ಕರಾವಳಿ ನಗರ ಮಂಗಳೂರಿಗೆ ಕೊಂಕಣ, ಕೇರಳ ಹಾಗೂ ಕಾಸರಗೋಡು ರೈಲು ಮಾರ್ಗ ಮೂಲಕ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಬೇಡಿಕೆ ಕೇಳಿಬರುತ್ತಿರುವಂತೆಯೇ ಈಗ ತಿರುವನಂತಪುರಂ-ಮಂಗಳೂರು ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಆರಂಭಿಸಲು ರೈಲ್ವೆ ಇಲಾಖೆ ತುದಿಗಾಲಲ್ಲಿ ಇರುವ ಮಾಹಿತಿ ಲಭಿಸಿದೆ.

- ಆತ್ಮಭೂಷಣ್‌

 ಮಂಗಳೂರು (ಆ.28) :  ಕರಾವಳಿ ನಗರ ಮಂಗಳೂರಿಗೆ ಕೊಂಕಣ, ಕೇರಳ ಹಾಗೂ ಕಾಸರಗೋಡು ರೈಲು ಮಾರ್ಗ ಮೂಲಕ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಬೇಡಿಕೆ ಕೇಳಿಬರುತ್ತಿರುವಂತೆಯೇ ಈಗ ತಿರುವನಂತಪುರಂ-ಮಂಗಳೂರು ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಆರಂಭಿಸಲು ರೈಲ್ವೆ ಇಲಾಖೆ ತುದಿಗಾಲಲ್ಲಿ ಇರುವ ಮಾಹಿತಿ ಲಭಿಸಿದೆ.

ಈಗಾಗಲೇ ತಿರುವನಂತಪುರಂ-ಕಾಸರಗೋಡು ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು(Vande Bharat Express train between Thiruvananthapuram and Kasaragod) ಸಂಚರಿಸುತ್ತಿದೆ. ಇದನ್ನೇ ಮಂಗಳೂರಿಗೆ ವಿಸ್ತರಿಸುವಂತೆ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಈಗಾಗಲೇ ರೈಲ್ವೆ ಇಲಾಖೆಗೆ ಬೇಡಿಕೆ ಸಲ್ಲಿಸಿದ್ದಾರೆ. ಸ್ವತಃ ರೈಲ್ವೆ ಇಲಾಖೆಯೇ ತಿರುವನಂತಪುರಂ-ಮಂಗಳೂರು ನಡುವಿನ ಹೊಸ ವಂದೇ ಭಾರತ್‌ ರೈಲು ಸಂಚಾರಕ್ಕೆ ಉತ್ಸುಕತೆ ತೋರಿಸುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.

ಮೊದಲ ಬಾರಿ ಕೇಸರಿ ಬಣ್ಣದ ವಂದೇ ಭಾರತ್‌ ರೈಲು ಓಡಾಟ

* ಕೇರಳಕ್ಕೆ ಮತ್ತೊಂದು ವಂದೇ ಭಾರತ್‌

ತಿರುವನಂತಪುರಂ-ಕಾಸರಗೋಡು ನಡುವಿನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಜನದಟ್ಟಣೆಯಿಂದ ಸಂಚರಿಸುತ್ತಿದೆ. ಆದರೆ ಈ ರೈಲನ್ನು ಮಂಗಳೂರಿಗೆ ವಿಸ್ತರಿಸುವ ಬಗ್ಗೆ ಕೇರಳದ ಜನಪ್ರತಿನಿಧಿಗಳು ಹಾಗೂ ರೈಲ್ವೆ ಅಧಿಕಾರಿಗಳಲ್ಲಿ ಅಷ್ಟೇನೂ ಒಲವಿಲ್ಲ. ಅಲ್ಲದೆ ರೈಲು ಪ್ರಯಾಣದ ಆದಾಯದಲ್ಲಿ ಪ್ರಸಕ್ತ ಕೇರಳ ರಾಜ್ಯ ದೇಶದಲ್ಲೇ ನಂಬರ್‌ ವನ್‌ ಸ್ಥಾನಕ್ಕೆ ನೆಗೆಯುತ್ತಿದೆ. ಕೇರಳದಲ್ಲಿ ಜನಸಾಮಾನ್ಯರು ಮಾತ್ರವಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡ ಸಂಚಾರಕ್ಕೆ ರೈಲನ್ನೇ ಹೆಚ್ಚಾಗಿ ಅವಲಂಬಿಸುತ್ತಾರೆ. ಇದರಿಂದ ಕೇರಳದಲ್ಲಿ ರೈಲು ಪ್ರಯಾಣಿಕರ ದಟ್ಟಣೆ ವಿಪರೀತವಾಗಿದ್ದು, ಹೆಚ್ಚುವರಿ ರೈಲುಗಳ ಬೇಡಿಕೆಯೂ ಸುಲಭದಲ್ಲಿ ಈಡೇರುತ್ತಿದೆ.

