್ಪನವರ ನೇತೃತ್ವದ ಸರ್ಕಾರವು ಸರ್ಕಾರಿ ನೌಕರರ ಯಾವುದೇ ಒಂದು ನಯ್ಯಾಪೈಸೆ ವೇತನ ತಡೆಹಿಡಿಯದೇ ಎಲ್ಲರಿಗೂ ಸಮರ್ಪಕ ವೇತನ ಮಂಜೂರು ಮಾಡಿ ಉತ್ತಮ ಜನಪರ ಆಡಳಿತ ನಡೆಸುತ್ತಿದೆ. ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರು ಕ್ರಿಯಾಶೀಲ ಶಾಸಕರಾಗಿದ್ದು ಮುದ್ದೇಬಿಹಾಳ ಮತಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವಲ್ಲಿ ರಾಜ್ಯಕ್ಕೆ ಮಾದರಿ ಶಾಸಕರಾಗಿದ್ದಾರೆ ಎಂದರು.

ಈ ವೇಳೆ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಎ ಎಸ್‌ ಪಾಟೀಲ(ನಡಹಳ್ಳಿ),ಸಮಾಜ ಸೇವಕ ಶಾಂತಗೌಡ ಪಾಟೀಲ, ಹೇಮರಡ್ಡಿ ಮೇಟಿ, ಮಲಕೇಂದ್ರಾಯಗೌಡ ಪಾಟೀಲ, ಶಿವಶಂಕರಗೌಡ ಹಿರೇಗೌಡರ, ತಾಲೂಕು ಮಂಡಲದ ಅಧ್ಯಕ್ಷ ಪರುಶುರಾಮ ಪವಾರ, ಬಸವರಾಜ ಗುಳಬಾಳ, ಪ್ರಭು ಡೇರೆದ, ಡಿಸಿಸಿ ಬ್ಯಾಂಕ್‌ ನಿರ್ದೇಶಕ, ಕಾಶಿಬಾಯಿ ರಾಂಪೂರ, ತಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಹವಾಗದಾರ, ಸೋಮನಗೌಡ ಬಿರಾದಾರ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಶರಣು ಬೂದಿಹಾಳಮಠ, ಗುತ್ತಿಗೆದಾರರಾದ ಎಸ್‌ ಎಚ್‌ ಪಾಟೀಲ,ರಾಜು ಮೇಟಿ, ಸೇರಿದಂತೆ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.