ಸಚಿವ ಹೆಚ್.ಸಿ. ಮಹದೇವಪ್ಪನವರು ವಾಲ್ಮೀಕಿ ರಾಮಾಯಣದ ಶ್ರೀರಾಮ ಮತ್ತು ಅಯೋಧ್ಯೆಯ ಶ್ರೀರಾಮನ ನಡುವಿನ ವ್ಯತ್ಯಾಸವನ್ನು ಚರ್ಚಿಸಿದ್ದಾರೆ. ವಾಲ್ಮೀಕಿ ರಾಮನ ಸೃಷ್ಟಿಕರ್ತ ಎಂದು ಪ್ರತಿಪಾದಿಸಿದ್ದಾರೆ. ಅವರ ಹೇಳಿಕೆಗಳು ರಾಜಕೀಯ ಚರ್ಚೆಗೆ ಕಾರಣವಾಗಿವೆ.
ದಾವಣಗೆರೆ (ಫೆ.10): ಮಹರ್ಷಿ ವಾಲ್ಮೀಕಿಯ ಶ್ರೀರಾಮನೇ ಬೇರೆ ಹಾಗೂ ಅಯೋಧ್ಯೆ ಶ್ರೀರಾಮನೇ ಬೇರೆ. ವಾಲ್ಮೀಕಿ ಶ್ರೀರಾಮನ ಸೃಷ್ಟಿಕರ್ತ. ಅಯೋಧ್ಯೆಯ ಶ್ರೀರಾಮ ಮತ್ತು ವಾಲ್ಮೀಕಿಯ ರಾಮರಾಜ್ಯದ ಪರಿಕಲ್ಪನೆ ನಡುವೆ ವ್ಯತ್ಯಾಸಗಳಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಭಾನುವಾರ ನಡೆದ (ಫೆ.09) ಜರುಗಿದ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ನಮಗೆಲ್ಲಾ ವಾಲ್ಮೀಕಿಯವರ ಬಗ್ಗೆ ಗೊತ್ತೇ ಇದೆ. ಜಗತ್ತಿನ ಶ್ರೇಷ್ಠ ಕಾವ್ಯಗಳಲ್ಲಿ ಒಂದಾದ ರಾಮಾಯಣವನ್ನು ರಚಿಸಿದವರು ವಾಲ್ಮೀಕಿಯವರು. ರಾಜನಹಳ್ಳಿ ವಾಲ್ಮೀಕಿ ಜಾತ್ರೆಯು ಈ ಭಾಗದ ವಿಶಿಷ್ಟ ಜಾತ್ರೆಗಳಲ್ಲಿ ಒಂದಾಗಿದ್ದು ದಾವಣಗೆರೆ ಸೀಮೆಯ ಸಾಂಸ್ಕೃತಿಕ ಹಿರಿಮೆಯ ಸಂಕೇತವಾಗಿದೆ ಮತ್ತು ವಾಲ್ಮೀಕಿಯಂತಹ ಮೇರು ವ್ಯಕ್ತಿತ್ವದ ಕವಿಯ ಹೆಸರಲ್ಲಿ ನಾವು ಮಾಡುತ್ತಿರುವ ಈ ಜಾತ್ರೆ ಅವರಿಗೆ ನಾವು ಸಲ್ಲಿಸುವ ಗೌರವವಾಗಿದೆ.
ವಾಲ್ಮೀಕಿ ಶ್ರೀರಾಮ, ಅಯೋಧ್ಯೆ ಶ್ರೀರಾಮ ಬೇರೆ ಬೇರೆ. ವಾಲ್ಮೀಕಿಯಿಂದ ಶ್ರೀರಾಮನೋ ಅಋವಾ ಶ್ರೀರಾಮನಿಂದ ವಾಲ್ಮೀಕಿಯೋ ಎಂಬುದನ್ನು ಚಿಂತನೆ ಮಾಡುವ ಅಗತ್ಯವಿದೆ. ವಾಲ್ಮೀಕಿ ಶ್ರೀರಾಮನ ಸೃಷ್ಟಿಕರ್ತ. ಅಯೋಧ್ಯೆ ರಾಮ ಹಾಗೂ ವಾಲ್ಮೀಕಿಯ ರಾಮರಾಜ್ಯದ ಪರಿಕಲ್ಪನೆ ನಡುವೆ ವ್ಯತ್ಯಾಸಗಳಿವೆ. ರಾಮಾಯಣವನ್ನು ಓದುತ್ತಿದ್ದರೆ, ಅದರ ಒಂದೊಂದು ಮಾತಿನಲ್ಲೂ ವಾಲ್ಮೀಕಿಗಳ ವ್ಯಕ್ತಿತ್ವವೇ ಎದ್ದುಕಾಣುತ್ತದೆ. ವಾಲ್ಮೀಕಿಗಳ ವ್ಯಕ್ತಿತ್ವದಲ್ಲಿ ಮಹತ್ತರ ಬದಲಾವಣೆ ಆದದ್ದು ಅವರು ರಾಮನ ಬಗ್ಗೆ ನಾರದರು