ವಂದೇ ಭಾರತ್‌ ರೈಲಿನಲ್ಲಿ ಮೂರು ಪಟ್ಟು ಅಧಿಕ ದರ ತೆತ್ತು ಪ್ರಯಾಣಿಸುತ್ತಿದ್ದಾರೆ. ಈ ಆದಾಯದ ಮಾನದಂಡವನ್ನು ಇರಿಸಿಕೊಂಡು ಹಾಲಿ ರೈಲನ್ನು ವಿಸ್ತರಿಸುವ ಬದಲು ಇನ್ನೊಂದು ವಂದೇ ಭಾರತ್‌ ರೈಲನ್ನು ನೇರವಾಗಿ ತಿರುವನಂತಪುರಂ-ಮಂಗಳೂರು ನಡುವೆ ಸಂಚಾರಕ್ಕೆ ಇಳಿಸುವ ಇರಾದೆಯನ್ನು ಅಧಿಕಾರಿ ವಲಯ ಹೊಂದಿದೆ ಎನ್ನುತ್ತವೆ ರೈಲ್ವೆ ಸಂಘಟನೆಗಳು.

ಲಭ್ಯ ಮಾಹಿತಿ ಪ್ರಕಾರ ಪ್ರಸ್ತಾವಿತ ವಂದೇ ಭಾರತ್‌ ಹೊಸ ರೈಲು ನಸುಕಿನ 5.20ಕ್ಕೆ ಮಂಗಳೂರಿನಿಂದ ಹೊರಟು ಮಧ್ಯಾಹ್ನ 1.30ಕ್ಕೆ ತಿರುವನಂತಪುರಂ ತಲುಪುವುದು, ಅಲ್ಲಿಂದ 2 ಗಂಟೆಗೆ ಹೊರಟು ರಾತ್ರಿ 10 ಗಂಟೆಗೆ ಮಂಗಳೂರು ತಲುಪುವಂತೆ ವೇಳಾಪಟ್ಟಿಸಿದ್ಧಪಡಿಸಲು ಚರ್ಚೆಗಳು ನಡೆಯುತ್ತಿದೆ. ಕೇರಳದ ಜನಪ್ರತಿನಿಧಿಗಳು ಈ ಬಗ್ಗೆ ಉತ್ಸುಕರಾಗಿದ್ದಾರೆ ಎಂದು ಹೇಳಲಾಗಿದೆ.

ಮಂಗಳೂರು-ಮುಂಬೈ ನಡುವೆ ಹೊಸ ರೈಲು ಯಾಕಿಲ್ಲ?

ಕರ್ನಾಟಕದಲ್ಲಿ ಮೈಸೂರು-ಚೆನ್ನೈ ಹಾಗೂ ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್‌ ಸಂಚಾರ ಇದೆ. ಆದರೆ ಮಂಗಳೂರು-ಗೋವಾ-ಮುಂಬೈ ನಡುವೆ ವಂದೇ ಭಾರತ್‌ ಇಲ್ಲವೇ ಹೊಸ ರೈಲುಗಳ ಸಂಚಾರ ಯಾಕೆ ಶುರುವಾಗುತ್ತಿಲ್ಲ ಎಂಬ ಪ್ರಶ್ನೆಗೆ ರೈಲ್ವೆ ಅಧಿಕಾರಿಗಳು ನೀಡುವ ಉತ್ತರ- ಪ್ರಯಾಣಿಕರ ಕೊರತೆ. ಹೀಗಾಗಿ ಯಾರೇ, ಎಷ್ಟುಆಗ್ರಹಿಸಿದರೂ ಈ ಮಾರ್ಗದಲ್ಲಿ ಹೊಸ ರೈಲು ಆರಂಭಿಸುವ ವಿಚಾರದಲ್ಲಿ ಪ್ರಯಾಣಿಕರ ಕೊರತೆಯನ್ನು ಮುಂದಿಟ್ಟು ಅಧಿಕಾರಿಗಳು ಪ್ರಸ್ತಾವನೆಯನ್ನೇ ಮೂಲೆಗುಂಪು ಮಾಡುತ್ತಿದ್ದಾರೆ.

