ವಾಲ್ಮೀಕಿ ನಿಗಮದ ಅಧಿಕಾರಿ ಡೆತ್‌ನೋಟ್‌ನಲ್ಲಿ 2 ಬಾರಿ ಸಚಿವರ ಹೆಸರು ಉಲ್ಲೇಖ; ಬಸವರಾಜ ಬೊಮ್ಮಾಯಿ
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಡೆತ್‌ನೋಟ್‌ನಲ್ಲಿ 2 ಬಾರಿ ಸಚಿವ ನಾಗೇಂದ್ರ ಅವರ ಮೌಖಿಕ ಆದೇಶದ ಬಗ್ಗೆ ಉಲ್ಲೇಖ ಮಾಡಿದ್ದು, ಕೂಡಲೇ ನಾಗೇಂದ್ರ ರಾಜೀನಾಮೆ ಕೊಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ವಿಜಯನಗರ (ಮೇ 30): ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಿರಿಯ ಅಧಿಕಾರಿಗಳು ಮಾಡಿದ 187 ಕೋಟಿ ರೂ. ಹಗರಣಕ್ಕೆ ಹೆದರಿ ನಿಷ್ಠಾವಂತ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಅಧಿಕಾರಿ ಬರೆದಿಟ್ಟ ಡೆತ್‌ನೋಟ್‌ನಲ್ಲಿ ಎರಡೆರಡು ಬಾರಿ ಸಚಿವ ನಾಗೇಂದ್ರ ಅವರ ಮೌಖಿಕ ಆದೇಶಿವಿದೆ ಎಂದು ಉಲ್ಲೇಖ ಮಾಡಿದ್ದಾರೆ. ಹೀಗಾಗಿ ಅಧಿಕಾರಿ ಸಾವಿನ ಹೊಣೆಹೊತ್ತು ಸಚಿವ ನಾಗೇಂದ್ರ ರಾಜೀನಾಮೆ ನೀಡಬೇಕು. ಜೊತೆಗೆ ಈ ಪ್ರಕರಣವನ್ನು ಸಿಐಡಿ ಬದಲು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಹೊಸಪೇಟೆಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ರೀತಿಯಲ್ಲಿ ಘಟನೆಗಳು ಆಗಿವೆ, ಆಗಿಲ್ಲಾ ಅಂತ ನಾನು ಹೇಳುವುದಿಲ್ಲ. ಆದರೆ, ಹಿಂದಿನವರು ಏನು ಪಾಲನೆ ಮಾಡಿದ್ದರು, ಅದನ್ನು ಈಗಿನ ಸರ್ಕಾರವೂ ಮಾಡಬೇಕು. ಆದರೆ, ಇದೊಂದು ಭಂಡ ಸರ್ಕಾರವಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರ ಸಾವಿನ ವಿಚಾರದಲ್ಲಿ ಈಶ್ವರಪ್ಪನವರದ್ದೇನು ಕೂಡ ತಪ್ಪಿರಲಿಲ್ಲ. ಆದರೂ, ಈಶ್ವರಪ್ಪ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಈಶ್ವರಪ್ಪ ಅವರ ವಿಚಾರದಲ್ಲಿ ವಿಪಕ್ಷನಾಯಕರಿದ್ದ ಸಿದ್ದರಾಮಯ್ಯನವರು ಮಾಡಿದ ರೋಷಾವೇಶ ಈಗ ಯಾಕೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳಿಗೆ ಮಲೆಯಾಳಿ ಚಾಲಕರು; ಕನ್ನಡಿಗರಿಗೆ ಕೈಕೊಟ್ಟ ಸರ್ಕಾರ
ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ರೋಷಾವೇಶ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರೇ ಈಗ ಸಿಎಂ ಆಗಿದ್ದಾರೆ. ಈಗ ಅವರ ಸಚಿವ ಸಂಪುಟದ ಸಚಿವರ ವ್ಯಾಪ್ತಿಯ ವಾಲ್ಮೀಕಿ ನಿಗಮದ ಹಣ ಲೂಟಿ ಆಗಿದೆ. ಒಟ್ಟಾರೆ 14 ಅಕೌಂಟ್ ಗಳ ಮೂಲಕ ಹಗಲು ದರೊಡೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧಿಕಾರಿ ಡೆತ್ ನೋಟ್ ನಲ್ಲಿ ಎರಡು ಬಾರಿ ಸಚಿವ ನಾಗೇಂದ್ರ (Minister Nagendra) ಅವರ ಮೌಖಿಕ ಆದೇಶ ಇತ್ತು ಎಂದು ಉಲ್ಲೇಖ ಮಾಡಿದ್ದಾರೆ. ಆದರೂ ಅವರಿಂದ ರಾಜೀನಾಮೆ ತೆಗೆದುಕೊಳ್ಳುವ ನೈತಿಕತೆ ಯಾಕೆ ತೋರಿಸಿಲ್ಲ. ಇದೊಂದು ಭ್ರಷ್ಟಾಚಾರ ಕೂಟದ ಸರ್ಕಾರ ಎಂದು ಆರೋಪಿಸಿದರು.