ಹೇಳಿದ ಮಾತುಗಳನ್ನು ಕೇಳಿದ ಮೇಲೆಯೇ. ಮೊದಲಿಗೆ ಅವರು ತಮ್ಮ ಮೋಕ್ಷವನ್ನು ಬಯಸಿ ಸಾಧನೆಯಲ್ಲಿ ನಿರತ ತಪಸ್ವಿಗಳಷ್ಟೇ ಆಗಿದ್ದರು. ಆದರೆ ರಾಮನ ಕಥೆಯನ್ನು ಕೇಳಿ ಅವರು ಜಗತ್ತಿನ ಸಂಕಟಕ್ಕೆ ಸ್ಪಂದಿಸಬಲ್ಲ ಕವಿಗಳೇ ಆದರು ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿಯಿಂದ ಸರ್ಕಾರಕ್ಕೆ ಮಸಿ ಬಳಿಯುವ ಕೆಲಸ: ಸಚಿವ ಮಹದೇವಪ್ಪ ಆರೋಪ
ರಾಮನು ಪಟ್ಟಾಭಿಷೇಕಕ್ಕೆ ಸಿದ್ಧನಾಗುತ್ತಿದ್ದಾನೆ. ಆದರೆ ಮುಂದೆ ಸ್ವಲ್ಪವೇ ಸಮಯದ ಅಂತರದಲ್ಲಿ ಕಾಡಿಗೆ ಹೋಗಲು ಅವನು ಸಿದ್ಧನಾಗಬೇಕಾಗುತ್ತದೆ. ಆಗ ರಾಮನ ಮುಖ ಹೇಗಿತ್ತು ಎಂಬುದನ್ನು ವಾಲ್ಮೀಕಿಗಳು ವರ್ಣಿಸುತ್ತಾರೆ: ‘ಅವನು ಪಟ್ಟಾಭಿಷೇಕಕ್ಕೆ ಸಿದ್ಧವಾಗುತ್ತಿದ್ದಾಗ ಅವನ ಮುಖ ಹೇಗಿದ್ದಿತೋ, ಈಗ ಕಾಡಿಗೆ ಹೋಗಲು ಸಿದ್ಧವಾಗಬೇಕಾದರೂ ಹಾಗೆಯೇ ಇದ್ದಿತು; ಸ್ವಲ್ಪವೂ ವ್ಯತ್ಯಾಸ ಇರಲಿಲ್ಲ. ಧರ್ಮದಲ್ಲಿ ನಿರತನಾದವನಿಗೆ ನಾಡಾದರೂ ಒಂದೇ, ಕಾಡಾದರೂ ಒಂದೇ; ಅವನಿಗೆ ಧರ್ಮಮಾರ್ಗ ಮುಖ್ಯವೇ ಹೊರತು ಸಿಂಹಾಸನ–ವನವಾಸಗಳು ಅಲ್ಲ – ಎಂಬುದನ್ನು ತುಂಬ ಅದ್ಭುತವಾಗಿ ವಾಲ್ಮೀಕಿಗಳು ಸೂಚಿಸಿದ್ದಾರೆ ಎಂದು ತಿಳಿಸಿದರು.
‘ಯಾವುದೇ ಕಾರಣಕ್ಕೂ ಅಧರ್ಮಮಾರ್ಗದಿಂದ ನಾನು ರಾಜ್ಯವನ್ನು ದಕ್ಕಿಸಿಕೊಳ್ಳಲಾರೆ’ ಎಂದು ರಾಮ ನೇರವಾಗಿಯೇ ಘೋಷಿಸುತ್ತಾನೆ ಕೂಡ. ನಮಗಿಂದು ರಾಮಾಯಣ ಮತ್ತು ವಾಲ್ಮೀಕಿ ಮಹರ್ಷಿ ಪ್ರಸ್ತುತ ಆಗಬೇಕಾದ್ದು ಈ ಕಾರಣಕ್ಕಾಗಿ ಎಂಬುದನ್ನು ನಾವು ಅರಿಯಬೇಕು. ಈ ದಿನ ರಾಮ ರಾಜಕೀಯ ಸರಕು ಆಗಿದ್ದಾನೆ. ಆದರೆ ವಾಲ್ಮೀಕಿ ಹೇಳಿದಂತೆ ನಾವು ರಾಮನನ್ನು ಅರಿತರೆ ಧರ್ಮದ ನಿಜವಾದ ಉದ್ದೇಶವೂ ನಮಗೆ ಅರ್ಥವಾಗುತ್ತದೆ ಮತ್ತು ಆ ಕಾರಣಕ್ಕಾಗಿ ನಡೆಯುತ್ತಿರುವ ಕಲಹಗಳೂ ನಿಲ್ಲುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮನುವಾದ ಮಟ್ಟಹಾಕಲು ಮತ್ತೊಂದು ಹೋರಾಟ ಅಗತ್ಯ: ಸಚಿವ ಮಹದೇವಪ್ಪ
