* ರಾಜ್ಯದಲ್ಲಿ ಮತ್ತೆ ವಿವಿಧ ಸಮುದಾಯಗಳ ಮೀಸಲಾತಿ ಸದ್ದು * ಅ.1ರಿಂದ ಧರಣಿ ಸತ್ಯಾಗ್ರಹ ಎಚ್ಚರಿಕೆ ಕೊಟ್ಟ ಪಂಚಮಸಾಲಿ* ಇದೀಗ ವಾಲ್ಮೀಕಿ ಸಮುದಾಯದಿಂದ ಮೀಸಲಾತಿ ಹೆಚ್ಚಳಕ್ಕೆ ಮನವಿ

ಬೆಂಗಳೂರು, (ಆ.18): ರಾಜ್ಯದಲ್ಲಿ ಮತ್ತೆ ವಿವಿಧ ಸಮುದಾಯಗಳ ಮೀಸಲಾತಿ ಸದ್ದು ಕೇಳಿಬರುತ್ತಿದೆ. ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಮುಂದೆ ದೊಡ್ಡ ಸವಾಲುಗಳೇ ಎದುರಾಗಲಿವೆ.

ಹೌದು...ಪಂಚಮಸಾಲಿ ಸಮುದಾಯಕ್ಕೆ ಸೆ.15ರ ಒಳಗೆ 2A ಮೀಸಲಾತಿ ಬೇಡಿಕೆ ಈಡೇರದಿದ್ದರೆ ಅ.1ರಿಂದ ಧರಣಿ ಸತ್ಯಾಗ್ರಹ ಮತ್ತೆ ಮುಂದುವರಿಯಲಿದೆ ಎಂದು ಸರ್ಕಾರಕ್ಕೆ ಈಗಾಗಲೇ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ.

ಇದರ ಬೆನ್ನಲ್ಲೇ ಇದೀಗ ವಾಲ್ಮೀಕಿ ಸಮುದಾಯವೂ ಸಹ ತಮ್ಮ ಮೀಸಲಾತಿಯನ್ನು 7.5ಗೆ ಹೆಚ್ಚಳ ಮಾಡುವಂತೆ ಧ್ವನಿ ಎತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ವಾಲ್ಮೀಕಿ ಸಮುದಾಯದ ನಿಯೋಗ ಸಿಎಂ ಭೇಟಿ ಮಾಡಿದೆ.

ಸೆ.15ರೊಳಗೆ ಮೀಸಲಾತಿ ಕಲ್ಪಿಸದಿದ್ದಲ್ಲಿ ಅ.1ರಿಂದ ಮತ್ತೆ ಪಂಚಮಸಾಲಿ ಹೋರಾಟ

ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿಗಳ ನೇತೃತ್ವದ ನಿಯೋಗ ಇಂದು (ಆ.18) ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿತು.

ಈ ವೇಳೆ ನಿಯೋಗ 7.5ರಷ್ಟು ಮೀಸಲಾತಿ ಹೆಚ್ಚಿಸುವ ಸಂಬಂಧ ಸಿಎಂಗೆ ಮನವಿ ಮಾಡಿದೆ. ಈ ನಿಯೋಗದಲ್ಲಿ ಸಮುದಾಯದ ಜನಪ್ರತಿನಿಧಿ ಇದ್ದರು.

ಈ ಹಿಂದೆ ಯಡಿಯುರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಪಂಚಮಸಾಲಿ, ಕುರುಬ ಹಾಗೂ ವಾಲ್ಮೀಕಿ ಸಮುದಾಯಗಳು ಮೀಸಲಾತಿಗಾಗಿ ಬೃಹತ್ ಪ್ರತಿಭಟನೆಗಳನ್ನು ಮಾಡಿದ್ದವು. ಆಗ ಬಿಎಸ್‌ವೈ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. 

ಆದ್ರೆ, ಇದೀಗ ಬಿಎಸ್‌ ಸಿಎಂ ಕುರ್ಚಿಯಿಂದ ಕೆಳಗಿಳಿದಿದ್ದು, ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಮೀಸಲಾತಿ ಕಂಟಕ ಎದುರಾಗಿದೆ. ಇದರಿಂದ ಬೊಮ್ಮಾಯಿ ಯಾವ ರೀತಿ ಪಾರಾಗುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.