ವಯಾ ಮಂಗಳೂರು ಮೂಲಕ ಕೇರಳ-ಮುಂಬೈ ನಡುವೆ ಈಗಾಗಲೇ ದಿನಂಪ್ರತಿ 36 ರೈಲುಗಳು ಸಂಚಾರ ನಡೆಸುತ್ತಿವೆ. ಮಂಗಳೂರಿನಿಂದ ಗೋವಾ ಹಾಗೂ ಮುಂಬೈಗೆ ಈ ರೈಲುಗಳಲ್ಲಿ ಪ್ರಯಾಣಿಕರ ಕೊರತೆ ಇದೆ. ಮಂಗಳೂರು-ಮಡ್ಗಾಂವ್‌ ಮೆಮು ರೈಲುಗಳಲ್ಲೂ ಪ್ರಯಾಣಿಕರು ಭರ್ತಿ ಇಲ್ಲ. ದ.ಕ., ಉಡುಪಿ ಹಾಗೂ ಉತ್ತರ ಕನ್ನಡದ ಜನತೆ ಕೇರಳದಂತೆ ಪ್ರಯಾಣಕ್ಕೆ ರೈಲನ್ನು ಅವಲಂಬಿಸುವುದು ಕಡಿಮೆ. ಗೋವಾ-ಮುಂಬೈ ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಪ್ರಯಾಣ 8 ಗಂಟೆಗಿಂತ ಅಧಿಕ ಇದೆ. ಆದರೂ ಆ ಪ್ರದೇಶಗಳು ಪ್ರಸಿದ್ಧ ಪ್ರವಾಸಿ ತಾಣಗಳಾಗಿರುವುದರಿಂದ ಪ್ರವಾಸಿಗರಿಂದ ಕೂಡ ಭರ್ತಿಯಾಗಿ ಸಂಚರಿಸುತ್ತಿದೆ. 

ಇನ್ಮುಂದೆ ನಾಲ್ಕೇ ಗಂಟೆಯಲ್ಲಿ ರೈಲಿನಲ್ಲಿ ಬೆಂಗಳೂರು - ಚೆನ್ನೈ ಆರಾಮವಾಗಿ ಪ್ರಯಾಣ ಮಾಡಿ!

ತ್ರಿವೆಂಡ್ರಂ-ಕಾಸರಗೋಡು ನಡುವಿನ ವಂದೇ ಭಾರತ್‌ ರೈಲನ್ನು ಮಂಗಳೂರಿಗೆ ವಿಸ್ತರಿಸುವ ಬಗ್ಗೆ ರೈಲ್ವೆ ಇಲಾಖೆಗೆ ಬೇಡಿಕೆ ಸಲ್ಲಿಸಿದೆ. ಆದರೆ ತ್ರಿವೆಂಡ್ರಂ-ಮಂಗಳೂರು ಹೊಸ ವಂದೇ ಭಾರತ್‌ ರೈಲು ಆರಂಭಿಸುವ ಬಗ್ಗೆ ಮಾಹಿತಿ ಇಲ್ಲ. ಮಂಗಳೂರು-ಮುಂಬೈ ನಡುವೆಯೂ ವಂದೇ ಭಾರತ್‌ ರೈಲಿಗೆ ಮನವಿ ಮಾಡಲಾಗಿದೆ.

ನಳಿನ್‌ ಕುಮಾರ್‌ ಕಟೀಲ್‌, ಸಂಸದ, ದ.ಕ.