10 ಕೋಟಿ ರೂ.ಗಿಂತ ಹೆಚ್ಚು ಅವ್ಯವಹಾರ ಕೇಸ್ ಸಿಬಿಐ ತನಿಖೆಗೆ ಕೊಡಬೇಕು: ಕಾಂಗ್ರೆಸ್‌ನವರು ವಾಲ್ಮೀಕಿ ನಿಗಮದ ಪ್ರಕರಣಕ್ಕೂ, ಈಶ್ವರಪ್ಪನವರ ಪ್ರಕರಣಕ್ಕೂ ಹೊಂದಾಣಿಕೆ ಮಾಡುತ್ತಿರುವುದಕ್ಕೆನಾಚಿಕೆಯಾಗಬೇಕು. ಇದು ಬಹುಕೋಟಿ ಹಗರಣವಾಗಿದ್ದು, ಒಂದೇ ದಿನದಲ್ಲಿ 14 ಅಕೌಂಟ್ ಗೆ ಮಾಯ ಆಗುತ್ತದೆ. ಅಂದರೆ ಸಂಶಯಾಸ್ಪದ ಅಕೌಂಟ್ ಗಳಿಗೆ ಹೋಗಿದೆ. ಇದು ಸಿಬಿಐಗೆ ಹೋಗುವಂತಹ ಮುಖ್ಯವಾದ ಕೇಸ್. ಒಂದು ಬ್ಯಾಂಕ್ ಮುಖಾಂತರ ಬೇರೆ ರಾಜ್ಯಕ್ಕೆ ಹಣ ಹೋಗಿದೆ. ರಾಜ್ಯ ಸರ್ಕಾರದಲ್ಲಿ 10 ಕೋಟಿ ರೂ.ಗಿಂತ ಹೆಚ್ಚಿನ ಹಣದ ಅವ್ಯವಹಾರ ಆಗಿದ್ದರೆ ಅಂತ ಪ್ರಕರಣವನ್ನು ಸಿಬಿಐ ತನಿಖೆಗೆ ಹೋಗಬೇಕು ಅಂತ ಇದೆ. ಆದರೆ, ಇವರು ಯಾಕೆ ಸಿಬಿಐಗೆ ಕೊಡುತ್ತಿಲ್ಲ. ಪ್ರಕರಣ ಮುಚ್ಚಿ ಹಾಕಲೆಂದೇ ಸಿಒಡಿ ತನಿಖೆ ಮಾಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿಬಿಐ ತನಿಖೆಯಾಗಬೇಕು: ಚುನಾವಣೆ ಸಮಯದಲ್ಲಿ ಹೈದ್ರಾಬಾದಿನ ಒಂದು ಸಹಕಾರಿ ಬ್ಯಾಂಕ್ ಗೆ ಹಣ ವರ್ಗಾವಣೆ ಆಗುತ್ತದೆ ಅಂದರೆ, ರಾಜಕೀಯದಿಂದ ಚುನಾವಣೆಗಾಗಿ ನಡೆದಿರುವ ದರೋಡೆ ಪ್ರಕರಣ ಇದು. ಸರ್ಕಾರ ಏನೇ ಸಮಾಜಾಯಿಸಿ ಕೊಟ್ಟರೂ ಕೂಡ ಡಿಜಿಟಲ್ ಟ್ರಾಕ್, ಡಿಜಿಟಲ್ ಎವಿಡೆನ್ಸ್ ಇರುವ ಕಾರಣ ಸಿಒಡಿಯಿಂದ ತನಿಖೆಯಾಗುವ ಪ್ರಕರಣ ಅಲ್ಲ. ಈ ಪ್ರಕರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ಕೊಡಬೇಕು, ಸಿಬಿಐ ತನಿಖೆಗೆ ಒಳಪಡಿಸಿ ಎಲ್ಲಾ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಹಣ ವಾಪಾಸ್ ಬರಬೇಕು. ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಿದರೆ ಹಣ ವಾಪಾಸ್ ತರಬಹುದು. ಈ ಹಣ ಚುನಾವಣೆಗೆ ಬಳಕೆಯಾಗಿದ್ದರೆ ಏನು ಮಾಡಲು ಆಗುವುದಿಲ್ಲ. ಈ ಪ್ರಕರಣದಲ್ಲಿ ಮನಿ ಟ್ರೈಲ್ ಫಾಲೋ ಮಾಡಬೇಕು ಎಂದು ಹೇಳಿದರು.
ಮೋದಿ ಮತ್ತೆ ಪ್ರಧಾನಿಯಾಗಲೆಂದು ಬಾಗಲಕೋಟೆಯಿಂದ ಅಯೋಧ್ಯೆಗೆ ಪಾದಯಾತ್ರೆ ಮಾಡಿದ ಕನ್ನಡಿಗ
ಕಾಂಗ್ರೆಸ್ ಸರ್ಕಾರ ಎಸ್ ಸಿ, ಎಸ್ ಟಿ ಸಮಾಜವನ್ನು ಓಟ್ ಬ್ಯಾಂಕ್ ಆಗಿ ಪರಿವರ್ತನೆ ಮಾಡುವುದು ಬಿಟ್ಟರೆ ಬೇರೆನೂ ಮಾಡುತ್ತಿಲ್ಲ. ಎಸ್ಸಿ, ಎಸ್ಟಿ ಸಮುದಾಯದವರು ಮೀಸಲಾತಿ ಹೋರಾಟ ಮಾಡಿದ್ದರೂ ಹೆಚ್ಚಳ ಮಾಡಲಿಲ್ಲ. ನಾವು ಮೀಸಲಾತಿ ಹೆಚ್ಚಳ ಮಾಡಿದ್ದೇವು. ಇವರು ಅಧಿಕಾರಕ್ಕೆ ಬಂದ ಮೇಲೆ ಎಸ್ಸಿಪಿ, ಟಿಎಸ್ಪಿ ಹಣ ಕಡಿತವಾಗಿದೆ. ಎಸ್ಸಿ ಎಸ್ಟಿ ಜನಾಂಗಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.